Angry Rantman: ಆಂಗ್ರಿ ರಾಂಟ್‌ಮ್ಯಾನ್ ಎಂದೇ ಖ್ಯಾತರಾಗಿದ್ದ ಯೂಟ್ಯೂಬರ್ ಅಬ್ರದೀಪ್ ಹಠಾತ್ ನಿಧನ
ಸಾಮಾಜಿಕ ಮಾಧ್ಯಮಗಳಲ್ಲಿ ಆಂಗ್ರಿ ರಾಂಟ್‌ಮಾನ್ ಎಂದೇ ಜನಪ್ರಿಯವಾಗಿದ್ದ ಯೂಟ್ಯೂಬರ್ ಅಬ್ರದೀಪ್ ಸಹಾ ಅವರು 27ನೇ ವಯಸ್ಸಿಗೆ ಸಾವನ್ನಪ್ಪಿದ್ದಾರೆ. ಅವರ ಹಠಾತ್ ಸಾವು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ದಿಗ್ಭ್ರಾಂತರನ್ನಾಗಿಸಿದೆ.
ಏಪ್ರಿಲ್ 16ರ ತಡರಾತ್ರಿ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅವರ ಕುಟುಂಬ ಸದಸ್ಯರು, ಬಂಧುಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅವರ ಹಿಂಬಾಲಕರು ಈ ಸುದ್ದಿಯಿಂದ ಶಾಕ್‌ಗೆ ಒಳಗಾಗಿದ್ದಾರೆ.

ಅಬ್ರದೀಪ್ ಅವರು ಆಗಸ್ಟ್ 18, 2017ರಂದು ಯೂಟ್ಯೂಬ್ ಚಾನೆಲ್ ಆರಂಭಿಸಿದರು. ಅಪ್‌ಲೋಡ್ ಮಾಡಿದ ಮೊದಲ ವಿಡಿಯೋದಲ್ಲಿ "ನಾನು ಅನ್ನಾಬೆಲ್ಲೆ ಚಲನಚಿತ್ರವನ್ನು ಏಕೆ ನೋಡುವುದಿಲ್ಲ" ಎಂದು ವಿಡಿಯೋ ಮಾಡಿದ್ದರು. ದಿ ಕಾಂಜ್ಯೂರಿಂಗ್ ನೋಡಿದ ಬಳಿಕ ಹಾರರ್ ಸಿನಿಮಾಗಳನ್ನು ನೋಡಲು ನನಗೆ ಭಯವಾಗುತ್ತದೆ ಎಂದು ಹೇಳಿದ್ದರು.
ಆಂಗ್ರಿ ರಾಂಟ್‌ಮ್ಯಾನ್ ಕಳೆದ ತಿಂಗಳು ಪ್ರಮುಖ ಆಪರೇಷನ್ ಮಾಡಿದ್ದರಿಂದ ಆಸ್ಪತ್ರೆಯಲ್ಲಿದ್ದಾರೆ ಎಂದು ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಇತ್ತೀಚಿನ ಪೋಸ್ಟ್‌ಗಳು ತಿಳಿಸಿವೆ. ಮೂರು ದಿನಗಳ ಹಿಂದೆ ಮತ್ತೊಂದು ಪೋಸ್ಟ್ ಮಾಡಲಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿ ಎಂದು ಸೌಮ್ಯದೀಪ್ ಸಹಾ ಮಾಹಿತಿ ಹಂಚಿಕೊಂಡಿದ್ದರು.
ಹೆಸರು ತಂದುಕೊಟ್ಟ ಕೆಜಿಎಫ್!
2018ರ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಕೆಜಿಎಫ್ ಸಿನಿಮಾ ವಿಮರ್ಶೆ ಮಾಡುವ ಮೂಲಕ ಅಬ್ರದೀಪ್ ಸಹಾ ಭಾರಿ ಹೆಸರು ಮಾಡಿದ್ದರು. ಕೆಜಿಎಫ್ ಸಿನಿಮಾವನ್ನು ಹೊಗಳಿದ್ದ ಅವರು, ಬಾಲಿವುಡ್ ಸಿನಿಮಾರಂಗವನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಿನಿಮಾ ಹೇಗೆ ಮಾಡಬೇಕು ಎಂದು ದಕ್ಷಿಣ ಭಾರತೀಯ ಚಿತ್ರರಂಗ ನೋಡಿ ಕಲಿಯಿರಿ ಎಂದು ಹೇಳಿದ್ದರು.
ಅವರ ವಿಡಿಯೋ ವ್ಯಾಪಕ ವೈರಲ್ ಆಗಿತ್ತು, ಮಾಧ್ಯಮಗಳಲ್ಲಿ ಕೂಡ ಅವರ ಬಗ್ಗೆ ವರದಿಗಳು ಬಂದಿದ್ದವು, ಅದಾದ ಬಳಿಕ ಅವರನ್ನು ಆಂಗ್ರಿ ರಾಂಟ್‌ಮಾನ್ ಎಂದೇ ಎಲ್ಲರೂ ಕರೆಯಲು ಆರಂಭಿಸಿದರು.
ಪ್ರಸ್ತುತ ಆಂಗ್ರಿ ರಾಂಟ್‌ಮಾನ್ ಯೂಟ್ಯೂಬ್ ಚಾನೆಲ್‌ನಲ್ಲಿ 4.80 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಸಿನಿಮಾ ಬಗ್ಗೆ ವಿಮರ್ಶೆಗಳನ್ನು ಮಾಡುತ್ತಲೇ ಅವರು ಜನಪ್ರಿಯತೆ ಹೆಚ್ಚಿಸಿಕೊಂಡಿದ್ದರು.
ಜನಪ್ರಿಯ ಯೂಟ್ಯೂಬರ್ ಸಾವಿನ ಸುದ್ದಿ ತಿಳಿದ ತಕ್ಷಣ, ಸಾಮಾಜಿಕ ಮಾಧ್ಯಮ ಬಳಕೆದಾರರು ದಿಗ್ಭ್ರಾಂತರಾಗಿದ್ದಾರೆ. ಎಕ್ಸ್‌ನಲ್ಲಿ ಅವರಿಗೆ ಸಾವಿರಾರು ಮಂದಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಸಾವಿನ ಸುದ್ದಿಗೆ ಶಾಕ್‌ನಿಂದ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications