ಯುಟ್ಯೂಬ್ ವಿಡಿಯೋ ನೋಡಿ ಎಟಿಎಂ ದರೋಡೆ ಮಾಡಿದ ಕಿಲಾಡಿ: ಸಿಕ್ಕಿಬಿದ್ದಿದ್ದೇ ರೋಚಕ
ರಾಂಚಿ, ಡಿಸೆಂಬರ್ 27: ಯೂಟ್ಯೂಬ್‌ನಲ್ಲಿರುವ ವಿಡಿಯೋಗಳನ್ನು ನೋಡಿಕೊಂಡು ಎಟಿಎಂನಿಂದ ಹಣ ದರೋಡೆ ಮಾಡಲು ಹೋದ ಬಿಹಾರದ ಯುವಕ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಸಂಜೀವ್ ಕುಮಾರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಸುಲಭವಾಗಿ ಮತ್ತು ಬೇಗ ಹಣ ಮಾಡಬೇಕು ಎಂದು ನಿರ್ಧರಿಸಿದ ಆರೋಪಿ ಸಂಜೀವ್ ಕುಮಾರ್ ಅವನ ಸ್ನೇಹಿತನ ಜೊತೆ ಸೇರಿ ಯೂಟ್ಯೂಬ್‌ನಲ್ಲಿ ಲಭ್ಯವಿರುವ ವಿಡಿಯೋಗಳನ್ನು ನೋಡಿಕೊಂಡು ಎಟಿಂಎಂ ದರೋಡೆಗೆ ಮುಂದಾಗಿದ್ದ ಎನ್ನಲಾಗಿದೆ.

ಬಿಹಾರ ಮೂಲದವನಾದ ಸಂಜೀವ್ ಕುಮಾರ್ ಇನ್ನೊಬ್ಬ ಯುವಕ ಸಂಜಯ್ ಕುಮಾರ್ ಸಿಂಗ್ ಜೊತೆಗೆ ಸ್ನೇಹ ಬೆಳೆಸಿದ್ದಾನೆ. ಇಬ್ಬರೂ ಸೇರಿ ಸುಲಭವಾಗಿ ಹಾಗೂ ವೇಗವಾಗಿ ಹಣ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಹೀಗಾಗಿ ಅನೇಕ ಅಕ್ರಮ ಮಾರ್ಗಗಳ ಬಗ್ಗೆ ಯೋಚನೆ ಮಾಡಿದ್ದಾರೆ. ಸುಲಭವಾಗಿ ಹಣ ಮಾಡಲು ಐಷಾರಾಮಿ ಜೀವನ ನಡೆಸಲು ವಂಚನೆಯ ಮಾರ್ಗವನ್ನು ಇಬ್ಬರು ಆಯ್ಕೆ ಮಾಡಿದ್ದಾರೆ.
ಈ ಬಗ್ಗೆ ಕೆಲ ಸ್ನೇಹಿತರ ಜೊತೆಗೆ ಚರ್ಚಿಸಿದಾಗ ಯೂಟ್ಯೂಬ್‌ನಲ್ಲಿರುವ ವಿಡಿಯೋಗಳನ್ನು ನೋಡುವಂತೆ ಸಲಹೆ ಕೊಟ್ಟಿದ್ದಾರೆ. ಎಟಿಎಂ ವಂಚನೆ ದೆಹಲಿ ಶಾಟ್ಸ್ ಎನ್ನುವ ವಿಡಿಯೋದಲ್ಲಿ ಎಟಿಎಂ ದರೋಡೆ ಬಗ್ಗೆ ವಿವರಿಸಲಾಗಿತ್ತು. ಇದರಿಂದ ದರೋಡೆ ಮಾರ್ಗವನ್ನು ಕಲಿತ ಆರೋಪಿಗಳು, ವಿಡಿಯೋದಲ್ಲಿ ವಿವರಿಸಿದಂತೆ ದರೋಡೆಗೆ ಬೇಕಾದ ಉಪಕರಣಗಳು ಯಶಸ್ವಿಯಾಗಿದ್ದಾರೆ. ಪೊಲೀಸರ ಕೈಗೆ ಸಿಕ್ಕಿ ಬೀಳುವುದಿಲ್ಲ ಎಂದುಕೊಂಡ ಆರೋಪಿಗಳು ಯೂಟ್ಯೂಬ್‌ನಿಂದ ಕಲಿತ ಕಳ್ಳತನ ಮಾರ್ಗವನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದ್ದಾರೆ.
ಪೊಲೀಸರ ಪ್ರಕಾರ ಆರೋಪಿಗಳು ಈಗಾಗಲೇ ಕೊಡರ್ಮಾದಲ್ಲಿ ಒಂದು ಎಟಿಎಂ ದರೋಡೆ ಮಾಡಿದ್ದಾರೆ. ಹಾಗೂ ಜಾರ್ಖಂಡ್‌ನ ಗಿರಿಧ್‌ನಲ್ಲಿ ಎರಡನೇ ಬಾರಿಗೆ ದರೋಡೆ ಮಾಡಲು ಯತ್ನಿಸಿ ಜನರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳ ಬಳಿಯಿಂದ ಎಟಿಎಂ ದರೋಡೆಗೆ ಬಳಸಿದ ಕ್ಲಿಪ್ ತರಹದ ಉಪಕರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕ್ಲಿಪ್‌ನ ವಿಶೇಷತೆಯೆಂದರೆ ಎಟಿಎಂ ಯಂತ್ರದಲ್ಲಿ ಯಾವುದೇ ಕಾರ್ಡ್ ಅನ್ನು ಸ್ವೈಪ್ ಮಾಡದೆಯೇ ಈ ಕ್ಲಿಪ್ ಬಳಸಿ ಹಣ ಪಡೆಯಬಹುದಾಗಿದೆ.

ಆರೋಪಿಗಳು ಸಿಕ್ಕಿಬಿದ್ದಿದ್ದೇ ರೋಚಕ
ವ್ಯಕ್ತಿಯೊಬ್ಬರು ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ಹಣ ಡ್ರಾ ಮಾಡಲು ಹೋಗಿದ್ದು, ತಮ್ಮ ಖಾತೆಯಿಂದ 10,000 ರೂ.ಗಳನ್ನು ಡ್ರಾ ಮಾಡಿದ್ದಾರೆ. ಆದರೆ ಅವರ ಖಾತೆಯಿಂದ ಹಣ ಡೆಬಿಟ್ ಆಗಿದೆ ಎಂಬ ಸಂದೇಶ ಬಂದಿದ್ದು, ಹಣ ಮಾತ್ರ ಎಟಿಎಂ ಯಂತ್ರದಿಂದ ಹೊರ ಬಂದಿಲ್ಲ. ಈ ವೇಳೆ ಆ ವ್ಯಕ್ತಿ ಜೊತೆಯಲ್ಲಿದ್ದ ಗೆಳೆಯನನ್ನು ಈ ಎಟಿಎಂ ಬಳಿ ಬಿಟ್ಟು ಎಟಿಎಂ ಕೆಟ್ಟಿದೆ ಎಂದು ಭಾವಿಸಿ ಮತ್ತೊಂದು ಎಟಿಎಂಗೆ ಹಣ ತೆಗೆದುಕೊಳ್ಳಲು ಹೋಗಿದ್ದಾರೆ.
ಈ ವೇಳೆ ಎಟಿಎಂಗೆ ಬಂದ ಆರೋಪಿಗಳು ಎಟಿಎಂನ ನಗದು ಸ್ಲಾಟ್‌ನಿಂದ ತಮ್ಮ ಬಳಿಯಿದ್ದ ಕ್ಲಿಪ್ ಬಳಸಿ ಹಣ ತೆಗೆಯಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ವ್ಯಕ್ತಿ ಎಟಿಎಂ ಅಲಾರಾಂ ಆನ್ ಮಾಡಿದ್ದಾರೆ. ಆರೋಪಿಗಳು ಸ್ಥಳದಿಂದ ಓಡಿಹೋಗಲು ಯತ್ನಿಸಿದ್ದು, ಸ್ಥಳದಲ್ಲಿದ್ದ ಜನರು ಒಬ್ಬ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಓರ್ವ ಆರೋಪಿಯಲ್ಲಿ ಪೊಲೀಸರು ಬಂಧಿಸಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ.
ಇನ್ನು ಈ ಪ್ರಕರಣದ ನಂತರ ಜಾರ್ಖಂಡ್ ಸಿಐಡಿ ಎಸ್‌ಪಿ ದೀಪಕ್ ಕುಮಾರ್ ಶರ್ಮಾ, ಯೂಟ್ಯೂಬ್ ಮತ್ತು ಗೂಗಲ್‌ಗೆ ಪತ್ರ ಬರೆದಿದ್ದಾರೆ. ಯುವಕರಲ್ಲಿ ಅಪರಾಧ ಮನೋಭಾವವನ್ನು ಹೆಚ್ಚಿಸುವಂತಹ ವಿಡಿಯೋಗಳನ್ನು ಇಂಟರ್ನೆಟ್‌ನಿಂದ ತೆಗೆದು ಹಾಕಿ ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ಅಂತಹ ವಿಡಿಯೋಗಳನ್ನು ತೆಗೆದು ಹಾಕುವಲ್ಲಿ ವಿಫಲವಾದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications