ರೈಲು ನಿಲ್ದಾಣಕ್ಕೆ 15-20 ನಿಮಿಷ ಮುಂಚೆಯೇ ಇರಬೇಕು, ಏಕೆ ಗೊತ್ತಾ?
ಹೇಗೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಇಂತಿಷ್ಟೇ ಸಮಯಕ್ಕೆ ಮುಂಚೆ ಬಂದು, ಸುರಕ್ಷತಾ ತಪಾಸಣೆ ಪೂರ್ಣಗೊಳಿಸಬೇಕು ಎಂಬ ನಿಯಮ ಇದೆಯೋ, ಅದೇ ರೀತಿ ರೈಲುಗಳು ಹೊರಡುವ ಹದಿನೈದು-ಇಪ್ಪತ್ತು ನಿಮಿಷಕ್ಕೆ ಮುಂಚಿತವಾಗಿ ಎಲ್ಲ ಪ್ರಯಾಣಿಕರು ತಪಾಸಣೆ ಪೂರ್ಣಗೊಳಿಸಿರಬೇಕು ಎಂಬ ಚಿಂತನೆಯನ್ನು ರೈಲ್ವೆ ಇಲಾಖೆ ನಡೆಸಿದೆ.
ಅತ್ಯುತ್ತಮ ತಂತ್ರಜ್ಞಾನದ ನೆರವಿನಿಂದ ಭದ್ರತೆಗೆ ಯೋಜನೆ ರೂಪಿಸಲಾಗುತ್ತಿದ್ದು, ಕುಂಭ ಮೇಳ ನಡೆಯುತ್ತಿರುವ ಅಲಹಾಬಾದ್ ನಲ್ಲಿ ಇದನ್ನು ಜಾರಿಗೆ ತರುವ ಸಾಧ್ಯತೆ ಇದೆ. ಇನ್ನು ಕರ್ನಾಟಕದ ಹುಬ್ಬಳಿ ರೈಲು ನಿಲ್ದಾಣದಲ್ಲಿ ಈ ನಿಯಮ ಜಾರಿಗೆ ಬರಲಿದೆ. ಇದೇ ರೀತಿ ಇನ್ನೂ ಇನ್ನೂರಾ ಎರಡು ರೈಲು ನಿಲ್ದಾಣದಲ್ಲಿ ಈ ನಿಯಮ ಜಾರಿಗೆ ತರಲು ಸಿದ್ಧತೆ ನಡೆದಿದೆ ಎಂದು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನ ಡಿಜಿ ಅರುಣ್ ಕುಮಾರ್ ಹೇಳಿದ್ದಾರೆ.

ಪ್ರತಿ ಪ್ರವೇಶದಲ್ಲಿ ಭದ್ರತಾ ಪರೀಕ್ಷೆ ನಡೆಯಲಿದೆ. ವಿಮಾನ ನಿಲ್ದಾಣಕ್ಕೆ ಬರುವಂತೆ ಒಂದು ಗಂಟೆ ಮುಂಚಿತವಾಗಿ ಬರುವ ಅಗತ್ಯವಿಲ್ಲ. ರೈಲು ಹೊರಡುವ ಹದಿನೈದಿಪ್ಪತ್ತು ನಿಮಿಷ ಬಂದರೆ ಸಾಕು. ಏಕೆಂದರೆ ಭದ್ರತಾ ಪರೀಕ್ಷೆಗಳ ಕಾರಣಕ್ಕೆ ರೈಲು ತಪ್ಪಿಸಿಕೊಳ್ಳುವಂತಾಗಬಾರದು ಎಂದು ಅವರು ತಿಳಿಸಿದ್ದಾರೆ.
ಸದ್ಯಕ್ಕಂತೂ ಸಿಬ್ಬಂದಿಯ ಸಂಖ್ಯೆ ಹೆಚ್ಚಿಸಬೇಕಾಗುತ್ತದೆ. ಆದರೆ ಈ ಪ್ರಕಿಯೆಗೆ ತಂತ್ರಜ್ಞಾನವನ್ನು ಕಂಡುಹಿಡಿದರೆ ಸಿಬ್ಬಂದಿಯ ಅಗತ್ಯ ಕಡಿಮೆ ಆಗಬಹುದು.












Click it and Unblock the Notifications