Senior Officer Rape Case: ಹದಿಹರೆಯದವರ ಮೇಲೆ ಪತಿ ಅತ್ಯಾಚಾರ, ಗರ್ಭಪಾತಕ್ಕೆ ಪತ್ನಿ ಸಹಾಯ..!
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ಮತ್ತು ಅವರ ಪತ್ನಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ತಮ್ಮ ಸ್ನೇಹಿತನ 14 ವರ್ಷದ ಮಗಳ ಮೇಲೆ (ಈಗ 17 ವರ್ಷ) ತಿಂಗಳುಗಳ ಕಾಲ ಅತ್ಯಾಚಾರವೆಸಗಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.
ಹೆಂಡತಿ ಗರ್ಭಪಾತದ ಮಾತ್ರೆಗಳನ್ನು ಕೊಡುತ್ತಿದ್ದಳು ಎಂದು ತಿಳಿದು ಬಂದಿದೆ. ಘಟನೆಯ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಆರೋಪಿ ಹಿರಿಯ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ. ಸಂತ್ರಸ್ತೆ ದೆಹಲಿಯಲ್ಲಿ 12 ನೇ ತರಗತಿಯ ವಿದ್ಯಾರ್ಥಿಯಾಗಿದ್ದು ಅಕ್ಟೋಬರ್ 1, 2020 ರಂದು ತನ್ನ ಮರಣ ಹೊಂದಿದ ತಂದೆಯ ಸ್ನೇಹಿತ ಪ್ರೇಮೋದಯ್ ಖಾಖಾ ಮತ್ತು ಅವನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು.

ಪ್ರೇಮೋದಯ್ ಖಾಖಾ ಅವರು ಡಬ್ಲ್ಯುಸಿಡಿ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿದ್ದಾರೆ. ಈತ ಅವಳ ರಕ್ಷಕನಾಗಿದ್ದನು. ಹುಡುಗಿ ಅವನನ್ನು 'ಮಾಮಾ' (ತಾಯಿಯ ಚಿಕ್ಕಪ್ಪ) ಎಂದು ಕರೆಯುತ್ತಿದ್ದಳು. ಆರೋಪಿಯು ಬಾಲಕಿ 14 ವರ್ಷದವಳಾಗಿದ್ದಾಗ ನವೆಂಬರ್ 2020 ಮತ್ತು ಜನವರಿ 2021ರ ನಡುವೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಲೈಂಗಿಕ ಅಪರಾಧಗಳಿಂದಾಗಿ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಅತ್ಯಾಚಾರದ ಆರೋಪದ ಮೇಲೆ ಆರೋಪಿ ಮತ್ತು ಆತನ ಪತ್ನಿ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಗರ್ಭಪಾತಕ್ಕೆ ಔಷಧಿ ನೀಡಿದ ಆರೋಪವನ್ನು ಪತ್ನಿ ಮೇಲೆ ಹೊರಿಸಲಾಗಿದೆ.
ಡಿಸಿಪಿ (ಉತ್ತರ) ಸಾಗರ್ ಸಿಂಗ್ ಹೇಳಿಕೆ ಪ್ರಕಾರ, ಸಂತ್ರೆಸ್ತೆಯ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ಲೈಂಗಿಕ, ದೈಹಿಕ ಕಿರುಕುಳ ಮತ್ತು ಪದೇ ಪದೇ ಅತ್ಯಾಚಾರವೆಸಗಿದ ತಂದೆಯ ಸ್ನೇಹಿತನ ಆರೈಕೆ ಮತ್ತು ಪಾಲನೆಯಲ್ಲಿ ಸಂತ್ರಸ್ತೆ ವಾಸಿಸುತ್ತಿದ್ದಳು. ಸಂತ್ರಸ್ತೆ ಅನಾರೋಗ್ಯದಿಂದ ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾಗ ಘಟನೆ ಬೆಳಕೆಗೆ ಬಂದಿದೆ. ವ್ಯಾಪಕವಾದ ಸಮಾಲೋಚನೆಯ ನಂತರ ಬಾಲಕಿ ಲೈಂಗಿಕ ದೌರ್ಜನ್ಯದ ಬಗ್ಗೆ ವೈದ್ಯರಿಗೆ ಹೇಳಿಕೊಂಡಿದ್ದಾಳೆ.
''ನ್ಯಾಯಾಧೀಶರ ಮುಂದೆ ನ್ಯಾಯಾಂಗ ಹೇಳಿಕೆಯನ್ನು ದಾಖಲಿಸಿದ ನಂತರ ವಿವರಗಳನ್ನು ಬಹಿರಂಗಪಡಿಸಲಾಗುವುದು. ಸಂತ್ರಸ್ತೆ ಇನ್ನೂ ಚೇತರಿಸಿಕೊಳ್ಳುತ್ತಿದ್ದು, ಆರೈಕೆಯಲ್ಲಿದ್ದಾರೆ. ಆಕೆ ಅಪ್ರಾಪ್ತ ವಯಸ್ಸಿನವಳು ಮತ್ತು ವಿದ್ಯಾರ್ಥಿನಿಯಾಗಿದ್ದಾಳೆ'' ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಕೆಗೆ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಆರೋಪಿ ವಾದಿಸಿದ್ದಾನೆ. ''ಎಫ್‌ಐಆರ್ ದಾಖಲಿಸಿದ ನಂತರ, ನಾವು ಮ್ಯಾಜಿಸ್ಟ್ರೇಟ್ ಮುಂದೆ ಬಾಲಕಿಯ ಹೇಳಿಕೆಯನ್ನು ದಾಖಲಿಸಲು ಎರಡನೇ ದಿನದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ. ವೈದ್ಯರು ಆಕೆಗೆ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬ ಆರೋಪಿ ಹೇಳಿಕೆಯನ್ನು ನಿರಾಕರಿಸಿದರು" ಎಂದು ಡಿಸಿಪಿ ಸಿಂಗ್ ಹೇಳಿದರು.
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್, ಪ್ರಕರಣದಲ್ಲಿ "ನಿಧಾನ ಕ್ರಮ" ವನ್ನು ಟೀಕಿಸಿದ್ದಾರೆ, ಪೊಲೀಸರು ಇನ್ನೂ ಆರೋಪಿಗಳನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
"ದೆಹಲಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಉಪನಿರ್ದೇಶಕ ಹುದ್ದೆಯನ್ನು ಹೊಂದಿರುವ ಸರ್ಕಾರಿ ಅಧಿಕಾರಿಯೊಬ್ಬರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿದ್ದಾರೆ. ಪೊಲೀಸರು ಇನ್ನೂ ಆತನನ್ನು ಬಂಧಿಸಿಲ್ಲ. ಹೆಣ್ಣು ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸಬೇಕಿದ್ದ ಪೊಲೀಸರು ಆರೋಪಿಯನ್ನು ಬಿಟ್ಟರೆ, ಹುಡುಗಿಯರು ಎಲ್ಲಿಗೆ ಹೋಗಬೇಕು? ಶೀಘ್ರದಲ್ಲೇ ಬಂಧನ ಆಗಬೇಕು!'' ಎಂದು ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications