ಅವಧಿಗೂ ಮುಂಚೆಯೇ ನಡೆಯಬಹುದೇ ಲೋಕಸಭೆ ಚುನಾವಣೆ? ಏನೀ ಲೆಕ್ಕಾಚಾರ
ಇಡೀ ದೇಶದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಒಟ್ಟಿಗೆ ಮಾಡಬೇಕು ಎಂಬುದು ಕೇಂದ್ರ ಸರಕಾರದ ಚಿಂತನೆಯಲ್ಲಿದೆ. ಆ ಕಾರಣಕ್ಕೆ ಲೋಕಸಭೆ ಚುನಾವಣೆಯನ್ನು ಒಂದು ವರ್ಷ ಮುಂಚಿತವಾಗಿ ಅಂದರೆ ಮುಂದಿನ ವರ್ಷವೇ ಮಾಡಬಹುದಾ? ಎಂಬ ಪ್ರಶ್ನೆ ಎದ್ದಿದೆ. ಆದರೆ ಇದೊಂದೇ ಕಾರಣ ಆಗಲಿಕ್ಕಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಇರುವಂತೆಯೇ, ಇತ್ತೀಚಿನ ಚುನಾವಣೆಗಳು ಬಿಜೆಪಿ ಪರವಾಗಿ ಕಾಣುತ್ತಿರುವ ಸನ್ನಿವೇಶದಲ್ಲೇ ಲೋಕಸಭೆ ಚುನಾವಣೆಯನ್ನು ನಡೆಸಿದರೆ ಪಕ್ಷಕ್ಕೆ ಅನುಕೂಲ ಆಗುತ್ತದೆ ಎಂಬ ಲೆಕ್ಕಾಚಾರ ಇದೆ. ಮಧ್ಯಪ್ರದೇಶದ ಇತ್ತೀಚಿನ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ.
ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅದ್ಭುತ ಯಶಸ್ಸು ಕಂಡಿದೆ. ಮುಂದಿನ ವರ್ಷ ನಡೆಯಲಿರುವ ಮಧ್ಯಪ್ರದೇಶ, ಛತ್ತೀಸ್ ಗಡ, ರಾಜಸ್ತಾನ ಹಾಗೂ ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಸನ್ನಿವೇಶ ಇಲ್ಲ.
ಆದರೆ, ಈ ರಾಜ್ಯಗಳಲ್ಲಿ ಹಿಂದಿನ ಚುನಾವಣೆಗಿಂತ ಕಡಿಮೆ ಸ್ಥಾನಗಳಲ್ಲಿ ಜಯ ಗಳಿಸಿದರೆ ಅಥವಾ ಸೋತರೆ ಅದರ ಪರಿಣಾಮ ಲೋಕಸಭೆ ಚುನಾವಣೆ ಮೇಲೆ ಆಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ತ್ರಿಪುರಾದಲ್ಲಿ ಸಿಪಿಎಂ ಅಧಿಕಾರ ಹಿಡಿದುಬಿಟ್ಟರೆ ಬಿಜೆಪಿಯ ಆತ್ಮಸ್ಥೈರ್ಯ ಸ್ವಲ್ಪ ಮಟ್ಟಿಗೆ ಕುಸಿದಂತಾಗುತ್ತದೆ.

ಮುಜುಗರ ತಪ್ಪಿಸಬಹುದು
ಲೋಕಸಭೆ ಚುನಾವಣೆಗೆ ಅವಧಿಪೂರ್ವವಾಗಿ ಹೋದರೆ ವಿಧಾನಸಭೆ ಚುನಾವಣೆಗಳ ಫಲಿತಾಂಶದ ನಕಾರಾತ್ಮಕ ಪರಿಣಾಮ ಎದುರಿಸುವುದನ್ನು ತಪ್ಪಿಸಬಹುದು. ಏಕೆಂದರೆ ಬಹಳ ಸಲ ವಿರೋಧಪಕ್ಷಗಳು ದುರ್ಬಲವಾಗಿ ಇದ್ದಾಗಲೂ ಆಡಳಿತಾರೂಢ ಪಕ್ಷದ ವಿರುದ್ಧ ಜನರು ಮತ ಹಾಕಿದ್ದಿದೆ. ಇದಕ್ಕೆ ಗೋವಾ ಹಾಗೂ ಮಣಿಪುರ ವಿಧಾನಸಭೆ ಚುನಾವಣೆ ಉತ್ತಮ ಉದಾಹರಣೆ.

ಕೇಂದ್ರದ ವಿರುದ್ಧ ಭ್ರಷ್ಟಾಚಾರ ಆರೋಪಗಳಿಲ್ಲ
ವರ್ಚಸ್ಸು ಇರುವಾಗಲೇ ಲೋಕಸಭೆ ಚುನಾವಣೆಗೆ ಹೋಗುವುದು ಉತ್ತಮ ಎಂಬುದು ಚಿಂತನೆ. ಏಕೆಂದರೆ ಕೇಂದ್ರದ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಆರ್ಥಿಕ ಅಭಿವೃದ್ಧಿ ಶೀಘ್ರಗತಿಯಲ್ಲಿ ಆಗಬೇಕು ಎಂಬ ನಿರೀಕ್ಷೆ ಏನಿತ್ತು, ಅದು ಕೈಕೊಟ್ಟಿದೆ. ಆದರೆ ಬಿಜೆಪಿ ಇಡಿಯಾಗಿ ಅವಲಂಬಿಸಿರುವುದು ನರೇಂದ್ರ್ ಮೋದಿ ಅವರ ಮೇಲೆ.

ಜನರ ಆಕ್ಷೇಪ ತುಂಬ ಹೆಚ್ಚಾದರೆ ಕಷ್ಟ
ಗೋ ರಕ್ಷಕರ ದಾಳಿ, ಬಿಜೆಪಿ ನಾಯಕರು ಹಲವು ಸನ್ನಿವೇಶದಲ್ಲಿ ಬಳಸಿರುವ ಕೆಟ್ಟ ಭಾಷೆ, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಬೆಂಬಲಿಗರು ವಿರೋಧಿಗಳ ವಿರುದ್ಧ ದಾಳಿ ನಡೆಸಲು ಬಳಸಿದ ಭಾಷೆ...ಹೀಗೆ ಹಲವು ವಿಚಾರಗಳಲ್ಲಿ ಜನಸಾಮಾನ್ಯರಿಗೆ ಆಕ್ಷೇಪಗಳಿವೆ. ಇವುಗಳನ್ನು ಹಾಗೇ ಬೆಳೆಯಲು ಬಿಟ್ಟರೆ ಅಥವಾ ಅದೇ ದೊಡ್ಡದಾಗಿ ಬಿಟ್ಟರೆ ಬಿಜೆಪಿಗೆ ಅದು ಉಲ್ಟಾ ಹೊಡೆಯುವ ಸಾಧ್ಯತೆಗಳಿವೆ.

ಕಾಂಗ್ರೆಸ್ ಸ್ಥಿತಿ ದಯನೀಯವಾಗಿದೆ
ಕಾಂಗ್ರೆಸ್ ನಲ್ಲಿ ಇಂದಿರಾ ಗಾಂಧಿ ಅವರಿದ್ದ ಕಾಲದಲ್ಲಿ ಇದ್ದಂಥ ಸ್ಥಿತಿಯೇ ಬಿಜೆಪಿಯಲ್ಲೂ ಇದೆ. ಒಂದು ಕಡೆ ಕಾಂಗ್ರೆಸ್ ಸ್ಥಿತಿ ದಯನೀಯವಾಗಿದೆ. ಅದರ ಜನಪ್ರಿಯತೆ ಕಡಿಮೆ ಆಗುತ್ತಿದೆ. ಆದ್ದರಿಂದ ಮೋದಿ ಜನಪ್ರಿಯತೆಯನ್ನು ಮತವಾಗಿ ಪರಿವರ್ತಿಸುವ ಇರಾದೆ ಬಿಜೆಪಿಗಿದೆ. ಆದ್ದರಿಂದಲೇ ಮುಂದಿನ ವರ್ಷವೇ ಲೋಕಸಭೆಗೆ ಚುನಾವಣೆ ನಡೆಸುವ ಲೆಕ್ಕಾಚಾರದಲ್ಲಿದೆ.












Click it and Unblock the Notifications