Kamala Sohonie: ನೊಬೆಲ್‌ ಪುರಸ್ಕೃತ ವಿಜ್ಞಾನಿಗೇ ಸವಾಲು ಹಾಕಿ ಗೆದ್ದ ಕಮಲಾ ಸೋಹೋನಿ, ಯಾರೀಕೆ?

ಒಂದು ಕಾಲದಲ್ಲಿ ವಿಜ್ಞಾನ ಕ್ಷೇತ್ರವೆಂದರೆ ಪುರುಷರಿಗಷ್ಟೇ ಮೀಸಲಾದ ಜಗತ್ತು ಎಂಬ ಭಾವನೆ ಗಟ್ಟಿಯಾಗಿತ್ತು. ಮಹಿಳೆಯರು ಉನ್ನತ ಶಿಕ್ಷಣ ಪಡೆಯುವುದು, ಅದರಲ್ಲೂ ಸಂಶೋಧನಾ ಕ್ಷೇತ್ರಕ್ಕೆ ಕಾಲಿಡುವುದು ಸುಲಭವಾಗಿರಲಿಲ್ಲ. ಆದರೆ ಇಂತಹ ವಾತಾವರಣದಲ್ಲೇ ಒಬ್ಬ ಯುವತಿ ತನ್ನ ಪ್ರತಿಭೆ ಮತ್ತು ಹಠದಿಂದ ಆ ಕಾಲದಲ್ಲಿ ಮಹಿಳೆಯರೆದುರು ಗಟ್ಟಿಯಾಗಿ ನಿಂತಿದ್ದ ಗೋಡೆಯನ್ನೇ ಒಡೆದು ಹಾಕಿದರು. ಅವರೇ ಕಮಲಾ ಸೋಹೋನಿ.

1911ರ ಜೂನ್‌ 18ರಂದು ಜನಿಸಿದ ಕಮಲಾ, ಬಾಲ್ಯದಿಂದಲೇ ವಿಜ್ಞಾನದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಮುಂಬೈ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಅಧ್ಯಯನ ಮಾಡಿ ಅತ್ಯುತ್ತಮ ಸಾಧನೆ ಮಾಡಿದರು. ಮುಂದೆ ಸಂಶೋಧನೆ ನಡೆಸುವ ಉದ್ದೇಶದಿಂದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc)ಗೆ ಅರ್ಜಿ ಸಲ್ಲಿಸಿದರು.

Who Was Kamala Sohonie The Woman Who Challenged Nobel Laureate C V Raman

ಆದರೆ ಅಲ್ಲೊಂದು ದೊಡ್ಡ ಅಡ್ಡಿ ಎದುರಾಯಿತು. ಆ ಸಮಯದಲ್ಲಿ IIScನ ನಿರ್ದೇಶಕರಾಗಿದ್ದವರು ಭಾರತದ ಖ್ಯಾತ ವಿಜ್ಞಾನಿ ಹಾಗೂ ನೊಬೆಲ್‌ ಪುರಸ್ಕೃತ ಸರ್‌ ಸಿ.ವಿ. ರಾಮನ್. ಕಮಲಾ ಮಹಿಳೆ ಎಂಬ ಕಾರಣಕ್ಕೆ ಅವರ ಅರ್ಜಿಗೆ ಆರಂಭದಲ್ಲಿ ಅವಕಾಶ ಸಿಗಲಿಲ್ಲ. ಮಹಿಳೆಯರು ಸಂಶೋಧನಾ ಕ್ಷೇತ್ರದಲ್ಲಿ ಸಮರ್ಥವಾಗಿ ಕೆಲಸ ಮಾಡಬಲ್ಲರು ಎಂಬ ನಂಬಿಕೆ ಆಗಿನ ವೈಜ್ಞಾನಿಕ ವಲಯದಲ್ಲಿ ಇನ್ನೂ ಬೇರೂರಿರಲಿಲ್ಲ.

ಆದರೆ ಕಮಲಾ ಹಿಂದೆ ಸರಿಯಲಿಲ್ಲ. ತಮ್ಮ ಅರ್ಜಿಯನ್ನು ತಿರಸ್ಕರಿಸಿರುವುದನ್ನು ಒಪ್ಪಿಕೊಂಡು ಸುಮ್ಮನೆ ಮನೆಗೆ ತೆರಳುವ ಬದಲು, ಅವರು ರಾಮನ್ ಅವರನ್ನು ನೇರವಾಗಿ ಭೇಟಿಯಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಕೊನೆಗೆ ಕಮಲಾಗೆ IIScನಲ್ಲಿ ಪ್ರವೇಶ ದೊರೆಯಿತು. ಆದರೆ ಸಾಮಾನ್ಯ ವಿದ್ಯಾರ್ಥಿನಿಯಾಗಿ ಅಲ್ಲ. ಮೊದಲ ವರ್ಷ ಪರೀಕ್ಷಾರ್ಥಿಯಾಗಿ ಕೆಲಸ ಮಾಡಬೇಕು, ತಮ್ಮ ಸಂಶೋಧನೆಯ ಗುಣಮಟ್ಟವನ್ನು ಸಾಬೀತುಪಡಿಸಬೇಕು ಎಂಬಂತಹ ಕಠಿಣ ಷರತ್ತುಗಳಿದ್ದವು.

ಕಮಲಾ ಆ ಷರತ್ತುಗಳನ್ನು ಒಪ್ಪಿಕೊಂಡರು. ಆ ಒಂದು ನಿರ್ಧಾರ ಭಾರತೀಯ ವಿಜ್ಞಾನ ಇತಿಹಾಸದಲ್ಲಿ ಮಹತ್ವದ ತಿರುವಾಯಿತು. 1933ರಲ್ಲಿ ಅವರು IIScಗೆ ಪ್ರವೇಶ ಪಡೆದ ಮೊದಲ ಮಹಿಳೆಯಾದರು. ತಮ್ಮ ಸಂಶೋಧನೆಯ ಮೂಲಕ ತಾವು ಯಾವುದೇ ಪುರುಷ ವಿಜ್ಞಾನಿಗಿಂತ ಕಡಿಮೆ ಅಲ್ಲ ಎಂಬುದನ್ನು ತೋರಿಸಿದರು. ಅವರ ಸಾಧನೆಯ ನಂತರ ಮಹಿಳೆಯರಿಗೆ ಸಂಸ್ಥೆಯ ಬಾಗಿಲು ಮತ್ತಷ್ಟು ತೆರೆದುಕೊಂಡಿತು.

ಕಮಲಾ ಅವರ ವಿಜ್ಞಾನ ಪ್ರಯಾಣ ಅಲ್ಲಿಗೆ ನಿಲ್ಲಲಿಲ್ಲ. ನಂತರ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲೂ ಸಂಶೋಧನೆ ನಡೆಸಿದರು. ಸಸ್ಯಕೋಶಗಳು, ಪ್ರೋಟೀನ್‌ಗಳು, ಬೇಳೆಕಾಳುಗಳು, ವಿಟಮಿನ್‌ಗಳು ಹಾಗೂ ಪೌಷ್ಟಿಕಾಂಶಗಳ ಕುರಿತು ಅವರು ಮಹತ್ವದ ಅಧ್ಯಯನ ನಡೆಸಿದರು.

ಅವರ ಸಂಶೋಧನೆಯ ವಿಶೇಷತೆ ಏನೆಂದರೆ, ಅದು ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗಿರಲಿಲ್ಲ. ಸಾಮಾನ್ಯ ಭಾರತೀಯರ ಜೀವನಕ್ಕೆ ಉಪಯೋಗವಾಗುವಂತಹ ವಿಷಯಗಳತ್ತ ಅವರು ಗಮನ ಹರಿಸಿದರು. ವಿಶೇಷವಾಗಿ ಬಡವರು ಮತ್ತು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದ ಜನರಿಗೆ ಕೈಗೆಟುಕುವ ಆಹಾರ ಮೂಲಗಳಿಂದ ಪೌಷ್ಟಿಕಾಂಶ ಒದಗಿಸುವ ಸಾಧ್ಯತೆಗಳ ಬಗ್ಗೆ ಸಂಶೋಧಿಸಿದರು.

ನಂತರ ಅವರು 'ನೀರಾ'ದ ಪೌಷ್ಟಿಕ ಗುಣಗಳ ಮೇಲೂ ಅಧ್ಯಯನ ನಡೆಸಿದರು. ನೀರಾದಲ್ಲಿ ವಿಟಮಿನ್‌ಗಳು ಮತ್ತು ಕಬ್ಬಿಣದಂತಹ ಪೌಷ್ಟಿಕಾಂಶಗಳಿರುವುದನ್ನು ಅವರ ಸಂಶೋಧನೆ ತೋರಿಸಿತು. ನೀರಾದಿಂದ ತಯಾರಿಸುವ ಬೆಲ್ಲ ಮತ್ತು ಇತರ ಉತ್ಪನ್ನಗಳಲ್ಲೂ ಈ ಪೌಷ್ಟಿಕಾಂಶಗಳು ಉಳಿಯುವ ಸಾಧ್ಯತೆಯನ್ನು ಅವರು ಅಧ್ಯಯನ ಮಾಡಿದರು. ಈ ಕೆಲಸಕ್ಕೆ ಅವರಿಗೆ ರಾಷ್ಟ್ರಪತಿ ಪ್ರಶಸ್ತಿಯೂ ದೊರೆಯಿತು.

ವಿಜ್ಞಾನದ ಪಿಎಚ್‌ಡಿ ಪಡೆದ ಭಾರತದ ಮೊದಲ ಮಹಿಳಾ ವಿಜ್ಞಾನಿ ಎಂಬ ಸಾಧನೆ ಕಮಲಾ ಸೋಹೋನಿ ಹೆಸರಿನಲ್ಲಿದೆ. ಅಷ್ಟೇ ಅಲ್ಲ. ಅವರು ತಮ್ಮ ಕಾಲದ ಲಿಂಗ ತಾರತಮ್ಯಕ್ಕೆ ಸವಾಲು ಹಾಕಿದರು. ಒಬ್ಬ ಮಹಿಳೆಗೆ ವಿಜ್ಞಾನದಲ್ಲಿ ಅವಕಾಶ ನೀಡದ ವ್ಯವಸ್ಥೆಯ ಎದುರು ನಿಂತು, ಅದೇ ವ್ಯವಸ್ಥೆಯೊಳಗೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಅವರ ಹೋರಾಟದಿಂದ ಮುಂದಿನ ಪೀಳಿಗೆಯ ಮಹಿಳಾ ವಿಜ್ಞಾನಿಗಳಿಗೆ ಹೊಸ ದಾರಿ ತೆರೆದುಕೊಂಡಿತು. ಇಂದು ವಿಜ್ಞಾನ, ಸಂಶೋಧನೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಆ ದಾರಿಯನ್ನು ಆರಂಭಿಕ ಹಂತದಲ್ಲಿ ತೆರೆದವರಲ್ಲಿ ಕಮಲಾ ಸೋಹೋನಿ ಅವರ ಹೆಸರು ಅತ್ಯಂತ ಮಹತ್ವದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+