ಪೋಷಕರೇ ಮಕ್ಕಳಿಗೆ ಕೆಮ್ಮು, ಶೀತ ಔಷಧಿ ನೀಡುವಾಗ ಇರಲಿ ಎಚ್ಚರ!
ನೋಯ್ಡಾ ಜನವರಿ 12: ನೋಯ್ಡಾ ಮೂಲದ ಕಂಪನಿಯ ಎರಡು ಕೆಮ್ಮು ಸಿರಪ್‌ಗಳನ್ನು ಬಳಸದಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ. ನೋಯ್ಡಾ ಮೂಲದ ಮೇರಿಯನ್ ಬಯೋಟೆಕ್ ಕಂಪನಿಯ AMBRONOL ಮತ್ತು DOK-1MAX ಎಂಬ ಎರಡು ಕೆಮ್ಮಿನ ಸಿರಪ್ ಗಳನ್ನು ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಸಿರಪ್‌ಗಳು ಕಡಿಮೆ ಗುಣಮಟ್ಟವನ್ನು ಹೊಂದಿವೆ ಜೊತೆಗೆ ನಿಗದಿತ ಗುಣಮಟ್ಟದ ಮಾನದಂಡಗಳನ್ನು ಒಳಗೊಂಡಿಲ್ಲ ಎಂದು ವೈದ್ಯಕೀಯ ವರದಿಗಳು ತಿಳಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
22 ಡಿಸೆಂಬರ್ 2022 ರಂದು ಉಜ್ಬೇಕಿಸ್ತಾನ್‌ನಲ್ಲಿ ಕಳಪೆ ಗುಣಮಟ್ಟದ ಸಿರಪ್‌ಗಳು ಕಾಣಿಸಿಕೊಂಡಿವೆ ಎಂದು WHO ನೀಡಿದ ವೈದ್ಯಕೀಯ ಎಚ್ಚರಿಕೆ ಹೇಳುತ್ತದೆ. ಸೂಚಿಸಿದ ಕೆಮ್ಮಿನ ಸಿರಪ್‌ಗಳು ಮಾನದಂಡಗಳನ್ನು ಪೂರೈಸಲು ವಿಫಲವಾಗಿವೆ. ಹೀಗಾಗಿ ಅವುಗಳ ಬಳಕೆಯನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಮೇರಿಯನ್ ಬಯೋಟೆಕ್ ಕಂಪನಿ (MARION BIOTECH PVT.LTD)ಯು AMBRONOL ಮತ್ತು DOK-1MAX ಕೆಮ್ಮು ಸಿರಪ್‌ಗಳನ್ನು ತಯಾರಿಸುತ್ತದೆ. ಇಲ್ಲಿಯವರೆಗೆ, ಇದನ್ನು ತಯಾರಿಸುವ ಕಂಪನಿಯು ಈ ಉತ್ಪನ್ನದ ಸುರಕ್ಷತೆ ಮತ್ತು ಗುಣಮಟ್ಟ ಹೇಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ಖಾತರಿ ನೀಡಿಲ್ಲ.
ಈ ಕೆಮ್ಮಿನ ಸಿರಪ್ ಕುಡಿದು ಉಜ್ಬೇಕಿಸ್ತಾನ್‌ನಲ್ಲಿ ಅನೇಕ ಮಕ್ಕಳು ಸಾವನ್ನಪ್ಪಿದಾಗ ನೋಯ್ಡಾ ಮೂಲದ ಈ ಕಂಪನಿಯು ಬೆಳಕಿಗೆ ಬಂದಿದೆ. WHO ಲ್ಯಾಬ್ ವಿಶ್ಲೇಷಕರು ಕಪ್ ಸಿರಪ್ ಮಾದರಿಗಳನ್ನು ಪರಿಶೀಲಿಸಿದರು. ಎರಡು ಸಿರಪ್‌ಗಳಲ್ಲಿ ಡೈಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್ ಕಂಡುಬಂದಿದೆ ಎಂದು ಕಂಡುಹಿಡಿದರು. ಈ ಎರಡೂ ಸಿರಪ್‌ಗಳು ಅನೇಕ ದೇಶಗಳಲ್ಲಿ ಮಾರ್ಕೆಟಿಂಗ್ ಪರವಾನಗಿಯನ್ನು ಹೊಂದಿವೆ. ಅವುಗಳನ್ನು ಉಜ್ಬೇಕಿಸ್ತಾನ್‌ಗೂ ಸರಬರಾಜು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಈ ಎರಡೂ ಉತ್ಪನ್ನಗಳು ಕಳಪೆ ಗುಣಮಟ್ಟವನ್ನು ಹೊಂದಿವೆ. ಆದ್ದರಿಂದ ಅವುಗಳನ್ನು ವಿಶೇಷವಾಗಿ ಮಕ್ಕಳಿಗೆ ಬಳಸಬಾರದು. ಇದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಮೇರಿಯನ್ ಬಯೋಟೆಕ್ ಕಂಪನಿಯ ಕೆಮ್ಮಿನ ಸಿರಪ್ ಕುಡಿದು 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಡಿಸೆಂಬರ್ 22 ರಂದು ಉಜ್ಬೇಕಿಸ್ತಾನ್ ಆರೋಪಿಸಿದೆ. ಹೀಗಾಗಿ ಮಂಗಳವಾರ ಉತ್ತರ ಪ್ರದೇಶದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಕಂಪನಿಯ ಪರವಾನಗಿಯನ್ನು ರದ್ದುಗೊಳಿಸಿದೆ. ಬಳಿಕ ಕಂಪನಿಗೆ ನೋಟಿಸ್ ಜಾರಿ ಮಾಡಲಾಯಿತು. ಅಗತ್ಯ ದಾಖಲೆಗಳನ್ನು ತೋರಿಸಲು ಕಂಪನಿ ವಿಫಲವಾದ ಕಾರಣ ನಾವು ಕಂಪನಿಯ ಉತ್ಪನ್ನ ಪರವಾನಗಿಯನ್ನು ರದ್ದುಗೊಳಿಸಿದ್ದೇವೆ ಎಂದು ಗೌತಮ್ ಬುದ್ಧ ನಗರದ ಡ್ರಗ್ ಇನ್ಸ್‌ಪೆಕ್ಟರ್ ವೈಭವ್ ಬಬ್ಬರ್ ಹೇಳಿದ್ದಾರೆ. ಮಾದರಿ ಫಲಿತಾಂಶಗಳು ಇನ್ನೂ ಬರಬೇಕಿದೆ. ನೋಯ್ಡಾ ಮೂಲದ ಕಂಪನಿಯಲ್ಲಿ ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕಳೆದ ತಿಂಗಳು ಹೇಳಿದ್ದರು.












Click it and Unblock the Notifications