ಪಿಎಫ್ಐ ಕಾರ್ಯಕ್ರಮದಲ್ಲಿ ಅನ್ಸಾರಿ, ಹಿಂದೂಗಳಿಗೆ ಉರಿ
ಬೆಂಗಳೂರು, ಸೆ. 25: ಕರ್ನಾಟಕದಲ್ಲಿ ಆರೆಸ್ಸೆಸ್ ಹಾಗೂ ಹಿಂದೂ ಪರ ಸಂಘಟನೆ ಮುಖಂಡರ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕ್ರಮವೊಂದರಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಪಾಲ್ಗೊಂಡಿರುವುದನ್ನು ಹಿಂದೂ ಪರ ಸಂಘಟನೆಗಳು ಖಂಡಿಸಿವೆ.
ಕೇರಳದ ಕೋಯಿಕ್ಕೊಡ್ ನಲ್ಲಿ ಪಿಎಫ್ ಐ ಆಯೋಜನೆಯ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹಮೀದ್ ಅನ್ಸಾರಿ ಅವರು ಪಾಲ್ಗೊಂಡಿದ್ದರು.
ನ್ಯಾಷನಲ್ ವುಮೆನ್ಸ್ ಫ್ರಂಟ್ ಸಹ ಆಯೋಜನೆಯ ಈ ಕಾರ್ಯಕ್ರಮ ಇದಾಗಿದ್ದು, ಉಗ್ರರ ಜತೆ ಸಂಪರ್ಕವುಳ್ಳ ಸಂಘಟನೆಯ ಕಾರ್ಯಕ್ರಮದಲ್ಲಿ ಅನ್ಸಾರಿ ಅವರು ಪಾಲ್ಗೊಂಡಿದ್ದು ಮುಸ್ಲಿಂ ಸಮುದಾಯಕ್ಕೆ ತಪ್ಪು ಸಂದೇಶ ನೀಡಲಿದೆ. ಸಿಮಿ ಉಗ್ರಸಂಘಟನೆಯ ವಿಸ್ತೃತ ರೂಪವಾಗಿರುವ ಪಿಎಫ್ಐ ನಿಂದ ಕೇರಳದಲ್ಲಿ ದೇಶಭಕ್ತ ಹತ್ಯೆಗಳಾಗಿವೆ. ಎಂದು ವಿಶ್ವ ಹಿಂದೂ ಪರಿಷತ್ ನ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್ ಪ್ರತಿಕ್ರಿಯಿಸಿದ್ದಾರೆ.
ಪಿಎಫ್ಐ ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಕೂಡಾ ತನ್ನ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿದೆ. ಸಿಮಿಯಂತೆ ಪಿಎಫ್ಐ ಸಂಘಟನೆ ನಿಷೇಧಕ್ಕಾಗಿ ಬಹುಕಾಲದಿಂದ ಆಗ್ರಹ ಕೇಳಿ ಬಂದಿದೆ. ಆದರೆ, ಆರೋಪಗಳನ್ನು ಅಲ್ಲಗೆಳೆಯುತ್ತಾ ಬಂದಿರುವ ಪಿಎಫ್ಐ, ಈ ಕಾರ್ಯಕ್ರಮವನ್ನು ಆಯೋಜಿಸಿಲ್ಲ, ದೆಹಲಿ ಮೂಲದ ವಿದ್ಯಾಸಂಸ್ಥೆ ಆಯೋಜಿಸಿದ್ದು ಎಂದು ಸ್ಪಷ್ಟನೆ ನೀಡಿದೆ.