Bihar Caste Survey: ಕೇಂದ್ರವನ್ನೇ ದಿಕ್ಕರಿಸಿ ಜಾತಿ ಗಣತಿಯ ದತ್ತಾಂಶ ಬಿಡುಗಡೆ ಮಾಡಿದ ಬಿಹಾರ ಸರ್ಕಾರ- ಅಂಕಿಅಂಶ, ವಿವರ
ಪಾಟ್ನಾ, ಅಕ್ಟೋಬರ್ 02: ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಸೋಮವಾರ ಜಾತಿ ಆಧಾರಿತ ಗಣತಿಯ ದತ್ತಾಂಶವನ್ನು ಬಿಡುಗಡೆ ಮಾಡಿದೆ. ಆಗಸ್ಟ್‌ನಲ್ಲಿ ಪೂರ್ಣಗೊಂಡಿದ್ದ ಈ ಗಣತಿಯ ಅಂಕಿಅಂಶಗಳನ್ನು ಬಹಿರಂಗಪಡಿಸುವುದಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಇದನ್ನು ದಿಕ್ಕರಿಸಿ ಬಿಹಾರ ಸರ್ಕಾರ ದತ್ತಾಂಶವನ್ನು ಬಿಡುಗಡೆ ಮಾಡಿದೆ.
2024 ರ ಲೋಕಸಭೆ ಚುನಾವಣೆಗೆ ಆರೇಳು ತಿಂಗಳು ಬಾಕಿ ಇರುವಾಗಲೇ ಬಿಡುಗಡೆಯಾಗಿರುವ ಜಾತಿ ಆಧಾರಿತ ಗಣತಿಯು ರಾಜಕೀಯವಾಗಿ ಮಹತ್ವವನ್ನು ಪಡೆದುಕೊಂಡಿದೆ.
ಬಿಹಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಸಿಂಗ್ ಅವರು ಪಾಟ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವರದಿಯನ್ನು ಬಿಡುಗಡೆ ಮಾಡಿದ್ದಾರೆ.

ಸಮೀಕ್ಷೆಯ ಪ್ರಕಾರ, ರಾಜ್ಯದಲ್ಲಿ ಶೇ.19ರಷ್ಟು ಜನರು ಪರಿಶಿಷ್ಟ ಜಾತಿಗೆ ಮತ್ತು ಶೇ.27ರಷ್ಟು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ.
'ಬಿಹಾರದಲ್ಲಿ ಹಿಂದುಳಿದ ವರ್ಗದವರು ಶೇ 27.13 ರಷ್ಟಿದ್ದಾರೆ. ತೀರಾ ಹಿಂದುಳಿದ ವರ್ಗದವರು ಶೇ 36.01 ರಷ್ಟಿದ್ದಾರೆ. ಸಾಮಾನ್ಯ ವರ್ಗದವರು ಶೇ 15.52 ರಷ್ಟಿದ್ದಾರೆ' ಎಂದು ಅವರು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಬಿಹಾರದ ಒಟ್ಟು ಜನಸಂಖ್ಯೆ 13 ಕೋಟಿಗೂ ಅಧಿಕವಾಗಿದೆ ಎಂದು ವಿವೇಕ್ ಕುಮಾರ್ ಸಿಂಗ್ ಹೇಳಿದ್ದಾರೆ.
ರಾಜ್ಯದಲ್ಲಿ ಜಾತಿವಾರು ಸಮೀಕ್ಷೆಗೆ ಆಗಸ್ಟ್ 7ರಂದು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಆಗಸ್ಟ್ 12 ರಂದು ಜಾತಿ ಸಮೀಕ್ಷೆ ಡೇಟಾವನ್ನು ಬಿಹಾರ ಜಾತಿ ಅಧಾರಿತ ಗಣತಿ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿತ್ತು. ಈ ಅಪ್ಲಿಕೇಶನ್‌ಗೆ ಸರ್ಕಾರಿ ಇಲಾಖೆಗಳು ಮಾತ್ರ ಲಾಗ್‌ಇನ್ ಹೊಂದಿವೆ ಎಂದು ಹೇಳಲಾಗಿದೆ.

ಬಿಹಾರದ ಜಾತಿಗಣತಿ ವಿರೋಧಿಸಿದ ಕೇಂದ್ರ
ಆಗಸ್ಟ್‌ನಲ್ಲಿ ಬಿಹಾರ ಸರ್ಕಾರದ ಜಾತಿ ಆಧಾರಿತ ಸಮೀಕ್ಷೆಯನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಕ್ಷೇಪಿಸಿತ್ತು.
ಈ ವಿಷಯವು ಸಂವಿಧಾನದ ಒಕ್ಕೂಟದ ಪಟ್ಟಿಯ ಅಡಿಯಲ್ಲಿ ಬರುತ್ತದೆ. ಸಂಬಂಧಿತ ಕಾನೂನಿನ ಅಡಿಯಲ್ಲಿ ಪ್ರಕ್ರಿಯೆಗಳನ್ನು ನಡೆಸಲು ಕೇಂದ್ರಕ್ಕೆ ಮಾತ್ರ ಅಧಿಕಾರವಿದೆ ಎಂದು ಮೋದಿ ನೇತೃತ್ವದ ಸರ್ಕಾರ ವಾದಿಸಿತ್ತು.
ಕೇಂದ್ರ ಸರ್ಕಾರದ ಈ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಒಬ್ಬ ವ್ಯಕ್ತಿಯ ಡೇಟಾವನ್ನು ರಾಜ್ಯ ಸರ್ಕಾರ ಬಹಿರಂಗಪಡಿಸುವುದಿಲ್ಲ. ಜಾತಿ ಸಮೀಕ್ಷೆಯ ಸಮಯದಲ್ಲಿ ವ್ಯಕ್ತಿಯು ಜಾತಿ ಅಥವಾ ಉಪಜಾತಿಯ ವಿವರಗಳನ್ನು ನೀಡಿದರೆ ಏನು ಹಾನಿಯಾಗತ್ತದೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.
ಸಂವಿಧಾನದ ನಿಬಂಧನೆಗಳು ಮತ್ತು ಅನ್ವಯವಾಗುವ ಕಾನೂನಿನ ಪ್ರಕಾರ, ಎಸ್‌ಸಿ/ಎಸ್‌ಟಿ/ಎಸ್‌ಇಬಿಸಿ ಮತ್ತು ಒಬಿಸಿಗಳ ಉನ್ನತಿಗಾಗಿ ಎಲ್ಲಾ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿದ್ದೇವೆ ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಿತ್ತು.
ಜಾತಿ ಸಮೀಕ್ಷೆ ನಡೆಸುವ ಬಿಹಾರ ಸರ್ಕಾರದ ನಿರ್ಧಾರವನ್ನು ಪಾಟ್ನಾ ಹೈಕೋರ್ಟ್ ಸಹ ಎತ್ತಿಹಿಡಿದಿತ್ತು. ರಾಜ್ಯದ ಕ್ರಮವು ಸಂಪೂರ್ಣವಾಗಿ ಮಾನ್ಯವಾಗಿದೆ ಅದು ತಿಳಿಸಿತ್ತು.











Click it and Unblock the Notifications