West Bengal Election: ಪಶ್ಚಿಮ ಬಂಗಾಳ ಚುನಾವಣೆ: 5 ಗಂಟೆಗೆ ಶೇ 90ರಷ್ಟು ದಾಖಲೆಯ ಮತದಾನ, ಮತಗಟ್ಟೆಗಳತ್ತ ಹರಿದುಬಂದ ಜನಸಾಗರ

ಇಂದು ಬೆಳಿಗ್ಗೆಯಿಂದಲೇ ಅತ್ಯಂತ ಬಿರುಸಿನಿಂದ ಆರಂಭವಾಗಿದ್ದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನವು ಸಂಜೆ 5 ಗಂಟೆಯ ವೇಳೆಗೆ ದಾಖಲೆ ಮಟ್ಟದ ಮತದಾನಕ್ಕೆ ಸಾಕ್ಷಿಯಾಗಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಸಂಜೆ 5 ಗಂಟೆಯವರೆಗೆ ರಾಜ್ಯದಲ್ಲಿ ಸರಿಸುಮಾರು ಶೇ 90ರಷ್ಟು ಮತದಾನ ದಾಖಲಾಗಿದೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳವು ಅಭೂತಪೂರ್ವ ಮತದಾನಕ್ಕೆ ಸಾಕ್ಷಿಯಾಗುತ್ತಿದೆ. ಮೊದಲ ಹಂತದಲ್ಲಿ ದಾಖಲೆ ಪ್ರಮಾಣದ (93.19%) ಮತದಾನವಾಗಿದ್ದರೆ, ಇಂದು ನಡೆದ ಎರಡನೇ ಹಂತದಲ್ಲೂ ಸಂಜೆಯ ವೇಳೆಗೆ ಮತದಾನದ ಪ್ರಮಾಣ ಶೇ 90ರ ಸಮೀಪಕ್ಕೆ ಬಂದಿದೆ. ರಾಜಧಾನಿ ಕೋಲ್ಕತ್ತಾದಲ್ಲಿ ಶೇ. 75ರಿಂದ 80ರಷ್ಟು ಮತದಾನವಾಗಿದ್ದು, ಒಟ್ಟಾರೆ 142 ಕ್ಷೇತ್ರಗಳ 41,000ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ 3.5 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

West Bengal Election

ಮುಂದಿನ ಬಾರಿ ಒಂದೇ ಹಂತದಲ್ಲಿ ಚುನಾವಣೆ

ಈ ಬಾರಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳು ಎರಡು ಹಂತಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್ ತಿಳಿಸಿದ್ದಾರೆ. ಅಲ್ಲದೆ, ಭವಿಷ್ಯದಲ್ಲಿ ರಾಜ್ಯದ ಚುನಾವಣೆಗಳನ್ನು ಕೇವಲ ಒಂದೇ ಹಂತದಲ್ಲಿ ನಡೆಸಲಾಗುವುದು ಎಂಬ ಮಹತ್ವದ ಸುಳಿವನ್ನು ಅವರು ನೀಡಿದ್ದಾರೆ. ಸಂಜೆ 6 ಗಂಟೆಯೊಳಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಮತ ಚಲಾಯಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಬಾರಿ ಮೃತ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಯಶಸ್ವಿಯಾಗಿ ತೆಗೆದುಹಾಕಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.

ಅಕ್ರಮ ಸಾಬೀತಾದರೆ ಮರು ಮತದಾನ

ಮತದಾನದ ಪ್ರಕ್ರಿಯೆಯು ಬಹುತೇಕ ಶಾಂತಿಯುತವಾಗಿ ನಡೆದಿದ್ದರೂ, ಕೆಲವು ಮತಗಟ್ಟೆಗಳಲ್ಲಿ ಇವಿಎಂ (EVM) ಯಂತ್ರಗಳಿಗೆ ಟೇಪ್ ಹಚ್ಚಿರುವುದು ಅಥವಾ ಇನ್ಯಾವುದೇ ಅಕ್ರಮ ಎಸಗಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಫಾಲ್ಟಾದಂತಹ ಸ್ಥಳಗಳಲ್ಲಿ ಅಕ್ರಮ ಎಸಗಿದವರನ್ನು ಹಿಡಿಯಲಾಗಿದ್ದು, ಚುನಾವಣೆಯ ಪವಿತ್ರತೆಗೆ ಧಕ್ಕೆ ಬಂದಿರುವುದು ಸಾಬೀತಾದಲ್ಲಿ ಅಂತಹ ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ.

ಚುನಾವಣಾ ಭದ್ರತೆಯ ದೃಷ್ಟಿಯಿಂದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಪ್ಯಾರಾ ಮಿಲಿಟರಿ ಪಡೆಗಳು ಜಾಗರೂಕತೆಯಿಂದ ಕಾರ್ಯನಿರ್ವಹಿಸಿವೆ. ಕೆಲವು ಕಡೆಗಳಲ್ಲಿ ಶಾಂತಿ ಕಾಪಾಡಲು ಪೊಲೀಸರು ಲಠಿ ಪ್ರಹಾರವನ್ನೂ ನಡೆಸಬೇಕಾಯಿತು. ಮತದಾನ ಮುಗಿದ ನಂತರವೂ ರಾಜ್ಯದಲ್ಲಿ ಹಿಂಸಾಚಾರ ನಡೆಯದಂತೆ ತಡೆಯಲು ಕೇಂದ್ರ ಗೃಹ ಸಚಿವಾಲಯ ಮತ್ತು ಚುನಾವಣಾ ಆಯೋಗವು ಮಹತ್ವದ ನಿರ್ಧಾರ ಕೈಗೊಂಡಿದ್ದು, ಹಲವಾರು ಅರೆಸೇನಾ ಪಡೆಗಳ ಬೆಟಾಲಿಯನ್ ಮತ್ತು ಕಂಪನಿಗಳು ಚುನಾವಣೆಯ ನಂತರವೂ ಪಶ್ಚಿಮ ಬಂಗಾಳದಲ್ಲೇ ಉಳಿಯಲಿವೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+