ಜೂನ್ 6ರಂದು ಅಧಿಕೃತವಾಗಿ ಕೇರಳ ಪ್ರವೇಶಿಸಲಿದೆ ಮುಂಗಾರು
ನವದೆಹಲಿ, ಜೂನ್ 01 : ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಭೀಕರ ಬಿಸಿಲ ಹೊಡೆತಕ್ಕೆ ಜನರು ತುತ್ತಾಗುತ್ತಿದ್ದರೆ, ದಕ್ಷಿಣದ ತುದಿಯಲ್ಲಿ ಮುಂಗಾರಿನ ಮೋಡಗಳು ಆವರಿಸಿಕೊಳ್ಳಲು ಆರಂಭಿಸಿವೆ.
ಸದ್ಯಕ್ಕೆ ಅರಬ್ಬೀ ಸಮುದ್ರದ ದಕ್ಷಿಣದ ಭಾಗ ಮತ್ತು ಬಂಗಾಳ ಕೊಲ್ಲಿಯ ಆಗ್ನೇಯ, ನೈರುತ್ಯ ಭಾಗಗಳಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಾರ್ಮೋಡಗಳು ಆವರಿಸಿಕೊಳ್ಳುತ್ತಿದ್ದು, ಜೂನ್ 6ರಂದು ಕೇರಳಕ್ಕೆ ಮುಂಗಾರು ಪ್ರವೇಶವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಎಂ ಮೋಹಾಪಾತ್ರ ಅವರು ತಿಳಿಸಿದ್ದಾರೆ.
ಇದು ಕರ್ನಾಟಕದ ಪಾಲಿಗೆ ಶುಭ ಸಂಕೇತವಾಗಿದೆ. ಮುಂಗಾರು ಕೇರಳಕ್ಕೆ ಅಪ್ಪಳಿಸಿದ 48 ಗಂಟೆಗಳಲ್ಲಿ ಕರ್ನಾಟಕವನ್ನೂ ಪ್ರವೇಶಿಸಲಿದೆ. ಕರ್ನಾಟಕದ ಕೊಡಗು, ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಮುಂತಾದವೆಡೆಗಳಲ್ಲಿ ಅಲ್ಪ ಮಳೆಯಾಗಿದ್ದರೂ ಬೆಂಗಳೂರಿನ ಜನರು ಬಿಸಿಲ ಬೇಗೆಗೆ ಬೆಂದು ಬದನೆಕಾಯಿ ಆಗಿದ್ದಾರೆ. 32 ಡಿಗ್ರಿ ಸೆಂಟಿಗ್ರೇಡ್ ಇರುವ ಬೆಂಗಳೂರಿನ ಜನತೆಗೇ ಹೀಗಾಗಿರಬೇಕಾದರೆ, 45 ಡಿಗ್ರಿ ತಲುಪಿರುವ ಕಲಬುರಗಿ ಜನರಿಗೆ ಹೇಗಾಗಿರಬೇಡ?

ಅಂದಾಜಿನಂತೆ ಜೂನ್ 1ನೇ ತಾರೀಖಿನಂದೇ ಕೇರಳಕ್ಕೆ ಮುಂಗಾರು ಆಗಮಿಸುತ್ತದೆ. ಆದರೆ, ಈ ಬಾರಿ ತುಸು ತಡವಾಗಿದೆ. ಈಗಾಗಲೆ ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ ಸಮುದ್ರದ ಮೇಲೆ ಕಾಣುತ್ತಿರುವ ಕಾರ್ಮೋಡಗಳು 3-4 ದಿನಗಳಲ್ಲಿ ಇಡೀ ಪ್ರದೇಶವನ್ನು ಆಕ್ರಮಿಸಿಕೊಳ್ಳಲಿದೆ ಎಂದು ಮೋಹಾಪಾತ್ರ ಅವರು ಮುನ್ಸೂಚನೆ ನೀಡಿದ್ದಾರೆ.

ಆದರೆ, ಪಂಜಾಬ್, ಹರ್ಯಾಣ, ದೆಹಲಿ, ಚಂಡೀಗಢ, ರಾಜಸ್ಥಾನ, ಉತ್ತರ ಪ್ರದೇಶದ ದಕ್ಷಿಣ ಭಾಗ, ಮಹಾರಾಷ್ಟ್ರ, ಮಧ್ಯ ಪ್ರದೇಶದ ಉತ್ತರ ಭಾಗ, ಜಾರ್ಖಂಡ್ ನ ಕೆಲ ಪ್ರದೇಶಗಳಲ್ಲಿ ಬಿಸಿಲ ಪ್ರಕೋಪ ಮುಂದುವರಿಯಲಿದೆ. ನಂತರ ಬಿಸಿಲ ತಾಪ ಕಡಿಮೆಯಾಗಲಿದೆ. ದೆಹಲಿಯಲ್ಲಿ ತಾಪಮಾನ ಶನಿವಾರ 44 ಡಿಗ್ರಿ ಸೆಲ್ಶಿಯಸ್ ಮುಟ್ಟಿದ್ದು, ಮುಂದಿನ ಕೆಲ ದಿನಗಳಲ್ಲಿ 46 ಡಿಗ್ರಿ ಸೆಂಟಿಗ್ರೇಡ್ ತಲುಪುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.
ಆಗ್ರಾ, ಮಥುರಾ ಜಿಲ್ಲೆಗಳಲ್ಲಿ ಶನಿವಾರ ಮತ್ತು ಮುಂದಿನ ಮೂರು ನಾಲ್ಕು ದಿನಗಳಲ್ಲಿ ಧೂಳಿನಿಂದ ಕೂಡಿದ ಬಿರುಗಾಳಿ ಮತ್ತು ಗುಡುಗಿನಿಂದ ಕೂಡಿದ ಮಳೆಯಾಗುವ ಸಂಭವನೀಯತೆಯಿದ್ದು ಜನರು ಎಚ್ಚರದಿಂದಿರಬೇಕು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications