Weather Forecast: ಭೀಕರ ಚಳಿ ನಡುವೆಯೂ ಈ ಭಾಗಗಳಲ್ಲಿ ಡಿಸೆಂಬರ್ 14ರ ವರೆಗೂ ಭಾರೀ ಮಳೆ ಮುನ್ಸೂಚನೆ
Weather Forecast: ಈಗಾಗಲೇ ಮುಂಗಾರು ಮಳೆ ಆರ್ಭಟದಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಇದೀಗ ಭೀಕರ ಚಳಿ ನಡುವೆಯೂ ಚಂಡಮಾರುತ ಹಿನ್ನೆಲೆ ಹಲವೆಡೆ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ನಾಲ್ಕು ದಿನಗಳ ಕಾಲ ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಡಿಸೆಂಬರ್ 10ರಿಂದ 13ರ ವರೆಗೆ ತಮಿಳುನಾಡಿನ ಪುದುಚೇರಿ ಮತ್ತು ಕಾರೈಕಲ್ ಸೇರಿದಂತೆ ದಕ್ಷಿಣ ಭಾರತದ ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ, ಡಿಸೆಂಬರ್ 11-13ರ ವರೆಗೆ ಕರಾವಳಿ ಆಂಧ್ರಪ್ರದೇಶದ ಪ್ರತ್ಯೇಕ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಡಿಸೆಂಬರ್ 12 ಮತ್ತು 13ರಂದು ಕರ್ನಾಟಕದ ದಕ್ಷಿಣ ಒಳನಾಡು, ಡಿಸೆಂಬರ್ 12ರಿಂದ 14ರ ವರೆಗೆ ಕೇರಳದ ಪ್ರತ್ಯೇಕ ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ನವದೆಹಲಿ ಹವಾಮಾನದ ವಿವರ: ಕಳೆದ 24 ಗಂಟೆಗಳಲ್ಲಿ ನವದೆಹಲಿಯಲ್ಲಿ ತಾಪಮಾನ ಪ್ರಮಾಣ ತುಸು ಕಡಿಮೆಯಾಗಿದೆ. ಇನ್ನು ಡಿಸೆಂಬರ್ 12ರ ವರೆಗೆ ದಟ್ಟ ಮಂಜಿನ ಜೊತೆ, ಗಾಳಿಯ ಗುಣಮಟ್ಟ ಮತ್ತಷ್ಟು ಕಳಪೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಈಗಾಗಲೇ ಹದಗೆಟ್ಟ ಗಾಳಿ ಹಾಗೂ ದಟ್ಟ ಮಂಜಿನಿಂದ ಇಲ್ಲಿನ ವಾಹನ ಸವಾರರು, ಜನರು ಕಿರಿಕಿರಿ ಅನುಭವಿಸಿದ ಘಟನೆ ನಡೆದಿದೆ.
ಇನ್ನು ಡಿಸೆಂಬರ್ 10 ಮತ್ತು 11ರಂದು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಪ್ರತ್ಯೇಕ ಪ್ರದೇಶಗಳಲ್ಲಿ ಶೀತ ಹೆಚ್ಚಿರಲಿದೆ. ಡಿಸೆಂಬರ್ 13 ರವರೆಗೆ ಪೂರ್ವ ರಾಜಸ್ಥಾನ ಮತ್ತು ಡಿಸೆಂಬರ್ 10ರಂದು ಉತ್ತರಾಖಂಡದಲ್ಲಿ ಇದೇ ಶೀತದ ಪ್ರಮಾಣ ಹೆಚ್ಚಿರಲಿದೆ. ಇನ್ನು ಈ ವಾರವರೀ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಪಶ್ಚಿಮ ರಾಜಸ್ಥಾನದಾದ್ಯಂತ ಚಳಿ ಪ್ರಮಾಣ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ಸೋಮವಾರ (ಡಿಸೆಂಬರ್ 09) ಹಿಮಾಚಲ ಪ್ರದೇಶದಲ್ಲಿ ಈ ಋತುವಿನಲ್ಲಿ ಮೊದಲ ಹಿಮಪಾತವಾಗಿದೆ. ಇದರ ಪರಿಣಾಮ ಎರಡು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಸುಮಾರು 15 ರಸ್ತೆಗಳನ್ನು ಬಂದ್ ಮಾಡಲಾಗಿದೆ ಎಂದು ಎಸ್‌ಇಒಸಿ ವರದಿ ಮಾಡಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡದಲ್ಲಿ ಹಿಮ ಆವರಿಸಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಡಿಸೆಂಬರ್ 12ರ ವರೆಗೆ ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಪೂರ್ವ ಉತ್ತರ ಪ್ರದೇಶ, ಅಸ್ಸಾಂ, ಮಿಜೋರಾಂ ಮತ್ತು ತ್ರಿಪುರದ ಕೆಲವು ಪ್ರದೇಶಗಳಲ್ಲಿ ಸಂಜೆ ಅಥವಾ ಮುಂಜಾನೆ ವೇಳೆ ದಟ್ಟವಾದ ಮಂಜು ಕವಿದಿರಲಿದೆ. ಚಂಡೀಗಢ, ಹರಿಯಾಣ ಮತ್ತು ಪಂಜಾಬ್‌ನಲ್ಲಿಯೂ ಸಹ ಇದೇ ವಾತಾವರಣ ಇರಲಿದೆ ಎಂದು ತಿಳಿಸಿದೆ.
ಅಲ್ಲದೆ, ಡಿಸೆಂಬರ್ 10 ಮತ್ತು 11ರಂದು, ಪಶ್ಚಿಮ ಬಂಗಾಳ, ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ದಟ್ಟ ಮಂಜು ಇರಲಿದೆ. ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದಾದ್ಯಂತ ಕನಿಷ್ಠ ತಾಪಮಾನವು ಮುಂದಿನ ಮೂರು ದಿನಗಳಲ್ಲಿ 2-4 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.












Click it and Unblock the Notifications