Ashwini Vaishnaw: ರೈಲಿನಲ್ಲಿ ಈ ಎಲ್ಲಾ ಪ್ರಯಾಣಿಕರಿಗೂ ಶೇಕಡಾ 55ರಷ್ಟು ವಿನಾಯಿತಿ ಕೊಟ್ಟಿದ್ದೇವೆ
ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಗಾಗಾ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತದೆ. ಇನ್ನು ರೈಲಿನಲ್ಲಿ ಈ ಎಲ್ಲಾ ಪ್ರಯಾಣಿಕರಿಗೂ ಶೇಕಡಾ 55ರಷ್ಟು ವಿನಾಯಿತಿ ಕೊಟ್ಟಿದ್ದೇವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಹಿರಿಯ ನಾಗರಿಕರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಪೂರ್ವದಲ್ಲಿದ್ದ ದರ ವಿನಾಯಿತಿ ಪುನರ್ ಆರಂಭ ಬಗ್ಗೆ ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರ ನೀಡದ ಸಚಿವರು, ಭಾರತೀಯ ರೈಲ್ವೆ ಈಗಾಗಲೇ ಎಲ್ಲಾ ಪ್ರಯಾಣಿಕರಿಗೆ ದರದಲ್ಲಿ ಶೇಕಡಾ 55ರಷ್ಟು ವಿನಾಯಿತಿ ನೀಡುತ್ತಿದೆ ಎನ್ನುವ ಮಾಹಿತಿಯನ್ನು ನೀಡಿದರು.

ಅಹಮದಾಬಾದ್‌ನಲ್ಲಿ ಬುಲೆಟ್ ರೈಲು ಯೋಜನೆ ಪ್ರಗತಿ ಪರಿಶೀಲನೆ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲುಪಬೇಕಾದ ಸ್ಥಳಕ್ಕೆ ಪ್ರತಿ ಟಿಕೆಟ್‌ಗೆ 100 ರೂಪಾಯಿ ವೆಚ್ಚ ಆದರೆ, ರೈಲ್ವೆ ಕೇವಲ 45 ರೂಪಾಯಿ ಮಾತ್ರ ವಿಧಿಸುತ್ತಿದೆ. ಶೇಕಡಾ 55ರಷ್ಟು ವಿನಾಯಿತಿಯನ್ನು ಎಲ್ಲಾ ಪ್ರಯಾಣಿಕರಿಗೂ ನೀಡುತ್ತಿದೆ ಎಂದರು.
ಮಾರ್ಚ್ 2020ರಲ್ಲಿ ಕೊರೊನಾ ಲಾಕ್‌ಡೌನ್ ಜಾರಿಗೂ ಮುನ್ನಾ ಹಿರಿಯ ನಾಗರಿಕರು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲು ದರದಲ್ಲಿ ಶೇಕಡಾ 50ರಷ್ಟು ವಿನಾಯಿತಿಯನ್ನು ರೈಲ್ವೆ ನೀಡುತಿತ್ತು. ಲಾಕ್‌ಡೌನ್ ಸಮಯದಲ್ಲಿ ರೈಲ್ವೇ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ಆದರೆ ಜೂನ್ 2022ರಲ್ಲಿ ಪೂರ್ಣ ಪ್ರಮಾಣದ ಸೇವೆ ಪುನರಾರಂಭ ಆದಾಗ, ರೈಲ್ವೆ ಸಚಿವಾಲಯ ಈ ವಿನಾಯಿತಿಗಳನ್ನು ಪುನರ್ ಆರಂಭಿಸಲಿಲ್ಲ.
ಅಂದಿನಿಂದ ಸಂಸತ್ತಿನ ಉಭಯ ಸದನಗಳು ಸೇರಿ ವಿವಿಧ ವೇದಿಕೆಗಳಲ್ಲಿ ಈ ಸಮಸ್ಯೆ ಬಗ್ಗೆ ಪ್ರಶ್ನಿಸಲಾಗುತಿತ್ತು. ರಾಜ್ಯಸಭೆ ಹಾಗೂ ರಾಜ್ಯಸಭೆಯ ವಿವಿಧ ಸಂದರ್ಭಗಳಲ್ಲಿ ಹಲವು ಸಂಸದರು ಈ ಕುರಿತು ಪ್ರಶ್ನೆ ಕೇಳಿದ್ದರೂ, ಸಚಿವರು ಇದೇ ನಿಲುವು ಹೊಂದಿದ್ದರು.
ಈ ಹಿಂದೆ ಮಧ್ಯಪ್ರದೇಶ ಮೂಲದ ಚಂದ್ರಶೇಖರ್ ಗೌರ್ ಅವರು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿದ ಭಾರತೀಯ ರೈಲ್ವೇ 2022-23ರ ಹಣಕಾಸು ವರ್ಷದಲ್ಲಿ ಸರಿಸುಮಾರು 15 ಕೋಟಿ ಹಿರಿಯ ನಾಗರಿಕರಿಂದ ಸುಮಾರು 2,242 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಹೇಳಿತ್ತು.
ಕಾಯ್ದಿರಿಸಿದ 20,000 ಟಿಕೆಟ್ ರದ್ದು
ಮಳೆಗಾಲ ಮುಗಿದು ಇದೀಗ ಚಳಿಗಾಲ ಆವರಿಸಿದ್ದು, ಬಹುತೇಕ ರಾಜ್ಯಗಳಲ್ಲಿ ಬೆಳಗ್ಗೆ 10 ಗಂಟೆಯಾದರೂ ಮಂಜು ಕವಿದ ವಾತಾವರಣವೇ ಮುಂದುವರೆಯುತ್ತಿದೆ. ಅದರಲ್ಲೂ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ದಟ್ಟವಾದ ಮಂಜು ಕವಿದ ಹಿನ್ನೆಲೆ ಭಾರತೀಯ ರೈಲ್ವೆಯ ಮೊರಾದಾಬಾದ್ ವಿಭಾಗವು ಡಿಸೆಂಬರ್ 2023ರಲ್ಲಿ 20,000 ಕಾಯ್ದಿರಿಸಿದ ಟಿಕೆಟ್‌ಗಳ ರದ್ದು ಮಾಡಲಾಗಿದೆ. ಹಾಗಾದರೆ ರೈಲ್ವೇ ಇಲಾಖೆಗೆ ಆದ ನಷ್ಟ ಎಷ್ಟು ಕೋಟಿ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
ಮೊರಾದಾಬಾದ್ ವಿಭಾಗದ ಡಿವಿಜನಲ್ ರೈಲ್ವೇ ಮ್ಯಾನೇಜರ್ ರಾಜ್ ಕುಮಾರ್ ಸಿಂಗ್ ನೀಡಿದ ಮಾಹಿತಿ ಪ್ರಕಾರ, ರಿಸರ್ವೇಶನ್ ಅಡಿಯಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರು ರೈಲುಗಳ ವಿಳಂಬದಿಂದ ತಮ್ಮ ಟಿಕೆಟ್‌ಗಳನ್ನು ರದ್ದುಪಡಿಸಿದ ಹಿನ್ನೆಲೆ ಇಲಾಖೆಗೆ ಸುಮಾರು 1.22 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟು ರದ್ದಾದ ಕಾಯ್ದಿರಿಸಲಾದ ಟಿಕೆಟ್‌ಗಳಲ್ಲಿ 4,230 ಬರೇಲಿಯಲ್ಲಿ ರದ್ದುಗೊಳಿಸಲಾಗಿದ್ದು, 3,239 ಟಿಕೆಟ್‌ಗಳನ್ನು ಮೊರಾದಾಬಾದ್‌ನಲ್ಲಿ ರದ್ದುಗೊಳಿಸಲಾಗಿದೆ. 3,917 ಟಿಕೆಟ್‌ಗಳು ಹರಿದ್ವಾರದಲ್ಲಿ ಮತ್ತು 2,448 ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ ಮತ್ತು ಇತರವುಗಳಲ್ಲಿ 2,448 ರದ್ದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಮತ್ತೊಂದೆಡೆ ಜನವರಿ 6ರವರೆಗೆ ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಪೂರ್ವ ರಾಜಸ್ಥಾನದ ಕೆಲವು ಭಾಗಗಳಲ್ಲಿ ರಾತ್ರಿ ಮತ್ತು ಬೆಳಗ್ಗೆ ವೇಳೆ ದಟ್ಟವಾದ ಮಂಜಿನ ಪರಿಸ್ಥಿತಿಗಳು ಮುಂದುವರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications