ಬೀದಿ ನಾಯಿಗಳ ದಾಳಿಯಿಂದ ಹೆಸರಾಂತ ಉದ್ಯಮಿ ಸಾವು- ವರದಿ, ವಿವರ
ಅಹಮದಾಬಾದ್, ಅಕ್ಟೋಬರ್ 23: ಹೆಸರಾಂತ ಉದ್ಯಮಿ ಪರಾಗ್ ದೇಸಾಯಿ ( 49 ವರ್ಷ ) ಅವರು ಇಂದು ನಿಧನರಾಗಿದ್ದಾರೆ. ವಾಘ್ ಬಕ್ರಿ ಟೀ ಗ್ರೂಪ್‌ನ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ದೇಸಾಯಿ ಅವರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದವು.
ಪರಾಗ್ ದೇಸಾಯಿ ಅವರ ನಿವಾಸದ ಹೊರಗೆ ಬೀದಿ ನಾಯಿಗಳ ದಾಳಿ ಮಾಡಿದ್ದರಿಂದ ಅವರು ಭಾನುವಾರ ಮೃತಪಟ್ಟಿದ್ದಾರೆ.

ಅಕ್ಟೋಬರ್ 15 ರಂದು ಮನೆಗಳ ಮುಂದೆ ಹಿಂಡಾಗಿ ಬಂದಿದ್ದ ಬೀದಿ ನಾಯಿಗಳನ್ನು ಓಡಿಸಲು ಪರಾಗ್ ದೇಸಾಯಿ ಮಂದಾಗಿದ್ದರು. ಈ ವೇಳೆ ನಾಯಿಗಳು ಪರಾಗ್ ಅವರ ಮೇಲೆ ಮಾರಾಣಾಂತಿಕ ದಾಳಿ ಮಾಡಿದ್ದವು. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಭಾನುವಾರ ಮೃತಪಟ್ಟಿದ್ದಾರೆ ಎಂದು ' ಅಹಮದಾಬಾದ್ ಮಿರರ್ ' ಪತ್ರಿಕೆ ವರದಿ ಮಾಡಿದೆ.
ಪರಾಗ್ ದೇಸಾಯಿ ನಿವಾಸದ ಭದ್ರತಾ ಸಿಬ್ಬಂದಿ ಘಟನೆಯ ಬಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಆ ನಂತರ ಅವರನ್ನು ಅಹಮದಾಬಾದ್‌ನ ಶೆಲ್ಬಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶೆಲ್ಬಿ ಆಸ್ಪತ್ರೆಯಲ್ಲಿ ದೇಸಾಯಿ ಅವರಿಗೆ ಒಂದು ದಿನ ಚಿಕಿತ್ಸೆ ನೀಡಲಾಗಿದೆ. ಆ ನಂತರ ದೇಸಾಯಿ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಝೈಡಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು ಎಂದು ತಿಳಿದುಬಂದಿದೆ.
ಝೈಡಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಮಿದುಳಿನ ರಕ್ತಸ್ರಾವಕ್ಕೆ ಒಳಗಾಗಿ ದೇಸಾಯಿ ಅವರು ಭಾನುವಾರ ಮೃತಪಟ್ಟಿದ್ದಾರೆ.
ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಮತ್ತು ರಾಜ್ಯಸಭಾ ಸದಸ್ಯ ಶಕ್ತಿಸಿಂಗ್ ಗೋಹಿಲ್ ಅವರು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ದೇಸಾಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
'ತುಂಬಾ ದುಃಖದ ಸುದ್ದಿ ಬರುತ್ತಿದೆ. ವಾಘ್ ಬಕ್ರಿ ಟೀ ನಿರ್ದೇಶಕ ಹಾಗೂ ಮಾಲೀಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪರಾಗ್ ದೇಸಾಯಿ ಅವರು ಭಾನುವಾರ ನಿಧನರಾಗಿದ್ದಾರೆ. ನಾಯಿಗಳ ದಾಳಿ ವೇಳೆ ಕೆಳಗೆ ಬಿದ್ದ ನಂತರ ಅವರಿಗೆ ಮೆದುಳಿನ ರಕ್ತಸ್ರಾವವಾಗಿತ್ತು. ಅವರ ಆತ್ಮಕೆ ಶಾಂತಿ ಸಿಗಲಿ. ಭಾರತದಾದ್ಯಂತ ಇರುವ ಇಡೀ ವಾಘ್ ಬಕ್ರಿ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದು ಅವರು ಬರೆದುಕೊಂಡಿದ್ದಾರೆ.
ದೇಸಾಯಿ ಅವರು ವಾಘ್ ಬಕ್ರಿ ಟೀ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಸೇಶ್ ದೇಸಾಯಿ ಅವರ ಪುತ್ರರು. ಅವರು ಪತ್ನಿ ವಿದಿಶಾ ಮತ್ತು ಮಗಳು ಪರಿಶಾ ಅವರನ್ನು ಅಗಲಿದ್ದಾರೆ.
ಎಕ್ಸ್‌ಚೆಂಜ್ ಫಾರ್ ಮಿಡಿಯಾ ಪ್ರಕಾರ, ದೇಸಾಯಿ ಅವರು 30 ವರ್ಷಗಳ ಉದ್ಯಮಶೀಲತೆಯ ಅನುಭವವನ್ನು ಹೊಂದಿದ್ದರು. ಟೀ ಗ್ರೂಪ್‌ನ ಅಂತರರಾಷ್ಟ್ರೀಯ ವ್ಯಾಪಾರ, ಮಾರಾಟ ಮತ್ತು ಮಾರ್ಕೆಟಿಂಗ್ ಅನ್ನು ಮುನ್ನಡೆಸಿದ್ದರು. ಅವರು ಭಾರತೀಯ ಕೈಗಾರಿಕೆಗಳ ಒಕ್ಕೂಟದಂತಹ ಪ್ರಮುಖ ಉದ್ಯಮ ವೇದಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಉದ್ಯಮ ಕ್ಷೇತ್ರದಲ್ಲಿ ಅಪಾರ ಮೆಚ್ಚುಗೆಗೆ ಕಾರಣವಾಗಿದ್ದರು.
ದೇಸಾಯಿ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.












Click it and Unblock the Notifications