ಇನ್ಮುಂದೆ 15 ದಿನಗಳಲ್ಲೇ ನಿಮ್ಮ ಕೈಸೇರಲಿದೆ ವೋಟರ್ ಐಡಿ: ಚುನಾವಣಾ ಆಯೋಗದಿಂದ ಹೊಸ ಸೇವೆ
ಭಾರತೀಯ ಚುನಾವಣಾ ಆಯೋಗವು ಮತದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಮತದಾರರ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಚುನಾವಣಾ ಆಯೋಗವು ಇನ್ನು ಮುಂದೆ 15 ದಿನಗಳಲ್ಲೇ ಮತದಾರರ ಫೋಟೋ ಗುರುತಿನ ಚೀಟಿಗಳನ್ನು ತಲುಪಿಸುವುದಾಗಿ ತಿಳಿಸಿದೆ. ಮತದಾರರ ಪಟ್ಟಿಯಲ್ಲಿ ಯಾವುದೇ ನವೀಕರಣದ 15 ದಿನಗಳಲ್ಲಿ ಹೊಸ ಐಡಿ ಮತದಾರರ ಕೈಸೇರಲಿದೆ. ಇದನ್ನು ಖಚಿತಪಡಿಸಿಕೊಳ್ಳಲು ಹೊಸ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು ಕೂಡ ಪರಿಚಯಿಸಿದೆ. ಹೊಸದಾಗಿ ದಾಖಲಾದ ಮತದಾರರು ಅಥವಾ ತಮ್ಮ ವಿವರಗಳಲ್ಲಿ ಬದಲಾವಣೆಗಳನ್ನು ಕೋರಿರುವ ಮತದಾರರಿಗೂ ಈ ಸೇವೆ ಸಿಗಲಿದೆ.
ಪ್ರಸ್ತುತ ಮತದಾರರ ಗುರುತಿನ ಚೀಟಿ (EPIC) ಮತದಾರರನ್ನು ತಲುಪಲು ಒಂದು ತಿಂಗಳಿಗಿಂತಲೂ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಇನ್ನು ಮುಂದೆ ಕೇವಲ 15 ದಿನಗಳಲ್ಲೇ ಇದು ಜನರ ಕೈಸೇರಲಿದೆ. ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಈ ಪರಿಷ್ಕೃತ ವ್ಯವಸ್ಥೆಯು, ಅಂಚೆ ಇಲಾಖೆ ಮೂಲಕ ಮತದಾರರ ಕಾರ್ಡ್ ಸಿದ್ಧವಾಗುವುದರಿಂದ ಹಿಡಿದು ವಿತರಣೆಯವರೆಗೆ ನೈಜ-ಸಮಯದ ಟ್ರ್ಯಾಕಿಂಗ್ ಸೇವೆಯೂ ಸಿಗಲಿದೆ. ಈ ರೀತಿ ಸೇವಾ ವಿತರಣೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.

SMS ಮೂಲಕ ಪ್ರತಿ ಅಪ್ಡೇಟ್, ಟ್ರ್ಯಾಕಿಂಗ್ ಸೇವೆ
ಮತದಾರರು ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಎಸ್‌ಎಂಎಸ್ ಮೂಲಕ ಅಪ್‌ಡೇಟ್ ಸ್ವೀಕರಿಸುತ್ತಾರೆ, ಅವರ EPIC ಕಾರ್ಡ್ ಸ್ಥಿತಿಯ ಬಗ್ಗೆ ಅವರಿಗೆ ತಿಳಿಸಲಾಗುತ್ತದೆ. ಈ ಉಪಕ್ರಮದ ಭಾಗವಾಗಿ ಚುನಾವಣಾ ಆಯೋಗವು ತನ್ನ ಹೊಸ ECINet ಪ್ಲಾಟ್‌ಫಾರ್ಮ್‌ನಲ್ಲಿ ಮೀಸಲಾದ IT ಮಾಡ್ಯೂಲ್ ಅನ್ನು ಪ್ರಾರಂಭಿಸಿದೆ. ಇದು ಅಪ್ಲಿಕೇಶನ್ ಪ್ರೋಗ್ರಾಂ ಇಂಟರ್ಫೇಸ್ ಮೂಲಕ ಅಂಚೆ ಇಲಾಖೆ ಸಹಯೋಗದಲ್ಲಿ ಕಾರ್ಯನಿರ್ವಹಿಸಲಿದೆ.
ಹೊಸ ವ್ಯವಸ್ಥೆಯು ಚುನಾವಣಾ ಸೇವಾ ವಿತರಣೆಯನ್ನು ಹೆಚ್ಚಿಸುವ ಮತ್ತು ದತ್ತಾಂಶ ಸುರಕ್ಷತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಚುನಾವಣಾ ಆಯೋಗದ ವಿಶಾಲವಾದ ಡಿಜಿಟಲ್ ರೂಪಾಂತರ ಕಾರ್ಯತಂತ್ರದ ಭಾಗ ಎಂದು ಹೇಳಿಕೊಂಡಿದೆ. ಈ ಮರು-ವಿನ್ಯಾಸಗೊಳಿಸಲಾದ ಪ್ರಕ್ರಿಯೆಯು ನಾಗರಿಕ-ಕೇಂದ್ರಿತ ಆಡಳಿತಕ್ಕೆ ಆಯೋಗದ ಬದ್ಧತೆಗೆ ಪ್ರತಿಬಿಂಬ ಎನ್ನಲಾಗಿದೆ. ನಾಗರಿಕರಿಗೆ ಚುನಾವಣೆಯ ಅನುಭವವನ್ನು ಸುಧಾರಿಸಲು ಆಯೋಗವು ಕಳೆದ ನಾಲ್ಕು ತಿಂಗಳುಗಳಲ್ಲಿ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದೆ. ಇದರ ಮುಂದುವರಿದ ಭಾಗವಾಗಿ ಈ ಹೊಸ ಹಾಗೂ ವೇಗವಾದ ಸೇವೆಗೆ ಚಾಲನೆ ನೀಡಿದೆ.

ತನ್ನ ಎಲ್ಲ ಮತದಾರರಿಗೆ ತ್ವರಿತ ಮತ್ತು ಪರಿಣಾಮಕಾರಿ ಚುನಾವಣಾ ಸೇವೆಗಳನ್ನು ಒದಗಿಸುವುದು ಚುನಾವಣಾ ಆಯೋಗದ ಪ್ರಮುಖ ಉದ್ದೇಶ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಅಧಿಕಾರ ವಹಿಸಿಕೊಂಡ ನಂತರ ಕಳೆದ ನಾಲ್ಕು ತಿಂಗಳಲ್ಲಿ 25 ಹೊಸ ಉಪಕ್ರಮಗಳನ್ನು ಆಯೋಗ ಕೈಗೊಂಡಿದೆ. ಎತ್ತರದ ಕಟ್ಟಡಗಳು ಮತ್ತು ವಸಾಹತುಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸುವುದು, ಒಂದು ಮತಗಟ್ಟೆಯಲ್ಲಿ ಗರಿಷ್ಠ ಸಂಖ್ಯೆಯ ಮತದಾರರನ್ನು 1,200ಕ್ಕೆ ಸೀಮಿತಗೊಳಿಸುವುದು ಮತ್ತು ಎಲ್ಲ ಮತಗಟ್ಟೆಗಳ ವೆಬ್‌ಕಾಸ್ಟಿಂಗ್ ಅನ್ನು ವಿಸ್ತರಿಸುವುದು ಸೇರಿದಂತೆ ಹಲವು ಹೊಸ ನಿಯಮಗಳನ್ನು ಜಾರಿ ಮಾಡಿದೆ.












Click it and Unblock the Notifications