ವಕ್ಫ್ ತಿದ್ದುಪಡಿ ಕಾಯ್ದೆ; ಪಶ್ಚಿಮ ಬಂಗಾಳದ ಮತ್ತೊಂದು ಜಿಲ್ಲೆಯಲ್ಲೂ ಹಿಂಸಾಚಾರ
ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಮುಸ್ಲಿಂ ಸಂಘಟನೆಗಳು ಪಶ್ಚಿಮ ಬಂಗಾಳದ ವಿವಿಧ ಕಡೆಗಳಲ್ಲಿ ಭಾರಿ ಪ್ರತಿಭಟನೆ ಮಾಡುತ್ತಿವೆ. ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರ ನಡೆದ ಬಳಿಕ ಇದೀಗ ದಕ್ಷಿಣ 24 ಪರಗಣಗಳಲ್ಲಿ ಕೂಡ ವಕ್ಫ್ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಘರ್ಷಣೆ ನಡೆದಿದೆ. ಪ್ರತಿಭಟನೆ ನಡೆಸುತ್ತಿರುವ ಜಾತ್ಯತೀತ ರಂಗ (ಐಎಸ್‌ಎಫ್) ಬೆಂಬಲಿಗರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ ನಂತರ ಹಿಂಸೆ ಭುಗಿಲೆದ್ದಿದೆ.
ಸೋಮವಾರ ದಕ್ಷಿಣ 24 ಪರಗಣದ ಭಂಗಾರ್‌ನಲ್ಲಿ ಭುಗಿಲೆದ್ದ ಘರ್ಷಣೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಹಲವು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಐಎಸ್‌ಎಫ್ ಪಕ್ಷದ ನಾಯಕ ಮತ್ತು ಭಂಗಾರ್ ಶಾಸಕ ನೌಶಾದ್ ಸಿದ್ದಿಕ್ ಅವರು ವಕ್ಫ್ (ತಿದ್ದುಪಡಿ) ಕಾಯ್ದೆ ವಿರೋಧಿ ರ್‍ಯಾಲಿಯಲ್ಲಿ ಭಾಗವಹಿಸಲು ಮಧ್ಯ ಕೋಲ್ಕತ್ತಾದ ರಾಮಲೀಲಾ ಮೈದಾನದ ಕಡೆಗೆ ಹೋಗುತ್ತಿದ್ದಾಗ ಐಎಸ್‌ಎಫ್ ಬೆಂಬಲಿಗರನ್ನು ಪೊಲೀಸರು ತಡೆದಿದ್ದರಿಂದ ಆಕ್ರೋಶ ಭುಗಿಲೆದ್ದಿದೆ.

ಪೊಲೀಸ್ ಮೂಲಗಳ ಪ್ರಕಾರ, ಬಸಂತಿ ಹೆದ್ದಾರಿಯ ಭೋಜೆರ್‌ಹತ್ ಬಳಿ ಪ್ರತಿಭಟನಾಕಾರರನ್ನು ತಡೆಯಲಾಯಿತು, ಅಲ್ಲಿ ಭಾಂಗರ್ ಮತ್ತು ನೆರೆಯ ಪ್ರದೇಶಗಳಾದ ಮಿನಾಖಾನ್ ಮತ್ತು ಸಂದೇಶಖಾಲಿಯಿಂದ ಹೆಚ್ಚಿನ ಸಂಖ್ಯೆಯ ಐಎಸ್‌ಎಫ್ ಕಾರ್ಯಕರ್ತರು ಸೇರಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಜನರ ಗುಂಪು ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಯತ್ನಿಸಿದಾಗ ಉದ್ವಿಗ್ನತೆ ಹೆಚ್ಚಾಯಿತು, ಬಳಿಕ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ಉಂಟಾಯಿತು. "ತಿಭಟನಾಕಾರರು ಕೆಲವು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದರಿಂದ ಹಲವು ಸಿಬ್ಬಂದಿ ಗಾಯಗೊಂಡರು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಐಎಸ್‌ಎಫ್ ಬೆಂಬಲಿಗರು ಪ್ರತಿಭಟನೆಯಲ್ಲಿ ರಸ್ತೆಯಲ್ಲಿ ಕುಳಿತಿದ್ದರಿಂದ ಘರ್ಷಣೆಯು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹಿರಿಯ ಅಧಿಕಾರಿಗಳು ಸೇರಿದಂತೆ ದೊಡ್ಡ ಪೊಲೀಸ್ ಪಡೆಗಳನ್ನು ನಿಯೋಜಿಸಲಾಯಿತು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು ಪ್ರತಿಭಟನಾಕಾರರನ್ನು ಚದುರಿಸಲಾಗಿದೆ.
ರಾಮಲೀಲಾ ಮೈದಾನದಲ್ಲಿ ನಡೆದ ರ್ಯಾಲಿಗೆ ಸರಿಯಾದ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯದ ಕಾರಣ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು ಎಂದು ಪಿಟಿಐ ವರದಿ ಮಾಡಿದೆ.
ಹಿಂಸಾಚಾರದ ನಡುವೆಯೂ, ಸಿದ್ದೀಕ್ ರಾಮಲೀಲಾ ಮೈದಾನದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಖಂಡಿಸಿದ್ದಾರೆ. ತಕ್ಷಣ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಕಾನೂನು ಕೇವಲ ಮುಸ್ಲಿಮರ ಮೇಲಿನ ದಾಳಿಯಲ್ಲ, ಇದು ಸಂವಿಧಾನದ ಮೇಲಿನ ದಾಳಿ. ನಾವು ಈ ಕಾಯ್ದೆಯನ್ನು ಒಪ್ಪುವುದಿಲ್ಲ, ಅಂತಹ ಕಾನೂನುಗಳನ್ನು ಬೆಂಬಲಿಸುವ ಸರ್ಕಾರ ಹೋಗಬೇಕು ಎಂದು ಅವರು ಹೇಳಿದ್ದಾರೆ.












Click it and Unblock the Notifications