ಮಣಿಪುರ, ಹರಿಯಾಣ ಬಳಿಕ ಸಿಕ್ಕಿಂನಲ್ಲಿ ಭುಗಿಲೆದ್ದ ಹಿಂಸಾಚಾರ: ಯುವ ಮುಖಂಡನ ನಿಗೂಢ ಸಾವಿನ ಬಳಿಕ ಗಲಭೆ
ಗ್ಯಾಂಗ್ಟಕ್, ಆಗಸ್ಟ್ 07: ಸಿಕ್ಕಿಂನ ನಾಮ್ಚಿ ಪಟ್ಟಣದಲ್ಲಿ ಸೋಮವಾರ ಹಿಂಸಾಚಾರ ಭುಗಿಲೆದ್ದಿದೆ. 21 ವರ್ಷದ ಯುವ ಮುಖಂಡನ ನಿಗೂಢ ಸಾವಿನ ಪ್ರಕರಣವೊಂದು ಈ ಹಿಂಸಾಚಾರಕ್ಕೆ ಕಾರಣವಾಗಿದೆ. ತ್ವರಿತ ನ್ಯಾಯಕ್ಕಾಗಿ ಆಗ್ರಹಿಸಿ ನಡೆದ ರ್ಯಾಲಿಯಲ್ಲಿ ಕಲ್ಲು ತೂರಾಟ ನಡೆದಿದೆ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಅಶ್ರುವಾಯು ಶೆಲ್‌ಗಳನ್ನು ಸಿಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ ಎಂದು ನಾಮ್ಚಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

ನಾಮ್ಚಿ ಪಟ್ಟಣದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ನಾಮ್ಚಿಯಲ್ಲಿ ಪೊಲೀಸ್ ಗಸ್ತು ತೀವ್ರಗೊಳಿಸಲಾಗಿದ್ದು, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಲ್ ಸಿಕ್ಕಿಂ ಗುರುಂಗ್ ತಮು ಬೌದ್ಧ ಸಂಘದಿಂದ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಹಲವಾರು ಸಂಘಟನೆಗಳು ಮತ್ತು ಸಮಾಜದ ವಿವಿಧ ಮುಖಂಡರು ನಾಮ್ಚಿ ಪಟ್ಟಣದಲ್ಲಿ ಸೇರಿದ್ದರು. ಈ ವೇಳೆ ಹಿಂಸಾಚಾರ ಭುಗಿಲೆದ್ದಿದೆ.

ನಾಮ್ಚಿ ಸರಕಾರಿ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ಪರಿಷತ್ತಿನ ಅಧ್ಯಕ್ಷ ಯುವ ಮುಖಂಡ ಪದಂ ಗುರುಂಗ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಜೂನ್ 28 ರಂದು ನಾಮ್ಚಿಯ ಕಾಜಿತಾರ್ ಪ್ರದೇಶದ ಚರಂಡಿಯಲ್ಲಿ ಅವರ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ರಾಜಕೀಯ ವಾಸನೆ ಬಡಿಯುತ್ತಿದೆ. ಪ್ರಕರಣವನ್ನು ಆದಷ್ಟು ಬೇಗನೇ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆದಿದೆ.
ಪ್ರಕರಣವನ್ನು ಕೊಲೆ ಎಂದು ಘೋಷಿಸಲು ಮತ್ತು ಅಪರಾಧಿಗಳನ್ನು ಬಂಧಿಸಲು ಪೊಲೀಸರ ಬಳಿ ಸಾಕಷ್ಟು ಪುರಾವೆಗಳಿವೆ ಎಂದು ಪ್ರತಿಭಟನೆಕಾರರು ಹೇಳಿದ್ದಾರೆ.
ಮಣಿಪುರ ಹಾಗೂ ಹರಿಯಾಣದಲ್ಲಿ ಜನಾಂಗೀಯ ಘರ್ಷಣೆಗಳು ನಡೆಯುತ್ತಿವೆ. ಇದೇ ವೇಲೆ, ಸಿಕ್ಕಿಂಬಲ್ಲಿ ಹಿಂಸಾಚಾರ ಭುಗಿಲೆದ್ದಿರುವುದು ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications