ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 9 ಜನ ಸಾವು, ಹಲವರಿಗೆ ಗಾಯ!
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಒಂಬತ್ತು ಜನ ಸಾವನ್ನಪ್ಪಿರುವುದು ವರದಿಯಾಗಿದೆ. ಘಟನೆಯಲ್ಲಿ ಹಲವಾರು ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಹಲವು ದಿನಗಳಿಂದ ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಕಲಹ ಮುಂದುವರೆದಿದೆ.
ಕಳೆದ 24 ಗಂಟೆಗಳಲ್ಲಿ ಮಹಿಳೆ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಸೇನೆಯ ಮೂಲಗಳ ಪ್ರಕಾರ ಖಮೆನ್ಲೋಕ್ ಪ್ರದೇಶದಲ್ಲಿ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಈ ಸಾವುಗಳು ಸಂಭವಿಸಿವೆ. ಗಾಯಗೊಂಡ ಹಲವರನ್ನು ಚಿಕಿತ್ಸೆಗಾಗಿ ಇಂಫಾಲಕ್ಕೆ ರವಾನಿಸಲಾಗಿದೆ. ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟವರಲ್ಲಿ ಕೆಲವರು ತಮ್ಮ ದೇಹದ ಮೇಲೆ ಗುರುತುಗಳನ್ನು ಹೊಂದಿದ್ದಾರೆ ಮತ್ತು ಅನೇಕ ಗುಂಡಿನ ಗಾಯಗಳನ್ನು ಹೊಂದಿದ್ದಾರೆ. ಜನಾಂಗೀಯ ಘರ್ಷಣೆಗಳಿಂದಾಗಿ ಒಂದು ತಿಂಗಳಿನಿಂದ ಉದ್ವಿಗ್ನವಾಗಿರುವ ಈಶಾನ್ಯ ರಾಜ್ಯದಲ್ಲಿ ಹೊಸ ಸುತ್ತಿನ ಹಿಂಸಾಚಾರದ ನಂತರ ಕರ್ಫ್ಯೂ ಸಡಿಲಿಕೆಯನ್ನು ನಿರ್ಬಂಧಿಸಲಾಗಿದೆ.

ಸ್ಥಳೀಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಶಾಂತಿ ಕಾಪಾಡಲು ಕರ್ಫ್ಯೂ, ಇಂಟರ್‌ನೆಟ್ ಸ್ಥಗಿತಗೊಳಿಸಿದರೂ ಹಿಂಸಾಚಾರ ಕಡಿಮೆಯಾಗಿಲ್ಲ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ ಸ್ಥಳಾಂತರಗೊಂಡ 50,000ಕ್ಕೂ ಹೆಚ್ಚು ಜನರು ಪ್ರಸ್ತುತ ರಾಜ್ಯಾದ್ಯಂತ 349 ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. 253 ಚರ್ಚ್‌ಗಳನ್ನು ಸುಟ್ಟು ಹಾಕಲಾಗಿದೆ ಎಂದು ವರದಿಗಳಿವೆ.
ಹಿಂಸಾಚಾರದಲ್ಲಿ ಇಲ್ಲಿಯವರೆಗೆ ಸುಮಾರು 100 ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ಸುಮಾರು 10,000 ಯೋಧರನ್ನು ನಿಯೋಜಿಸಲಾಗಿದೆ.
ಏತನ್ಮಧ್ಯೆ, ಇಂಫಾಲ್ ಪೂರ್ವದ ಬಿಜೆಪಿ ಶಾಸಕರೊಬ್ಬರು ತಮ್ಮ ಮನೆ ಮುಂದೆ ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸಲು ಡಬ್ಬವನ್ನು ಇರಿಸಿದ್ದಾರೆ. ರೈಫಲ್‌ಗಳು ಸೇರಿ ಇದುವರೆಗೂ 130 ಶಸ್ತ್ರಾಸ್ತ್ರಗಳನ್ನು ಈ ಡಬ್ಬದಲ್ಲಿ ಇಟ್ಟುಹೋಗಲಾಗಿದೆ. ಇನ್ನೊಬ್ಬ ಸಚಿವರು ಕೂಡ ಇದೇ ರೀತಿ ಮಾಡಿದ್ದು, ತಮ್ಮ ಮನೆಯ ಮುಂದೆ ಪೋಸ್ಟರ್‌ವೊಂದನ್ನು ಹಾಕಿಕೊಂಡಿದ್ದಾರೆ. ನೀವು ಕದ್ದಿರುವ ಶಸ್ತ್ರಾಸ್ತ್ರಗಳನ್ನು ಇಲ್ಲಿ ಬಿಡಿ' ಎಂದು ಇಂಗ್ಲಿಷ್ ಮತ್ತು ಮೈತೇಯಿ ಭಾಷೆಯಲ್ಲಿ ಬರೆದು ಪೋಸ್ಟರ್ ಅಂಟಿಸಿದ್ದಾರೆ.












Click it and Unblock the Notifications