Gyanvapi Mosque: ಜ್ಞಾನವ್ಯಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆಗೆ ಅನುಮತಿ ನೀಡಿದ ನ್ಯಾಯಾಲಯ
ವಾರಣಾಸಿ ನ್ಯಾಯಾಲಯವು ಶುಕ್ರವಾರ ಜ್ಞಾನವಾಪಿ ಮಸೀದಿ ಆವರಣದ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಅನುಮತಿ ನೀಡಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಯಿಂದ ಸಂಪೂರ್ಣ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಗೆ ನಿರ್ದೇಶನ ಕೋರಿ ಹಿಂದೂ ಪರ ವಕೀಲರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಯಿತು. ಜುಲೈ 14ರಂದು ವಾದ-ವಿವಾದ ಪೂರ್ತಿಯಾಗಿದ್ದು, ಇಂದು ಆದೇಶ ಹೊರಡಿಸಿದೆ.

ಜ್ಞಾನವಾಪಿ ಮಸೀದಿಯ ಹೊರಗೋಡೆಯ ಮೇಲಿರುವ ಶೃಂಗಾರ್ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ದೇವರ ವಿಗ್ರಹಗಳನ್ನು ಪ್ರತಿನಿತ್ಯ ಪೂಜಿಸಲು ಅನುಮತಿ ಕೋರಿ ಈ ವರ್ಷ ಮೇ ತಿಂಗಳಲ್ಲಿ ಐವರು ಮಹಿಳೆಯರು ಮತ್ತೊಂದು ಅರ್ಜಿ ಸಲ್ಲಿಸಿದ್ದರು.
ವಿಚಾರಣೆಯ ಸಮಯದಲ್ಲಿ, ಮಸೀದಿ ಸಮಿತಿಯು ಎಎಸ್ಐ ಸಮೀಕ್ಷೆಯನ್ನು ಕೋರಿ ಹಿಂದೂ ಪರ ವಕೀಲರ ಮನವಿಯನ್ನು ವಿರೋಧಿಸಿತು ಮತ್ತು ಮೊಘಲ್ ಚಕ್ರವರ್ತಿ ಔರಂಗಜೇಬ್ ಕ್ರೂರನಾಗಿರಲಿಲ್ಲ ಅಥವಾ ವಾರಣಾಸಿಯ ಭಗವಾನ್ ಆದಿ ವಿಶ್ವೇಶ್ವರ ದೇವಾಲಯವನ್ನು ಕೆಡವಲಿಲ್ಲ ಎಂದು ವಾರಣಾಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತು.
ಉಭಯ ಗುಂಪುಗಳ ನಡುವಿನ ವಾದ-ವಿವಾದ
ಆದಿ ವಿಶ್ವೇಶ್ವರ ದೇವಸ್ಥಾನದ ಮೇಲೆ ಮುಸ್ಲಿಂ ದಾಳಿಕೋರರು ದಾಳಿ ಮಾಡಿ ಧ್ವಂಸಗೊಳಿಸಿದರು ಮತ್ತು ರಾಜ ತೊಂಡಲ್ ಮಾಲ್ ಕ್ರಿಸ್ತಶಕ 1580 ಯಲ್ಲಿ ಅದೇ ಸ್ಥಳದಲ್ಲಿ ದೇವಾಲಯವನ್ನು ಪುನಃಸ್ಥಾಪಿಸಿದರು ಎಂಬ ಹಿಂದೂ ಪರ ವಕೀಲರ ವಾದವನ್ನು ಮುಸ್ಲಿಂ ಪರ ವಕೀಲರು ನಿರಾಕರಿಸಿದರು.
"ಮೊಘಲ್ ಚಕ್ರವರ್ತಿ ಔರಂಗಜೇಬ್ ಕ್ರೂರನಾಗಿರಲಿಲ್ಲ, ವಾರಣಾಸಿಯ ಯಾವುದೇ ಭಗವಾನ್ ಆದಿ ವಿಶ್ವೇಶ್ವರ ದೇವಸ್ಥಾನವನ್ನು ಕೆಡವಲಿಲ್ಲ" ಎಂದು ಮಸೀದಿ ಸಮಿತಿ ಹೇಳಿದೆ.
ಮಸೀದಿ ಸಮಿತಿಯು ತನ್ನ ಅರ್ಜಿಯಲ್ಲಿ ಕಳೆದ ವರ್ಷ ಜ್ಞಾನವಾಪಿ ಮಸೀದಿ ಆವರಣದಲ್ಲಿ ಯಾವುದೇ ಶಿವಲಿಂಗ ಕಂಡುಬಂದಿಲ್ಲ ಮತ್ತು ಪತ್ತೆಯಾಗಿದ್ದ ಶಿವಲಿಂಗದ ಆಕಾರದ ವಸ್ತುವು ವಾಸ್ತವವಾಗಿ ಫೌವಾರಾ (ಕಾರಂಜಿ) ಎಂದು ಹೇಳಿದೆ.
ಮೇ 16, 2022 ರಂದು, ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಾಪಿ ಮಸೀದಿಯ ನ್ಯಾಯಾಲಯದ ಆದೇಶದ ವೀಡಿಯೊಗ್ರಾಫಿಕ್ ಸಮೀಕ್ಷೆಯನ್ನು ಸ್ಥಳೀಯ ನ್ಯಾಯಾಲಯ ನೇಮಿಸಿದ ಆಯೋಗವು ಪೂರ್ಣಗೊಳಿಸಿತ್ತು.
ಸಮೀಕ್ಷೆಯಲ್ಲಿ, ಮಸೀದಿ ಆವರಣದೊಳಗೆ ಶಿವಲಿಂಗದ ಆಕೃತಿಯೊಂದು ಕಂಡುಬಂದಿದ್ದು, ಹಿಂದೂಗಳ ದೇವಸ್ಥಾನ ಎನ್ನುವುದಕ್ಕೆ ಸಾಕ್ಷಿಯಾಗಿತ್ತು ಎಂದು ಹಿಂದೂಗಳು ವಾದಿಸುತ್ತಿದ್ದಾರೆ.
ಭಕ್ತರು ನಮಾಜ್ ಸಲ್ಲಿಸುವ ಮೊದಲು ಶುದ್ಧೀಕರಣವನ್ನು ನಡೆಸುವ 'ವಜೂಖಾನಾ' ಜಲಾಶಯದಲ್ಲಿನ ನೀರಿನ ಕಾರಂಜಿ ಕಾರ್ಯವಿಧಾನದ ಭಾಗವಾಗಿದೆ ಎಂದು ಮುಸ್ಲಿಂ ಕಡೆಯವರು ಸಮರ್ಥಿಸಿಕೊಂಡಿದ್ದಾರೆ.
ಮೇ 19 ರಂದು ಸುಪ್ರೀಂ ಕೋರ್ಟ್, ಈ ವಿಷಯದ ಕುರಿತು ಮುಂದಿನ ವಿಚಾರಣೆಯವರೆಗೆ 'ಶಿವಲಿಂಗ'ದ ಕಾರ್ಬನ್ ಡೇಟಿಂಗ್ ನಡೆಸದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಹೇಳಿದೆ.
6 ತಿಂಗಳೊಳಗೆ ಸಮೀಕ್ಷೆ ಪೂರ್ಣ
ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂ ಪರ ವಾದ ಮಂಡಿಸಿದ ವಿಷ್ಣು ಶಂಕರ್ ಜೈನ್ ಮಾತನಾಡಿ, "ನನ್ನ ಅರ್ಜಿಯನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಲಾಗಿದ್ದು, ವಾಜು ಟ್ಯಾಂಕ್ ಹೊರತುಪಡಿಸಿ ಜ್ಞಾನವಾಪಿ ಮಸೀದಿ ಸಂಕೀರ್ಣದ ಎಎಸ್‌ಐ ಸರ್ವೆ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ. ವಾಜು ಟ್ಯಾಂಕ್ ಅನ್ನು ಮುಚ್ಚಲಾಗಿದೆ. 3 ರಿಂದ 6 ತಿಂಗಳೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಬಹುದು ಎಂದು ನಾನು ಭಾವಿಸುತ್ತೇನೆ." ಎಂದು ಹೇಳಿದ್ದಾರೆ.












Click it and Unblock the Notifications