ವಾರಣಾಸಿ; ಮೋದಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ!
ನವದೆಹಲಿ, ಮಾರ್ಚ್ 24: ಲೋಕಸಭೆ ಚುನಾವಣೆ 2024ಕ್ಕೆ ಅಭ್ಯರ್ಥಿಗಳ 4ನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಎದುರಾಳಿ ಯಾರು? ಎಂಬುದು ಬಹಿರಂಗವಾಗಿದೆ.
ಶನಿವಾರ ಅಭ್ಯರ್ಥಿಗಳ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದ ಕಾಂಗ್ರೆಸ್ ವಾರಣಾಸಿ ಕ್ಷೇತ್ರಕ್ಕೆ ಅಜಯ್ ರಾಯ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಬಿಜೆಪಿ ಮೊದಲ ಪಟ್ಟಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಕಣಕ್ಕಿಳಿಯಲಿದ್ದಾರೆ ಎಂದು ಘೋಷಣೆ ಮಾಡಿತ್ತು.

54 ವರ್ಷದ ಅಜಯ್ ರಾಯ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ. ಈಗಾಗಲೇ 2014, 2019ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿದು ಸೋತಿದ್ದ ಅಜಯ್ ರಾಯ್ 2024ರ ಚುನಾವಣೆಯಲ್ಲಿಯೂ ಮೋದಿ ಎದುರಾಳಿಯಾಗಿದ್ದಾರೆ.
ಯಾರು ಅಜಯ್ ರಾಯ್?: ಉತ್ತರ ಪ್ರದೇಶ ರಾಜ್ಯದ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ವಿದ್ಯಾರ್ಥಿ ಘಟಕದ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದ ಅವರು ಸಮಾಜವಾದಿ ಪಕ್ಷವನ್ನು ಸಹ ಸೇರಿದ್ದರು.
1996 ರಿಂದ 2007ರ ನಡುವೆ ಮೂರು ಬಾರಿ ಬಿಜೆಪಿಯಿಂದ ಕೋಲಸ್ಲಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು ಅಜಯ್ ರಾಯ್. ಲೋಕಸಭೆ ಟಿಕೆಟ್ ಬಿಜೆಪಿ ನೀಡದ ಕಾರಣ 2009ರಲ್ಲಿ ಸಮಾಜವಾದಿ ಪಕ್ಷ ಸೇರಿದರು, ಚುನಾವಣೆಯಲ್ಲಿ ಸೋತರು.
ಕೋಲಸ್ಲಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದರು. 2012ರಲ್ಲಿ ಕಾಂಗ್ರೆಸ್ ಸೇರಿದ ಅಜಯ್ ರಾಯ್ ಪಿಂಡ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೆ ಶಾಸಕರಾಗಿ ಆಯ್ಕೆಯಾದರು. ಆದರೆ 2017ರ ವಿಧಾನಸಭೆ ಚುನಾವಣೆಯಲ್ಲಿ ಸೋತರು.
2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರಾಳಿಯಾಗಿ ವಾರಣಾಸಿಯಲ್ಲಿ ಅಜಯ್ ರಾಯ್ ಕಣಕ್ಕಿಳಿದರು. ನರೇಂದ್ರ ಮೋದಿ 581,022 ಮತಗಳನ್ನು ಪಡೆದು ಗೆದ್ದರು. ಆಮ್ ಆದ್ಮಿ ಪಕ್ಷ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ 209,238 ಮತಗಳನ್ನು ಪಡೆದು 2ನೇ ಸ್ಥಾನ ಮತ್ತು ಅಜಯ್ ರಾಯ್ 75,614 ಮತಗಳ ಮೂಲಕ 3ನೇ ಸ್ಥಾನವನ್ನು ಪಡೆದರು.
ಅಜಯ್ ರಾಯ್ 2019ರ ಚುನಾವಣೆಯಲ್ಲಿ ಮತ್ತೆ ಮೋದಿ ವಿರುದ್ಧ ಅಭ್ಯರ್ಥಿಯಾದರು. ನರೇಂದ್ರ ಮೋದಿ 674,664 ಮತಗಳನ್ನು ಪಡೆದು ಜಯಗಳಿಸಿದರು. ಸಮಾಜವಾದಿ ಪಕ್ಷದ ಶಾಲಿನಿ ಯಾದವ್ 195,159 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದರು. ಕಾಂಗ್ರೆಸ್‌ನ ಅಜಯ್ ರಾಯ್ 152,548 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ವಾರಣಾಸಿಯಲ್ಲಿ ಎರಡು ಲೋಕಸಭೆ ಚುನಾವಣೆಯಲ್ಲಿಯೂ 3ನೇ ಸ್ಥಾನ ಪಡೆದಿರುವ ಅಜಯ್ ರಾಯ್ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ಎದುರಾಳಿಯಾಗಿದ್ದಾರೆ. ದೇಶದ ಗಮನ ಸೆಳೆದಿರುವ ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಎಂದು ಕಾದು ನೋಡಬೇಕಿದೆ.
2023ರ ಆಗಸ್ಟ್‌ನಲ್ಲಿ ಅಜಯ್ ರಾಯ್ ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. ಈಗ ಅವರನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಕ್ಷ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತದಲ್ಲಿ ಮತದಾನ ನಡೆಯಲಿದ್ದು, ಚುನಾವಣಾ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ.
ಉತ್ತರ ಪ್ರದೇಶ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಈ ರಾಜ್ಯದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ಆದರೆ ಈ ಬಾರಿಯ ಚುನಾವಣೆಗೆ ರಾಯ್ ಬರೇಲಿಯಿಂದ ಸೋನಿಯಾ ಗಾಂಧಿ ಕಣಕ್ಕಿಳಿಯುತ್ತಿಲ್ಲ. ಕಳೆದ ಬಾರಿ ಅಮೇಥಿಯಲ್ಲಿ ಸೋತ ರಾಹುಲ್ ಗಾಂಧಿ ಈ ಬಾರಿ ಕೇರಳದ ವಯನಾಡು ಕ್ಷೇತ್ರದಿಂದ ಮಾತ್ರ ಕಣಕ್ಕಿಳಿಯುತ್ತಿದ್ದಾರೆ.












Click it and Unblock the Notifications