Vande Bharat Express: ಕಾಶ್ಮೀರದಲ್ಲಿ ಪ್ರಾಯೋಗಿಕ ಸಂಚಾರ ಯಶಸ್ವಿ, ಇತಿಹಾಸ ನಿರ್ಮಾಣ
ಶ್ರೀನಗರ, ಜನವರಿ 25: ಐತಿಹಾಸಿಕ ಕ್ಷಣವೊಂದರಲ್ಲಿ ಶ್ರೀನಗರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಜಮ್ಮಿವಿನ ಕಾತ್ರಾ ಮತ್ತು ಶ್ರೀನಗರ ನಡುವೆ ಈ ರೈಲು ಸೇವೆ ಆರಂಭವಾಗಲಿದ್ದು, ರೈಲು ವಿಶ್ವದ ಅತ್ಯಂತ ಎತ್ತರದ ಚೆನಾಬ್ ನದಿಯ ಮೇಲಿನ ಕಮಾನು ಸೇತುವೆ ಮೇಲೆ ಹಾದು ಹೋಗಲಿದೆ. ಪ್ರಾಯೋಗಿಕ ಸಂಚಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬದಲಾಗುವ ಹವಾಮಾನಕ್ಕೆ ತಕ್ಕಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಂದೇ ಭಾರತ್ ರೈಲು ಜಮ್ಮಿವಿನ ಕಾತ್ರಾ ಮತ್ತು ಶ್ರೀನಗರ ನಡುವೆ ಸಂಚಾರವನ್ನು ನಡೆಸಲಿದೆ. ಈ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಶೀಘ್ರವೇ ಚಾಲನೆ ನೀಡಲಿದ್ದಾರೆ.

ಈ ವಂದೇ ಭಾರತ್ ರೈಲು 8 ಬೋಗಿಯನ್ನು ಹೊಂದಿರುವ ಕೇಸರಿ ಬಣ್ಣದ ರೈಲಾಗಿದೆ. ಇದು ಆಂಟಿ ಫ್ರೀಜಿಂಗ್ ವೈಶಿಷ್ಟ್ಯಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಚಾಲಕರಿಗೆ ಉತ್ತಮವಾದ ಹೊರಾಂಗಣದ ಚಿತ್ರಣವನ್ನು ನೀಡುತ್ತದೆ.
ರೈಲು ಸೇವೆ ಸಹಕಾರಿಯಾಗಲಿದೆ: ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭದಿಂದ ಕಾತ್ರಾ ಮತ್ತು ಶ್ರೀನಗರ ನಡುವೆ ನೇರ ರೈಲು ಸಂಪರ್ಕ ಬೇಕು ಎಂಬ ಕಾಶ್ಮೀರ ಕಣಿವೆ ಭಾಗದ ಜನರ ದೀರ್ಘ ಬೇಡಿಕೆ ಈಡೇರಲಿದೆ. ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೂ ಅನುಕೂಲವಾಗಲಿದೆ.
ರೈಲು ಸೇವೆ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ. 2024ರ ಡಿಸೆಂಬರ್‌ನಲ್ಲಿಯೇ ರೈಲು ಸೇವೆ ಆರಂಭವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಅಂತಿಮ ಸುರಕ್ಷತಾ ತಪಾಸಣೆಯ ಕಾರಣಕ್ಕೆ ಜನವರಿಯಲ್ಲಿ ರೈಲು ಸೇವೆ ಪ್ರಾರಂಭವಾಗಲಿದೆ. ಈಗಾಗಲೇ ರೈಲು ಸಂಚಾರದ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ರೈಲು ಸುರಂಗ, 7 ಕಿ. ಮೀ. ಮುಖ್ಯ ಸೇತುವೆಯ ಮೂಲಕ ಸಾಗಲಿದ್ದು, ಪ್ರವಾಸಿಗರಿಗೆ ರೋಮಾಂಚಕ ಅನುಭವನ್ನು ನೀಡಲಿದೆ.
ಸದ್ಯ ದೇಶದಲ್ಲಿ ಸಂಚಾರ ನಡೆಸುವ ವಂದೇ ಭಾರತ್ ರೈಲಿಗಿಂತ ಕಾಶ್ಮೀರದಲ್ಲಿ ಓಡುವ ರೈಲು ಸಂಪೂರ್ಣ ಭಿನ್ನವಾಗಿದೆ. ಶೀತ ಪರಿಸ್ಥಿತಿಗಳಲ್ಲಿ ಅಂದರೆ - 20 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನದಲ್ಲಿ ರೈಲು ಸರಾಗವಾಗಿ ಕಾರ್ಯನಿರ್ವಹಿಸುವಂತೆ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಪ್ರಯಾಣಿಕರು ಮತ್ತು ಚಾಲಕರಿಗೆ ಉತ್ತಮ ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು, ರೈಲು ಸುಧಾರಿತ ತಾಪನ ವ್ಯವಸ್ಥೆಯನ್ನು ಹೊಂದಿದೆ. ಡ್ರೈವರ್‌ನ ಕ್ಯಾಬಿನ್ ಬಿಸಿಯಾದ ವಿಂಡ್‌ಶೀಲ್ಡ್ ಅನ್ನು ಹೊಂದಿದ್ದು ತೀವ್ರವಾದ ತಾಪಮಾನದಲ್ಲಿಯೂ ಸ್ಪಷ್ಟ ಹೊರಗಿನ ಚಿತ್ರಣವನ್ನು ನೋಡಲು ಸಹಾಯಕವಾಗಿದೆ.
ಅಲ್ಲದೇ ರೈಲು ಕೊಳಾಯಿ ಮತ್ತು ಜೈವಿಕ-ಶೌಚಾಲಯಗಳಲ್ಲಿ ಹೀಟಿಂಗ್ ಎಲಿಮೆಂಟ್‌ಗಳನ್ನು ಹೊಂದಿದ್ದು, ನೀರನ್ನು ಘನೀಕರಿಸುವುದನ್ನು ತಡೆಯುತ್ತದೆ. ಶೀತ ವಾತಾವರಣದಲ್ಲಿಯೂ ಅಗತ್ಯ ವ್ಯವಸ್ಥೆಗಳು ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸುವಂತೆ ಬೋಗಿಯನ್ನು ವಿನ್ಯಾಸಗೊಳಿಸಲಾಗಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲು ಬೋಗಿ ವಿನ್ಯಾಸಗೊಳಿಸಲಾಗಿದೆ.
ಉತ್ತರ ರೈಲ್ವೆ ಕಾತ್ರಾ-ಶ್ರೀನಗರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸುತ್ತದೆ. ಪ್ರಸ್ತುತ ಮಾಹಿತಿ ಪ್ರಕಾರ ರೈಲು ಕಾತ್ರಾದಿಂದ ಬೆಳಗ್ಗೆ 8.10ಕ್ಕೆ ಹೊರಡಲಿದೆ, 11.20ಕ್ಕೆ ಶ್ರೀನಗರವನ್ನು ತಲುಪಲಿದೆ. ವೈಷ್ಣೋದೇವಿ ದರ್ಶನಕ್ಕೆ ತೆರಳುವ ಲಕ್ಷಾಂತರ ಭಕ್ತರಿಗೆ ಸಹ ಈ ರೈಲು ಸೇವೆ ಅನುಕೂಲವಾಗಲಿದೆ. 100 ಕಿ. ಮೀ. ದೂರವನ್ನು ರೈಲು 2.30 ಗಂಟೆಯಲ್ಲಿ ಕ್ರಮಿಸಲಿದೆ. ದೇಶದಲ್ಲಿ ಸದ್ಯ ಎರಡು ರಾಜಧಾನಿಗಳ ನಡುವೆ ಈ ಮಾದರಿಯ ಯಾವುದೇ ರೈಲು ಸೇವೆ ಇಲ್ಲ.












Click it and Unblock the Notifications