Vande Bharat Express: ಈ ಮಾರ್ಗದ ವಂದೇ ಭಾರತ್ ರೈಲಿನಲ್ಲಿ ಕಾಣಿಸಿಕೊಂಡ ಹೊಗೆ, ದಟ್ಟಗೊಂಡ ಆತಂಕ
ಕೊಚ್ಚಿ, ಫೆಬ್ರುವರಿ 28: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಭಾರತಾದ್ಯಂತ ವ್ಯಾಪಕ ಸ್ಪಂದನೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಈ ರೈಲು ಪದೇ ಪದೆ ನಿಯಮ ಉಲ್ಲಂಘನೆ, ಕಲ್ಲು ಎಸೆತದಂತೆ ಪ್ರಕರಣಗಳಿಂದ ಹೆಚ್ಚು ಸುದ್ದಿಯಾಗುತ್ತಿದೆ. ಇದೀಗ ಹೊಗೆಯಿಂದ ಸುದ್ದಿಯಾಗಿದೆ.
ಹೌದು, ಕೇರಳ ರಾಜ್ಯದ ತಿರುವನಂತಪುರಂನಿಂದ ಕಾಸರಗೋಡಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಬುಧವಾರ ಬೆಳಗ್ಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ರೈಲಿನಲ್ಲಿನ ಒಂದು ಶೌಚಾಲಯದ ಒಳಗಿನಿಂದ ಹೊಗೆ ಚಿಮ್ಮಿ ಹೊರ ಬರವುದು ಕಂಡು ಬಂದಿದೆ. ಆ ಹೊಗೆ ಶೌಚಾಲಯದಿಂದ ಪ್ರಯಾಣಿಕರಿದ್ದ ಬೋಗಿಯ ಇಡೀ ಕ್ಯಾಬಿನ್‌ಗೆ ಹರಡಿಕೊಂಡಿದೆ.

ಶೌಚಾಲಯದಲ್ಲಿ ಅಗ್ನಿಶಾಮಕವನ್ನು ಸಕ್ರಿಯಗೊಳಿಸಿದ ಕಾರಣ ಈ ರೀತಿ ಹೊಗೆ ಕಾಣಿಸಿಕೊಂಡಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದರ ಬಗ್ಗೆ ವರದಿ ಆಗಿದೆ. ಇದಲ್ಲದೇ ಪ್ರಯಾಣಿಕರಲ್ಲಿ ಯಾರಾದರೂ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಕ್ಕೆ ಹೊಗೆ ಕಾಣಿಸಿಕೊಂಡಿದೆಯೇ ಅಥವಾ ತಾಂತ್ರಿಕ ದೋಷದಿಂದ ಹೊಗೆ ಕಾಣಿಸಿಕೊಂಡಿತೆ ಎಂಬ ಬಗ್ಗೆ ಮಾಹಿತಿ ದೊರೆಯಬೇಕಿದೆ.
20 ನಿಮಿಷಗಳ ಕಾಲ ಸಂಚಾರ ಸ್ಥಗಿತ
ದಟ್ಟ ಹೊಗೆಯ ಪರಿಣಾಮವಾಗಿ ತಿರುವನಂತಪುರಂನಿಂದ ಕಾಸರಗೋಡಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸುಮಾರು 20 ನಿಮಿಷಗಳ ಕಾಲ ಆಲುವಾದಲ್ಲಿ ಸಂಚಾರ ನಿಲ್ಲಿಸಿತು. ನಂತರ 9.24 ರಸುಮಾರಿಗೆ ಪುನಃ ಪ್ರಯಾಣ ಆರಂಭಿಸಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಗೆ ಕಾಣಿಸಿಕೊಂಡ ಬೆನ್ನಲ್ಲೆ ಎಲ್ಲವು ಸರಿಹೋಗಿದೆ. ಅದೃಷ್ಟವಶಾತ್ ಯಾವ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ ಮತ್ತು ಆಲುವಾದಲ್ಲಿ ನಿಲುಗಡೆಯಿಂದ ಉಂಟಾದ ವಿಳಂಬಕ್ಕೆ ಪರಿಹಾರವನ್ನು ನೀಡಲಾಗುವುದು ಎಂದು ರೈಲ್ವೆ ಇಲಾಖೆ ಭರವಸೆ ನೀಡಿದೆ.
ಈ ಮಾರ್ಗದ 'ವಿಬಿ' ರೈಲು ಸಮಯ ಬದಲಾವಣೆ
ತಮಿಳುನಾಡಿನ ಕೊಯಿಮತ್ತೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದೆ. ಕೊಯಿಮತ್ತೂರಿನಿಂದ ಹೊರುತ್ತಿದ್ದ ರೈಲಿನ ಸಮಯ ಬೆಳಗ್ಗೆ 5 ಗಂಟೆಗೆ ಬದಲಾಗಿ 7.25ಕ್ಕೆ ಬದಲಾಯಿಸಲಾಗಿದೆ. ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಇನ್ನೂ ರೈಲು ವಾರದಲ್ಲಿ ಗುರುವಾರ ಒಂದು ದಿನ ಹೊರತುಪಡಿಸಿ ಉಳಿದೆ ಎಲ್ಲ ದಿನಗಳಲ್ಲಿ ಬೆಂಗಳೂರು-ಕೊಯಿಮತ್ತೂರಿಗೆ ನಿರಂತರ ಸೇವೆ ನೀಡುತ್ತಿದೆ. ರೈಲ್ವೆ ಇಲಾಖೆಯ ಸಮಯದ ಬದಲಾವಣೆಯನ್ನು ಪ್ರಯಾಣಿಕರು ಸ್ವಾಗತಿಸಿದ್ದಾರೆ.












Click it and Unblock the Notifications