Vande Bharat Train: ವೈಷ್ಣೋದೇವಿ ಭಕ್ತರಿಗೆ ಗುಡ್‌ನ್ಯೂಸ್, ವಂದೇ ಭಾರತ್ ರೈಲು
ನವದೆಹಲಿ, ಮಾರ್ಚ್ 10: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಸಿದ್ಧವಾಗಿದೆ. ಈ ತಿಂಗಳಿನಲ್ಲಿಯೇ ಸೆಮಿ ಹೈಸ್ಪೀಡ್ ರೈಲು ಜಮ್ಮು ಮತ್ತು ಶ್ರೀನಗರ ನಡುವೆ ಸಂಚಾರವನ್ನು ನಡೆಸಲಿದೆ. ಕಣಿವೆ ರಾಜ್ಯದ ಈ ಮಾದರಿಯ ಮೊದಲ ರೈಲು ಇದಾಗಿದ್ದು, ಈಗಾಗಲೇ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದೆ. 530 ಪ್ರಯಾಣಿಕರು ಈ ರೈಲು ಮೂಲಕ ಸಂಚಾರ ನಡೆಸಬಹುದಾಗಿದೆ.
ಉತ್ತರ ರೈಲ್ವೆ ಕಾಶ್ಮೀರದ ಮೊದಲ ವಂದೇ ಭಾರತ್ ರೈಲನ್ನು ಓಡಿಸಲಿದೆ. ಆದರೆ ಈ ರೈಲಿನ ಸಂಚಾರದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಈ ರೈಲು ಶ್ರೀ ಮಾತಾ ವೈಷ್ಣೋದೇವಿ ಮಂದಿರಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗಿದೆ. ದೇಶದ ವಿವಿಧ ರಾಜ್ಯಗಳಿಂದ ಮಂದಿರಕ್ಕೆ ಭಕ್ತರು ತೆರಳುತ್ತಾರೆ.

ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ ಜಮ್ಮು ಮತ್ತು ಶ್ರೀನಗರ ನಡುವಿನ ವಂದೇ ಭಾರತ್ ರೈಲು ಜಮ್ಮು ಮತ್ತು ಶ್ರೀ ಮಾತಾ ವೈಷ್ಣೋದೇವಿ ಮಂದಿರ (ಕಾತ್ರಾ) ನಡುವೆ ಸಂಚಾರವನ್ನು ನಡೆಸುತ್ತದೆ. ಕೇಸರಿ ಬಣ್ಣದ 8 ಬೋಗಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ಈ ಮಾರ್ಗದಲ್ಲಿ ಸಂಚಾರ ನಡೆಸಲಿದೆ, ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದು, ರೈಲಿಗೆ ಹಸಿರು ನಿಶಾನೆ ತೋರಿಸುವುದು ಬಾಕಿ ಇದೆ.
ರೈಲು ಪ್ರಯಾಣ ದರ: ಈ ವಂದೇ ಭಾರತ್ ರೈಲು ಜಮ್ಮು ಮತ್ತು ಕಾಶ್ಮೀರ ಭಾಗದ ಜನರ ಬಹುದಿನಗಳ ಕನಸು. ಈ ವಂದೇ ಭಾರತ್ ರೈಲನ್ನು ವಿಶೇಷವಾಗಿ ಹಾಗೂ ಕಣಿವೆ ರಾಜ್ಯದ ಹವಾಮಾನಕ್ಕೆ ಹೊಂದಿಕೊಳ್ಳುವ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹಿಮಪಾತ, ಕನಿಷ್ಠ ಉಷ್ಣಾಂಶದಲ್ಲಿಯೂ ರೈಲು ಸುಲಭವಾಗಿ ಸಂಚಾರ ನಡೆಸುವಂತೆ ಬೋಗಿಗಳನ್ನು ತಯಾರು ಮಾಡಲಾಗಿದೆ.
ಈ ರೈಲಿನ ಪ್ರಯಾಣ ದರದ ಕುರಿತು ಅಧಿಕೃತವಾಗಿ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ. ಆದರೆ ಎಸಿ ಚೇರ್ ಕಾರ್ ಬೆಲೆ 1500-1600 ರೂ., ಎಕ್ಸಿಕ್ಯುಟಿವ್ ಚೇರ್ ಕಾರ್ ಬೆಲೆ 2200-2500 ರೂ. ತನಕ ಇರಲಿದೆ ಎಂದು ಅಂದಾಜಿಸಲಾಗಿದೆ. ಈ ಟಿಕೆಟ್ ದರದಲ್ಲಿ ಮುಂಗಡ ಕಾಯ್ದಿರಿಸುವಿಕೆ ಶುಲ್ಕ, ಸೂಪರ್ ಫಾಸ್ಟ್ ಚಾರ್ಜ್‌ಗಳು ಸೇರಿವೆ.
ಈ ರೈಲು 1 ಎಕ್ಸಿಕ್ಯುಟಿವ್ ಕ್ಲಾಸ್, 7 ಎಸಿ ಚೇರ್ ಕಾರ್‌ಗಳನ್ನು ಹೊಂದಿದ್ದು, ಒಟ್ಟು 530 ಪ್ರಯಾಣಿಕರು ಸಂಚಾರವನ್ನು ನಡೆಸಬಹುದು. ಈ ರೈಲು ಆರು ನಿಲ್ದಾಣಗಳನ್ನು ಹೊಂದಿರಲಿದೆ. ರೈಲಿನ ವೇಳಾಪಟ್ಟಿಯನ್ನು ಇಲಾಖೆ ಅಧಿಕಾರಿಗಳು ಇನ್ನೂ ಅಂತಿಮಗೊಳಿಸಿಲ್ಲ.
ಕಣಿವೆ ರಾಜ್ಯದ ಈ ವಂದೇ ಭಾರತ್ ರೈಲಿನ ವಿಶೇಷ ಎಂದರೆ ಇದು ವಿಶ್ವದ ಅತಿ ಎತ್ತರದ ಚೀನಾಬ್ ರೈಲು ಸೇತುವೆ ಮೂಲಕ ಸಂಚಾರವನ್ನು ನಡೆಸುತ್ತದೆ. ಈ ಸೇತುವೆ ಮೂಲಕ ರೈಲು ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಿದ್ದು, ಅದರ ವಿಡಿಯೋವನ್ನು ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡಿದ್ದರು.
ಜಮ್ಮು ವಲಯದಲ್ಲಿರುವ ಕಾತ್ರಾದ ಶ್ರೀ ಮಾತಾ ವೈಷ್ಣೋದೇವಿ ರೈಲು ನಿಲ್ದಾಣದಿಂದ ಕಾಶ್ಮೀರ ವಲಯದ ಶ್ರೀ ನಗರದ ಬುದ್‌ಗಾಮ್ ರೈಲು ನಿಲ್ದಾಣದ ತನಕ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ ಕೊನೆಯ ವಾರದಲ್ಲಿ ಈ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಇನ್ನೂ ರೈಲು ಸಂಚಾರದ ದಿನಾಂಕ ನಿಗದಿಯಾಗಿಲ್ಲ.












Click it and Unblock the Notifications