V.S.Achuthanandan: ಕಮ್ಯುನಿಸ್ಟ್ ನಾಯಕ, ಹಿರಿಯ ರಾಜಕಾರಣಿ ವಿ.ಎಸ್.ಅಚ್ಯುತಾನಂದನ್ ನಿಧನ
ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಭಾರತ ಕಮ್ಯೂನಿಸ್ಟ್ ಚಳವಳಿಯ ಹಿರಿಯ ನಾಯಕ ವಿ.ಎಸ್.ಅಚ್ಯುತಾನಂದನ್ ವಿಧಿವಶರಾಗಿದ್ದಾರೆ. ಸೋಮವಾರ (ಜುಲೈ 21) ಮಧ್ಯಾಹ್ನ ತಿರುವನಂತಪುರಂನ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಕಮ್ಯುನಿಸ್ಟ್ ನಾಯಕರಾಗಿ ಗುರುತಿಸಿಕೊಂಡಿದ್ದ ಅವರ ಪೂರ್ಣ ಹೆಸರು ವೆಲಿಕ್ಕಾಕತು ಶಂಕರನ್ ಅಚ್ಯುತಾನಂದನ್. ಅವರಿಗೆ 101 ವರ್ಷ ವಯಸ್ಸಾಗಿತ್ತು. ಅವರು ಕಮ್ಯುನಿಸ್ಟ್ ಪಕ್ಷದ ಸ್ಥಾಪಕರ ಪೈಕಿ ಹಿರಿಯರೂ ಆಗಿದ್ದರು.
ಅಕ್ಟೋಬರ್ 20, 1923ರಲ್ಲಿ ಅವರು ಕೇರಳದ ಅಲಪ್ಪುಳದ ಪುನಪ್ರದಲ್ಲಿ ಜನಿಸಿದ್ದರು. ಬಾಲ್ಯದಲ್ಲೇ ತಮ್ಮ ಪೋಷಕರನ್ನು ಕಳೆದುಕೊಂಡರು, ಶಾಲೆಗೆ ಹೋಗಲಾರದೆ ಆರಂಭದಲ್ಲಿ ಟೈಲರ್ ಅಂಗಡಿ ಸೇರಿದಂತೆ ಹಲವೆಡೆ ಕೆಲಸ ಮಾಡಿದ್ದರು. 1939ರಲ್ಲಿ ಸ್ಟೇಟ್ ಕಾಂಗ್ರೆಸ್ ಸೇರಿ ರಾಜಕೀಯ ಪ್ರವೇಶಿಸಿದ್ದ ಅವರು 1940ರಲ್ಲಿ ಯೂನಿಯನ್ ಚಟುವಟಿಕೆಗಳ ಮೂಲಕ ಕಮ್ಯುನಿಸ್ಟ್ ಚಳವಳಿ ಪ್ರವೇಶಿಸಿದ್ದರು.

1964ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಿಂದ (CPI) ಹುಟ್ಟಿದ ಸಿಪಿಐ(ಎಂ) ಪಕ್ಷದ ಸ್ಥಾಪಕರ ಪೈಕಿ ಇವರೂ ಪ್ರಮುಖರು. 2006-2011ರವರೆಗೆ ಕೇರಳ ಮುಖ್ಯಮಂತ್ರಿಯಾಗಿದ್ದ ಇವರು, ಸುಮಾರು 15 ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ ಗಮನ ಸೆಳೆದಿದ್ದರು. 2001ರಿಂದ 2021ರವರೆಗೆ 10 ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಏಳು ಬಾರಿ ಗೆಲುವು ಸಾಧಿಸಿ, ವಿಧಾನಸಭಾ ಸದಸ್ಯರಾಗಿದ್ದರು.
ಮುನ್ನಾರ್ ಮತ್ತು ಎಂಜಿ ರಸ್ತೆಯಲ್ಲಿ ಅತಿಕ್ರಮಣ ತೆರವು, ಲಾಟರಿ ಮಾಫಿಯಾದ ವಿರುದ್ಧ ಹೋರಾಟ, ಪೈರಸಿ ಮತ್ತು ಅಕ್ರಮ ನೆಲದ ಹೋರಾಟ, ಸರ್ಕಾರಿ ಶಾಲೆಗಳಲ್ಲಿ ಸ್ವತಂತ್ರ ಸಾಫ್ಟ್‌ವೇರ್ ಬಳಕೆಗೆ ಪ್ರೋತ್ಸಾಹ ಸೇರಿದಂತೆ ಹಲವು ಹೋರಾಟಗಳಲ್ಲಿ ಇವರು ಮುಂಚೂಣಿಯಲ್ಲಿದ್ದರು. ಕಳೆದ ತಿಂಗಳು ಅಚ್ಯುತಾನಂದನ್ ಹೃದಯಾಘಾತದಿಂದ ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಕಳೆದ ಕೆಲವು ವರ್ಷಗಳಿಂದ ಅವರಿಗೆ ಅನಾರೋಗ್ಯ ಸಮಸ್ಯೆ ಕೂಡ ಇತ್ತು. ಈ ಹಿನ್ನೆಲೆ ಅವರು ಕಳೆದ ಐದು ವರ್ಷಗಳಿಂದ ರಾಜಕಾರಣದಿಂದ ದೂರ ಸರಿದಿದ್ದರು. ಅಚ್ಯುತಾನಂದನ್ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಬಡಜನರ ಹಕ್ಕುಸ್ಥಾಪನೆ, ಭ್ರಷ್ಟಾಚಾರದ ವಿರುದ್ಧ ಹೋರಾಟ, ಮತ್ತು ಸಾಮಾಜಿಕ ನ್ಯಾಯಕ್ಕಾಗಿ ದುಡಿಯುವ ಅತ್ಯಂತ ಪ್ರಾಮಾಣಿಕ, ಪ್ರಜ್ಞಾವಂತ ನಾಯಕನಾಗಿ ಜನಪ್ರಿಯರಾಗಿದ್ದರು.
ತಮ್ಮ ತೀರಾ ವೃದ್ಧ ಪ್ರಾಯದಲ್ಲಿಯೂ ರಾಜ್ಯವೆಲ್ಲ ಪ್ರಚಾರಕ್ಕೆ ಹೋದಗಿದ್ದರು. ಎಲ್ಲ ವರ್ಗದ ಜನರಿಗೂ, ಮುಖ್ಯವಾಗಿ ಯುವಜನರಿಂದ "ವಿಎಸ್ ನಮ್ಮ ಕಣ್ಣು, ನಮ್ಮ ಹೃದಯ" ಎಂಬ ಘೋಷಣೆ ಕೇಳಿಬಂದಿತ್ತು. ಕೆಂಪು ಕಾಲದ ನಾಯಕ, ಭಾವೋದ್ರೇಕದ ಭಾಷಣಗಾರ, ಹೋರಾಟಗಾರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಕೂಡ ಸ್ಮರಿಸಿದ್ದಾರೆ. ಇವರ ಅವರ ನಿಧನದ ಸುದ್ದಿ ಕೇಳಿ ಇಡೀ ಕಮ್ಯುನಿಸ್ಟ್ ಲೋಕ ಶೋಕದಲ್ಲಿದೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ವಿವಿಧ ನಾಯಕರು ವಿ.ಎಸ್.ಅಚ್ಯುತಾನಂದನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಅಂತ್ಯಕ್ರಿಯೆ ಎಲ್ಲಿ?
ಅವರ ಪಾರ್ಥಿವ ಶರೀರವನ್ನು ಮೊದಲಿಗೆ ತಿರುವನಂತಪುರದ ಎಕೆಜಿ ಕೇಂದ್ರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶವಿರುತ್ತದೆ. ನಂತರ ರಾತ್ರಿ ಅವರ ನಿವಾಸಕ್ಕೆ ಕರೆದೊಯ್ಯಲಾಗುವುದು. ಮಂಗಳವಾರ ಮುಂಜಾನೆ ಕಾರ್ಯಾಲಯದ ದರ್ಬಾರ್ ಹಾಲ್‌ನಲ್ಲಿ ಸಾರ್ವಜನಿಕ ಗೌರವಕ್ಕೆ ಇರಿಸಲಾಗುತ್ತದೆ. ನಂತರ ಅಲಪ್ಪುಳದ ವಲಿಯಾ ಚುದುಕಾಡು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.












Click it and Unblock the Notifications