ಉತ್ತರಾಖಂಡ; ಫಲಿತಾಂಶಕ್ಕೂ ಮುನ್ನ ಹರೀಶ್ ರಾವತ್ ಗಾಳಿಯಲ್ಲಿ ಕೋಟೆ ಕಟ್ಟುತ್ತಿದ್ದಾರೆ; ಬಿಜೆಪಿ
ಡೆಹ್ರಾಡೂನ್, ಫೆಬ್ರವರಿ 17: ಉತ್ತರಾಖಂಡ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು ಚುನಾವಣಾ ಫಲಿತಾಂಶದ ನಂತರ ಮುಖ್ಯಮಂತ್ರಿಯಾಗುತ್ತೇನೆ ಅಥವಾ ಮನೆಯಲ್ಲಿ ಕುಳಿತುಕೊಳ್ಳುತ್ತೇನೆ ಎಂಬ ಇತ್ತೀಚಿನ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.
ಉತ್ತರಾಖಂಡ ಚುನಾವಣೆಯ ಫಲಿತಾಂಶಕ್ಕೆ ಕಾಯುವ ತಾಳ್ಮೆ ಇಲ್ಲದೆ ಹರೀಶ್ ರಾವತ್ ಗಾಳಿಯಲ್ಲಿ ಕೋಟೆ ಕಟ್ಟುತ್ತಿದ್ದಾರೆ ಎಂದು ಹೇಳುವ ಮೂಲಕ ಉತ್ತರಾಖಂಡ ಬಿಜೆಪಿ ಕಾಂಗ್ರೆಸ್ ನಾಯಕನ ಕಾಲೆಳೆದಿದೆ.
"ಹರೀಶ್ ರಾವತ್ ಅಸಹನೆಯನ್ನು ನೋಡಿದರೆ, ಅವರು ಮುಖ್ಯಮಂತ್ರಿ ಕುರ್ಚಿಯನ್ನು ಹಿಡಿಯಲು ಚುನಾವಣಾ ಯುದ್ಧಕ್ಕೆ ಪ್ರವೇಶಿಸಿದ್ದಾರೆ ಮತ್ತು ಸಾರ್ವಜನಿಕ ಕಾಳಜಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತೋರಿಸುತ್ತದೆ,'' ಎಂದು ಉತ್ತರಾಖಂಡ ರಾಜ್ಯ ಬಿಜೆಪಿ ಮಾಧ್ಯಮ ಉಸ್ತುವಾರಿ ಮನ್ವೀರ್ ಚೌಹಾಣ್ ಹರಿಹಾಯ್ದಿದ್ದಾರೆ.

ಕಾಂಗ್ರೆಸ್‌ನ ಅಧಿಕಾರದ ದುರಾಸೆ ಎಷ್ಟರಮಟ್ಟಿಗೆ ತಲುಪಿದೆ ಎಂದರೆ ಚುನಾವಣೆಯ ತೀರ್ಪು ಇವಿಎಂಗಳಲ್ಲಿ ಮುದ್ರೆ ಬಿದ್ದಿರುವಾಗಲೇ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಕಾದಾಟ ಆರಂಭವಾಗಿದೆ ಎಂದು ಅವರು ವ್ಯಂಗ್ಯವಾಡಿದರು.
"ಉತ್ತರಾಖಂಡ ವಿಧಾನಸಭೆ ಚುನಾವಣೆ ತೀರ್ಪು ಹೊರಬೀಳುವ ಮೊದಲೇ ರಾವತ್ ಗಾಳಿಯಲ್ಲಿ ಗೋಪುರಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ," ಎಂದು ಮನ್ವೀರ್ ಚೌಹಾಣ್ ಹೇಳಿದರು.
ಕಾಂಗ್ರೆಸ್ ರಾವತ್ ಅವರನ್ನು ಉತ್ತರಾಖಂಡದ ಚುನಾವಣಾ ಪ್ರಚಾರದ ಮುಖ್ಯಸ್ಥರನ್ನಾಗಿ ಮಾಡಿದ್ದರೂ, ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿಲ್ಲ. ಆದರೂ ಹರೀಶ್ ರಾವತ್ ಅವರ ಮುಖ್ಯಮಂತ್ರಿ ಆಕಾಂಕ್ಷೆ ಮರೆಯಾಗಿಲ್ಲ.
ಇತ್ತೀಚೆಗಷ್ಟೇ ಟಿವಿ ವಾಹಿನಿಯೊಂದರಲ್ಲಿ ಮಾತನಾಡಿದ ಅವರು, 'ಫಲಿತಾಂಶದ ನಂತರ ಒಂದೋ ಮುಖ್ಯಮಂತ್ರಿಯಾಗುತ್ತೇನೆ, ಇಲ್ಲವೇ ಮನೆಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿದ್ದರು.
ಮಾಜಿ ಸಿಎಂ ಹರೀಶ್ ರಾವತ್ ಹೇಳಿಕೆಗೆ ಉತ್ತರಾಖಂಡದ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಪ್ರೀತಮ್ ಸಿಂಗ್, ಮುಖ್ಯಮಂತ್ರಿಯ ಆಯ್ಕೆಯು ಪಕ್ಷದ ಹೈಕಮಾಂಡ್‌ನ ವಿಶೇಷ ಅಧಿಕಾರವಾಗಿದೆ ಮತ್ತು ಅದರ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ತಿಳಿಸಿದ್ದರು.












Click it and Unblock the Notifications