ಉತ್ತರಾಖಂಡ: ಪೊಲೀಸ್ ಇಲಾಖೆಯಲ್ಲಿ ಶೇ.40ರಷ್ಟು ಮಹಿಳೆಯರಿಗೆ ಉದ್ಯೋಗ; ಕಾಂಗ್ರೆಸ್ ಪ್ರಣಾಳಿಕೆ
ಡೆಹ್ರಾಡೂನ್, ಫೆಬ್ರವರಿ 2: ಉತ್ತರಾಖಂಡದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದ್ದು, ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಚುನಾವಣೆ ಎದುರಿಸಲು ಸನ್ನದ್ಧವಾಗುತ್ತಿವೆ. ಅದರಲ್ಲೂ ಕಾಂಗ್ರೆಸ್ ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗಂಭೀರವಾಗಿ ತೆಗೆದುಕೊಂಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರಾಖಂಡ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆ ಮಾಡಿದರು.
ಉತ್ತರಾಖಂಡದಲ್ಲಿ ದೇಶದ ಹಳೆಯ ಪಕ್ಷವು ಅಧಿಕಾರಕ್ಕೆ ಬಂದರೆ ಜನರಿಗೆ ಹಲವಾರು ಭರವಸೆಗಳನ್ನು ನೀಡಿದೆ ಮತ್ತು ಮುಖ್ಯವಾಗಿ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇಕಡಾ 40ರಷ್ಟು ಉದ್ಯೋಗಗಳನ್ನು ಮೀಸಲಿಡುವುದಾಗಿ ಹೇಳಿದೆ.

'ಉತ್ತರಾಖಂಡ ಸ್ವಾಭಿಮಾನ್ ಪ್ರತಿಜ್ಞಾ ಪತ್ರ' ಎಂಬ ಪ್ರಣಾಳಿಕೆಯಲ್ಲಿ 'ಪ್ರವಾಸೋದ್ಯಮ ಪೊಲೀಸ್' ಪಡೆ ರಚನೆ ಹಾಗೂ ನಾಲ್ಕು ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಕುರಿತು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರಣಾಳಿಕೆಯ ಪ್ರಕಾರ, ಕಾಂಗ್ರೆಸ್ 40 ಪ್ರತಿಶತ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡುತ್ತದೆ ಮತ್ತು ದೇಶೀಯ ಎಲ್‌ಪಿಜಿ ಬೆಲೆಯನ್ನು 500 ರೂ.ಗೆ ಇಳಿಸುವುದಾಗಿ ಭರವಸೆ ನೀಡಿದೆ.
ಉತ್ತರಾಖಂಡದ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಲ್ಲಿ ಲೈವ್ ಸ್ಟ್ರೀಮ್ ಮಾಡಿದ ವರ್ಚುವಲ್ ರ್ಯಾಲಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಪ್ರಿಯಾಂಕಾ ಗಾಂಧಿ, ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ಜನರಿಗೆ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದರು ಮತ್ತು ಬದಲಾವಣೆಯನ್ನು ತರಲು ಜನರು ತಮ್ಮ ಮತಗಳ ಶಕ್ತಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
"ಈಗಿನ ಸರಕಾರ ಐದು ವರ್ಷಗಳಲ್ಲಿ ಏನನ್ನೂ ಮಾಡಿಲ್ಲ. ಹಿಂದಿನ ನಮ್ಮ ಸರ್ಕಾರ ಮಾಡಿದ ಕೆಲಸವನ್ನು ಮಾತ್ರ ನಾವು ಇಂದಿಗೂ ನೋಡುತ್ತಿದ್ದೇವೆ. ಅವರಿಗೆ ಸ್ಪಷ್ಟವಾದ ಉದ್ದೇಶವಿಲ್ಲದ ಕಾರಣ ಏನನ್ನೂ ಮಾಡಲಿಲ್ಲ,'' ಎಂದು ಪ್ರಿಯಾಂಕಾ ಗಾಂಧಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
"ಕಾಂಗ್ರೆಸ್ ಬದಲಾವಣೆ ತರಬಹುದು, ಆದರೆ ನಿಮ್ಮ ಹಕ್ಕುಗಳಿಗಾಗಿ ಮತ್ತು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೋರಾಡಲು ನೀವು ಎಚ್ಚೆತ್ತುಕೊಂಡರೆ ಮಾತ್ರ ಸಾಧ್ಯ'' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆಯಿಂದಾಗಿ ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ವ್ಯಂಗ್ಯವಾಡಿದ ಅವರು, ನರೇಂದ್ರ ಮೋದಿ ಸರ್ಕಾರ ಎರಡು ವಿಮಾನಗಳಿಗೆ 16,000 ಕೋಟಿ ಖರ್ಚು ಮಾಡಿದ್ದು, ಕಬ್ಬು ಬೆಳೆದ ರೈತರ 14,000 ರೂಪಾಯಿ ಬಾಕಿಯನ್ನು ಪಾವತಿಸದ ಕೇಂದ್ರ ಸರ್ಕಾರವನ್ನು ಪ್ರಿಯಾಂಕಾ ಗಾಂಧಿ ತರಾಟೆಗೆ ತೆಗೆದುಕೊಂಡರು.
ಒಂದೇ ಹಂತದಲ್ಲಿ ಫೆ.14ರಂದು ಮತದಾನ
ಉತ್ತರಾಖಂಡದಲ್ಲಿ ಜನವರಿ 21ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 21ರಿಂದ ಜ.28ರವರೆಗೆ ಅವಕಾಶವಿರುತ್ತದೆ. ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿದೆ.
ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 2017ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 70 ಸ್ಥಾನಗಳ ಪೈಕಿ ಬಿಜೆಪಿ 57 ಸ್ಥಾನಗಳನ್ನು ಗೆದ್ದಿತ್ತು.












Click it and Unblock the Notifications