
ಉತ್ತರಾಖಂಡ್ ಹಿಮಕುಸಿತ ಪ್ರಕರಣ: ಪರ್ವತಾರೋಹಿಗಳ ಸಾವಿನ ಸಂಖ್ಯೆ 19ಕ್ಕೆ ಏರಿಕೆ
ಉತ್ತರಕಾಶಿ, ಅಕ್ಟೋಬರ್ 7: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ದ್ರೌಪದಿಯ ದಂಡ ಪರ್ವತದ ಶಿಖರದಲ್ಲಿ ಹಿಮಕುಸಿತದ ಪರಿಣಾಮ ಇದುವರೆಗೆ ಒಟ್ಟು 19 ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಅಕ್ಟೋಬರ್ 4 ರಂದು (ಮಂಗಳವಾರ) ಪರ್ವತಾರೋಹಿಗಳ ತಂಡದ ಮೇಲೆ ಹಿಮಕುಸಿದು ಅವರ ರಕ್ಷಣಾ ಕಾರ್ಯಾಚರಣೆ ಈವರೆಗೂ ಮುಂದುವರೆದಿದೆ.
ಒಟ್ಟು 19 ಮೃತದೇಹಗಳನ್ನು ಹಿಮದಿಂದ ಹೊರತೆಗೆಯಲಾಗಿದೆ. ಇಂದು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಮೂಲಕ ಶವಗಳನ್ನು ಮಟ್ಲಿ ಹೆಲಿಪ್ಯಾಡ್‌ಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉತ್ತರಕಾಶಿ ಹಿಮಕುಸಿತ: ಕರ್ನಾಟಕದ ವ್ಯಕ್ತಿಯೂ ಸೇರಿ ಕಾಣೆಯಾದವರ ಪಟ್ಟಿ ಇಲ್ಲಿದೆ
ರಕ್ಷಣಾ ಕಾರ್ಯಚರಣೆ ಮುಂದುವರೆದಿದ್ದು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP), ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (NIM), ವಾಯುಪಡೆ, ಸೇನೆ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF), ಮತ್ತು ಜಮ್ಮುವಿನ ಗುಲ್ಮಾರ್ಗ್‌ನಲ್ಲಿರುವ ಹೈ ಆಲ್ಟಿಟ್ಯೂಡ್ ವಾರ್ ಸ್ಕೂಲ್‌ನ ವಿವಿಧ ತಂಡಗಳ ಸಿಬ್ಬಂದಿ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನಿಯೋಜಿಸಲಾಗಿದೆ.

ಸಾವಿನ ಸಂಖ್ಯೆ 19 ಕ್ಕೆ ಏರಿಕೆ
ತರಬೇತಿ ಕೋರ್ಸ್‌ನಲ್ಲಿ ಭಾಗವಹಿಸುತ್ತಿದ್ದ NIM ನ ಪರ್ವತಾರೋಹಿಗಳು ಮಂಗಳವಾರ ಬೆಳಿಗ್ಗೆ ಶಿಖರವನ್ನು ಮುಟ್ಟಿ ಹಿಂದಿರುಗುತ್ತಿದ್ದಾಗ ಹಿಮಕುಸಿತ ಸಂಭವಿಸಿದೆ. NIM ನ ಪರ್ವತಾರೋಹಿಗಳ ತಂಡ ಪ್ರಶಿಕ್ಷಣಾರ್ಥಿಗಳು ಮತ್ತು ಬೋಧಕರನ್ನು ಒಳಗೊಂಡಿತ್ತು. ಪತ್ತೆಯಾದ ಶವಗಳಲ್ಲಿ 14 ಮಂದಿ ತರಬೇತಿ ಪಡೆದವರು ಮತ್ತು ಇಬ್ಬರು ಬೋಧಕರು ಎಂದು ಉತ್ತರಾಖಂಡ್ ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪರ್ವತಾರೋಹಿಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ, ರಕ್ಷಣಾ ತಂಡಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ನಾನು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

5670 ಮೀಟರ್ ಎತ್ತರದ ಪರ್ವತಾರೋಹಣ
ಮಂಗಳವಾರ, ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನ ಸುಮಾರು 41 ಪ್ರಶಿಕ್ಷಣಾರ್ಥಿಗಳು ಮತ್ತು ಬೋಧಕರು ಹಿಮಕುಸಿತದಲ್ಲಿ ಸಿಲುಕಿಕೊಂಡರು. ಪರ್ವತಾರೋಹಣ ಕೋರ್ಸ್ ಸೆಪ್ಟೆಂಬರ್ 14 ರಂದು NIM ಉತ್ತರಕಾಶಿಯಲ್ಲಿ ಪ್ರಾರಂಭವಾಯಿತು ಎಂದು ಸಂಸ್ಥೆ ತಿಳಿಸಿದೆ. 34 ಪ್ರಶಿಕ್ಷಣಾರ್ಥಿಗಳು ಮತ್ತು 7 ಬೋಧಕರು ಮತ್ತು ಒಬ್ಬ ಶುಶ್ರೂಷಾ ಸಹಾಯಕರು ಸೆಪ್ಟೆಂಬರ್ 25 ರಂದು ಬೇಸ್ ಕ್ಯಾಂಪ್‌ಗೆ ಆಗಮಿಸಿದರು. ಪರ್ವತಾರೋಹಣ ಅಕ್ಟೋಬರ್ 2ರಂದು ಆರಂಭಗೊಂಡು ಅಕ್ಟೋಬರ್ 4ಕ್ಕೆ ಪೂರ್ಣಗೊಳ್ಳಬೇಕಿತ್ತು. ತಂಡ 5670 ಮೀಟರ್ ಎತ್ತರದ ಮೌಂಟ್ ದ್ರೌಪದಿಯ ದಂಡ II ಶಿಖರವನ್ನು ತಲುಪಿ ಹಿಂತಿರುಗುತ್ತಿದ್ದಾಗ ಸುಮಾರು 8 ಗಂಟೆಗೆ ಹಿಮಪಾತ ಸಂಭವಿಸಿತು. ಅಕ್ಟೋಬರ್ 4 ರಂದು ಹಿಮಕುಸಿತದಿಂದ 34 ಪ್ರಶಿಕ್ಷಣಾರ್ಥಿಗಳು ಮತ್ತು 7 ಬೋಧಕರು ಸಿಕ್ಕಿಬಿದ್ದರು.

'60 ಅಡಿ ಆಳದ ಬಿರುಕು'
ಬುಧವಾರ, ಉತ್ತರಕಾಶಿಯಲ್ಲಿ ಹಿಮಪಾತದಿಂದ ಬದುಕುಳಿದವರು ತಮ್ಮ ಭಯಾನಕ ಅನುಭವಗಳನ್ನು ವಿವರಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅಪಘಾತದಿಂದ ಬದುಕುಳಿದ ಗುಜರಾತ್‌ನ ಪ್ರಶಿಕ್ಷಣಾರ್ಥಿ ದೀಪ್ ಠಾಕೂರ್, ಬೆಳಿಗ್ಗೆ 9.45 ರ ಸುಮಾರಿಗೆ ದ್ರೌಪದಿಯ ದಂಡಾ ಶಿಖರದಿಂದ ಹಿಂದಿರುಗುತ್ತಿದ್ದಾಗ ಇದ್ದಕ್ಕಿದ್ದಂತೆ ಹಿಮಪಾತ ಸಂಭವಿಸಿದೆ ಎಂದು ಹೇಳಿದರು. ತನ್ನ ಸಹಚರ ಸುಮಾರು 60 ಅಡಿ ಆಳದ ಬಿರುಕುಗಳಿಗೆ ಬಿದ್ದನು. ಅಲ್ಲಿ ಅವನು ಸುಮಾರು 3 ಗಂಟೆಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿದನು.

ಇದೊಂದು ಮರೆಯಲಾಗದ ಘಟನೆ- ಆಕಾಶ್
ಮುಂಬೈನ ತರಬೇತಿ ಪಡೆದ ಮತ್ತೊಬ್ಬ ಬದುಕುಳಿದ ಆಕಾಶ್ ಲಾಲ್ವಾನಿ ಅವರು ದ್ರೌಪದಿಯ ದಂಡದ ಶಿಖರದಿಂದ ಕೇವಲ 100 ಮೀಟರ್ ಕೆಳಗೆ ಇದು ಸಂಭವಿಸಿದೆ. ಹವಾಮಾನ ಸ್ಪಷ್ಟವಾಗಿದ್ದ ಕಾರಣ, ಶಿಖರವನ್ನು ಏರುವುದು ಮತ್ತು ಅಲ್ಲಿ ಛಾಯಾಚಿತ್ರ ಮಾಡಿದ ನಂತರ ಕೆಳಗೆ ಇಳಿಯುವುದು ಯೋಜನೆಯಾಗಿತ್ತು. ಆದರೆ ಹಠಾತ್ ಹಿಮಕುಸಿತವು ಅವರನ್ನು ಮರೆಯಲಾಗದ ದುಃಖವನ್ನುಂಟು ಮಾಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ.