ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕರಿಸಿದ ಉತ್ತರಾಖಂಡ ವಿಧಾನಸಭೆ
ಬಿಜೆಪಿ ಆಡಳಿತವಿರುವ ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಅಂಗೀಕರಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಯುಸಿಸಿ ಮಸೂದೆಯನ್ನು ಮಂಡಿಸಲು ಬಯಸುವುದಾಗಿ ರಾಜಸ್ಥಾನ ಈಗಾಗಲೇ ಹೇಳಿದೆ.
ಯುಸಿಸಿಯು ಎಲ್ಲಾ ಭಾರತೀಯ ನಾಗರಿಕರಿಗೆ ಅನ್ವಯವಾಗುವ ಸಾಮಾನ್ಯ ಕಾನೂನುಗಳ ಗುಂಪನ್ನು ಉಲ್ಲೇಖಿಸುತ್ತದೆ ಮತ್ತು ಇತರ ವೈಯಕ್ತಿಕ ವಿಷಯಗಳ ಜೊತೆಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತುತೆಗೆದುಕೊಳ್ಳುವಲ್ಲಿ ಧರ್ಮವನ್ನು ಆಧರಿಸುವುದಿಲ್ಲ.

ಮಸೂದೆ ಅಂಗೀಕಾರವಾದ ಬಳಿಕ ಮಾತನಾಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ,"ಇಂದು ಉತ್ತರಾಖಂಡಕ್ಕೆ ಮಹತ್ವದ ದಿನವಾಗಿದೆ. ದೇಶಾದ್ಯಂತ ಜನರು ಬಹಳ ದಿನಗಳಿಂದ ಒತ್ತಾಯಿಸುತ್ತಿರುವ ಮಸೂದೆಯನ್ನು ನಾವು ಅಂಗೀಕರಿಸಿದ್ದೇವೆ ಮತ್ತು ಉತ್ತರಾಖಂಡವು ಅದನ್ನು ಅಂಗೀಕರಿಸುವಲ್ಲಿ ಮೊದಲನೆಯದು. ನಾನು ಎಲ್ಲಾ ಶಾಸಕರಿಗೆ ಮತ್ತು ಉತ್ತರಾಖಂಡದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅಧಿಕಾರಕ್ಕೆ ಬರಲು ಮತ್ತು ಅಂತಿಮವಾಗಿ ಮಸೂದೆಯನ್ನು ಅಂಗೀಕರಿಸಲು ನಮಗೆ ಅವಕಾಶವನ್ನು ನೀಡಿತು" ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಲವಾದ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಪುಷ್ಕರ ಧಾಮಿ ಧನ್ಯವಾದಗಳನ್ನು ತಿಳಿಸಿದರು. ಮಸೂದೆ ಯಾರ ವಿರುದ್ಧವೂ ಅಲ್ಲ, ಪ್ರತಿಯೊಬ್ಬರ, ವಿಶೇಷವಾಗಿ ಮಹಿಳೆಯರ ಅನುಕೂಲಕ್ಕಾಗಿ ಎಂದು ಅವರು ಹೇಳಿದರು.
ತಾರತಮ್ಯ ಕಡಿಮೆ ಮಾಡುತ್ತದೆ
"ಈ ಮಸೂದೆಯು ಯಾರ ವಿರುದ್ಧವೂ ಅಂಗೀಕರಿಸಲ್ಪಟ್ಟಿಲ್ಲ. ಇದು ಮದುವೆ, ಜೀವನಾಂಶ, ಉತ್ತರಾಧಿಕಾರ ಮತ್ತು ವಿಚ್ಛೇದನದಂತಹ ವಿಷಯಗಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ. ಮುಖ್ಯವಾಗಿ ಮಹಿಳೆಯರ ವಿಚಾರದಲ್ಲಿರುವ ತಾರತಮ್ಯವನ್ನು ತೆಗೆದುಹಾಕುತ್ತದೆ" ಎಂದು ಹೇಳಿದರು.
ಇಂದು ಸದನದಲ್ಲಿ ವಿಧೇಯಕ ಮಂಡನೆಯಾದ ಬಳಿಕ ಪ್ರತಿಪಕ್ಷಗಳು ಇದನ್ನು ಮೊದಲು ವಿಧಾನಸಭೆಯ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದವು. ಮಸೂದೆಯು ರಾಜ್ಯಪಾಲರ ಒಪ್ಪಿಗೆಯನ್ನು ಪಡೆದ ನಂತರ, ಉತ್ತರಾಖಂಡವು ಸ್ವಾತಂತ್ರ್ಯದ ನಂತರ ಎಲ್ಲಾ ನಾಗರಿಕರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಉತ್ತರಾಧಿಕಾರದ ಕುರಿತು ಸಾಮಾನ್ಯ ಕಾನೂನನ್ನು ಪಡೆಯುವ ಮೊದಲ ರಾಜ್ಯವಾಗಲಿದೆ.
ನಿರ್ದಿಷ್ಟ ಷರತ್ತು ಸೇರಿಸುವ ಅಗತ್ಯವಿದ್ದಲ್ಲಿ ಭವಿಷ್ಯದಲ್ಲಿ ಯುಸಿಸಿಯನ್ನು ತಿದ್ದುಪಡಿ ಮಾಡಬಹುದು ಎಂದು ಪುಷ್ಕರ ಧಾಮಿ ಹೇಳಿದರು. ಲೋಕಸಭೆ ಚುನಾವಣೆಗೆ ಕೇವಲ ಎರಡು ತಿಂಗಳ ಅಂತರದಲ್ಲಿ ಉತ್ತರಾಖಂಡ ಯುಸಿಸಿ ಮಸೂದೆಯು ಬಿಜೆಪಿಯ ಕ್ರಿಯಾ ಯೋಜನೆಯಲ್ಲಿ ಪ್ರಮುಖ ಅಂಶವನ್ನು ಗುರುತಿಸುತ್ತದೆ.












Click it and Unblock the Notifications