ಹಾಲು ಉತ್ಪಾದನೆಯಲ್ಲಿ ದಾಖಲೆ ಬರೆದ ಉತ್ತರ ಪ್ರದೇಶ! 190 ಗ್ರಾಮಗಳನ್ನು ಮೇಲ್ದರ್ಜೆಗೇರಿಸಲು ಪ್ರಯತ್ನ
ಲಕ್ನೋ ಮೇ 23: ಉದ್ಯೋಗ ಮತ್ತು ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಉತ್ತರ ಪ್ರದೇಶ ಸರ್ಕಾರ ಮಹತ್ತರ ಹೆಜ್ಜೆಯನ್ನಿಟ್ಟಿದೆ. 190 ಹಳ್ಳಿಗಳನ್ನು ಪ್ರವರ್ತಕ ಹಾಲು ಉತ್ಪಾದನಾ ಗ್ರಾಮಗಳಾಗಿ ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡು ಸುಮಾರು 6 ವರ್ಷಗಳಾಗಿವೆ. ಈ 6 ವರ್ಷಗಳಲ್ಲಿ ಬಿಜೆಪಿ ಹಲವು ಯೋಜನೆಗಳನ್ನು ತಂದಿದೆ. ಹೀಗಿರುವಾಗ ಇದೀಗ ಬಿಜೆಪಿ ಯೋಗಿ ಅಧಿಕಾರ ವಹಿಸಿಕೊಂಡ 6ನೇ ವರ್ಷದ ಸಂಭ್ರಮಾಚರಣೆ ಮಾಡುತ್ತಿದೆ. ಏಕೆಂದರೆ ಯುಪಿ ಮುಖ್ಯಮಂತ್ರಿಯಾಗಿ ಈ ಹಿಂದೆ ಯಾರೂ 6 ವರ್ಷಗಳ ಕಾಲ ಅಧಿಕಾರ ನಡೆಸಿಲ್ಲ. ಆ ಮೂಲಕ ಯೋಗಿ ಆದಿತ್ಯನಾಥ್ ದಾಖಲೆ ನಿರ್ಮಿಸಿದ್ದಾರೆ.

ಈ ಸಾಧನೆಯನ್ನು ಸಂಭ್ರಮಿಸಲು ಯೋಗಿ ಸರ್ಕಾರ ವಿವಿಧ ಹೊಸ ಯೋಜನೆಗಳನ್ನು ಘೋಷಿಸುತ್ತಿದೆ. ಹೀಗಿರುವಾಗ ಯೋಗಿ ಸರ್ಕಾರ ಮತ್ತೊಂದು ಹೊಸ ಯೋಜನೆ ಪ್ರಕಟಿಸಲು ಚಿಂತನೆ ನಡೆಸಿದೆ. ಅದೇನೆಮದರೆ, ರಾಜ್ಯದಲ್ಲಿ ಉದ್ಯೋಗ ಮತ್ತು ಹಾಲು ಉತ್ಪಾದನೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ 190 ಹಳ್ಳಿಗಳನ್ನು ಪ್ರವರ್ತಕ ಹಾಲು ಉತ್ಪಾದಕ ಗ್ರಾಮಗಳಾಗಿ ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ. ಈ ಬಗ್ಗೆ ಪಶುಸಂಗೋಪನೆ ಮತ್ತು ಡೈರಿ ಅಭಿವೃದ್ಧಿ ಸಚಿವ ಧರಂಪಾಲ್ ಸಿಂಗ್ ಮಾಹಿತಿಯನ್ನು ನೀಡಿದ್ದಾರೆ.
"ಉತ್ತರ ಪ್ರದೇಶ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಹಾಗಾಗಿ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಯುಪಿಯಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸಲು ನಾವು 20 ಜಿಲ್ಲೆಗಳಲ್ಲಿ 190 ಹಳ್ಳಿಗಳನ್ನು ಮಾದರಿ ಹಾಲು ಉತ್ಪಾದನಾ ಗ್ರಾಮಗಳನ್ನಾಗಿ ಮಾಡಲು ನಿರ್ಧರಿಸಿದ್ದೇವೆ. ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ಗುರುತಿಸಲಾದ ಎಲ್ಲಾ ಗ್ರಾಮಗಳಲ್ಲಿನ ಹಾಲು ಉತ್ಪಾದನಾ ಗುಂಪುಗಳನ್ನು ಹಾಲು ಉತ್ಪಾದನಾ ಕೇಂದ್ರಗಳಾಗಿ ಪರಿವರ್ತಿಸಲು ಪ್ರೋತ್ಸಾಹಕಗಳನ್ನು ನೀಡಲಾಗುವುದು ಮತ್ತು ಸಕಾಲಿಕ ಆರ್ಥಿಕ ಬೆಂಬಲವನ್ನು ಖಚಿತಪಡಿಸಿಕೊಳ್ಳಲಾಗುವುದು' ಎಂದು ಧರಂಪಾಲ್ ಸಿಂಗ್ ಹೇಳಿದ್ದಾರೆ.
'ಹೈನುಗಾರಿಕೆ ಕ್ಷೇತ್ರವು ಸ್ವಯಂ ಉದ್ಯೋಗವನ್ನು ಸೃಷ್ಟಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ರಾಜ್ಯವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಕೊಂಡೊಯ್ಯುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಬಿಜೆಪಿ ಸರಕಾರವು ಈ ವರ್ಷ ಬೀದಿಯಲ್ಲಿ ಅಲೆದಾಡುವ ಗೋವುಗಳ ರಕ್ಷಣೆಗೆ ಈಗಾಗಲೇ ಸಾಕಷ್ಟು ಹಣ ಮಂಜೂರು ಮಾಡಿದೆ. ಈ ಮೂಲಕ ಈ ಸರಕಾರ ಜನರಿಗಾಗಿ ಹಾಗೂ ರೈತರಿಗಾಗಿ ಇರುವ ಸರಕಾರ ಎಂಬುದು ಸ್ಪಷ್ಟವಾಗಿದೆ' ಎಂದರು.

ಮಹಿಳೆ ಮತ್ತು ಮಕ್ಕಳ ರಕ್ಷಣೆಯಲ್ಲಿ ರಾಜಿ ಇಲ್ಲ-ಯೋಗಿ
ಇನ್ನೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಯಾವುದೇ ರಾಜಿಯಿಲ್ಲದೆ ನಿರ್ಣಾಯಕ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೆಮ್ಮೆ ಪಟ್ಟಿದ್ದಾರೆ.
ದೇಶಾದ್ಯಂತ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ. ವಿಶೇಷವಾಗಿ ಉತ್ತರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಈ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಹಾಗಾಗಿ ಈ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳಿಗೆ ಆದೇಶಿಸುತ್ತಿದೆ. ಅದರಂತೆ, ಉತ್ತರ ಪ್ರದೇಶ ರಾಜ್ಯ ಸರ್ಕಾರ ಈ ಅಪರಾಧಗಳ ವಿರುದ್ಧ ಕಾಂಕ್ರೀಟ್ ಕ್ರಮ ಕೈಗೊಂಡಿದೆ.
ಇದರಿಂದಾಗಿ ರಾಷ್ಟ್ರಮಟ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ಕುರಿತು ನಿರ್ಣಾಯಕ ಕ್ರಮ ಕೈಗೊಂಡ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಕಳೆದ ವರ್ಷ ನವೆಂಬರ್ 7 ರಿಂದ ಈ ವರ್ಷದ ಫೆಬ್ರವರಿ 27 ರವರೆಗಿನ ಅಂಕಿಅಂಶಗಳನ್ನು ಆಧರಿಸಿ, ಉತ್ತರ ಪ್ರದೇಶವು ಕಾನೂನು ಮತ್ತು ಸಮಸ್ಯೆಗೆ ಸಕ್ರಿಯವಾಗಿ ಪ್ರತಿಕ್ರಿಯಿಸಿದೆ ಎಂದು ದೃಢಪಡಿಸಲಾಗಿದೆ.
ಈ ವಿಷಯವನ್ನು ಉಲ್ಲೇಖಿಸಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೊಲೀಸರನ್ನು ಶ್ಲಾಘಿಸಿದ್ದಾರೆ. ರಾಜ್ಯ ಪೊಲೀಸರು ಐಪಿಸಿಯ ಸೆಕ್ಷನ್ 376 (ಲೈಂಗಿಕ ಅತ್ಯಾಚಾರ) ಅಡಿಯಲ್ಲಿ ದಾಖಲಾದ ಪ್ರಕರಣವನ್ನು ನಿಭಾಯಿಸಿದರು ಮತ್ತು ತ್ವರಿತವಾಗಿ ಪರಿಹಾರವನ್ನು ಕಂಡುಕೊಂಡರು. ಅದೇನೆಂದರೆ, ಈ ಅಪರಾಧಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾದರೆ ಆರೋಪಿಯನ್ನು ಕೂಡಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಬೇಕು. ಸಂತ್ರಸ್ತರ ಸುರಕ್ಷತೆಗೆ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.











Click it and Unblock the Notifications