ಭಾರತಕ್ಕೆ ಕೊರೊನಾ ವಿರುದ್ಧ ಹೋರಾಡಲು ಅಮೆರಿಕಾ ಬೆಂಬಲ
ನವದೆಹಲಿ, ಏಪ್ರಿಲ್ 25: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಲ್ಲಿ ಸೋಂಕಿತ ಪ್ರಕರಣಗಳ ಏರಿಕೆ ನಡುವೆ ಶ್ರಮಪಡುತ್ತಿರುವ ಭಾರತೀಯರ ಬಗ್ಗೆ ನಮಗೆ ಸಹಾನುಭೂತಿಯಿದೆ ಎಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ತಿಳಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು ಕೊರೊನಾವೈರಸ್ ವಿರುದ್ಧ ಹೋರಾಡಲು ಭಾರತೀಯರಿಗೆ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಅಮೆರಿಕಾದ ಚೆನ್ನೈ ರಾಯಭಾರಿ ಕಚೇರಿಯು ಟ್ವೀಟ್ ಮಾಡಿದೆ.
"ತೀವ್ರವಾಗಿ ಹೆಚ್ಚುತ್ತಿರುವ ಕೊವಿಡ್-19 ಪ್ರಕರಣಗಳ ನಡುವೆ ಶ್ರಮ ಪಡುತ್ತಿರುವ ಭಾರತೀಯ ನಾಗರಿಕರ ಬಗ್ಗೆ ನಮಗೆ ಸಹಾನುಭೂತಿಯಿದೆ. ಕೊವಿಡ್-19 ನಿಯಂತ್ರಣಕ್ಕೆ ಪ್ರಯತ್ನಿಸುತ್ತಿರುವ ಭಾರತೀಯ ಸರ್ಕಾರದೊಡನೆ ಕೈ ಜೋಡಿಸಿ ನಿಕಟ ಬೆಂಬಲ ನೀಡುತ್ತಿದ್ದೇವೆ. ಭಾರತೀಯರಿಗೆ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವ ಸಾಹಸಿಗಳಿಗೆ ಹೆಚ್ಚುವರಿ ಬೆಂಬಲವನ್ನು ನಮ್ಮ ಕಡೆಯಿಂದ ಕ್ಷಿಪ್ರವಾಗಿ ನಿಯೋಜಿಸುತ್ತೇವೆ" ಎಂದು ಚೆನ್ನೈನಲ್ಲಿ ಇರುವ ಅಮೆರಿಕಾದ ರಾಯಭಾರಿ ಕಚೇರಿ ಟ್ವಿಟರ್ ನಲ್ಲಿ ಬರೆದುಕೊಂಡಿದೆ.

ಯುಎಸ್ ಭದ್ರತಾ ಸಲಹೆಗಾರರ ಸಂದೇಶ:
ಭಾರತದಲ್ಲಿ ಕೊರೊನಾವೈರಸ್ ತೀವ್ರಗೊಳ್ಳುತ್ತಿರುವ ಬಗ್ಗೆ ಅಮೆರಿಕಾ ಕಳವಳವನ್ನು ವ್ಯಕ್ತಪಡಿಸುತ್ತದೆ. ಸಾಂಕ್ರಾಮಿಕ ಪಿಡುಗನ್ನು ಸಮರ್ಥವಾಗಿ ಎದುರಿಸಲು ಅಗತ್ಯವಿರುವ ಸೌಕರ್ಯಗಳ ಸರಬರಾಜು ಮತ್ತು ಬೆಂಬಲವನ್ನು ನೀಡಲು ನಾವು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲ್ಲಿವಾನ್ ಟ್ವೀಟ್ ಮಾಡಿದ್ದಾರೆ.
https://t.co/w9yZOJ0YuG pic.twitter.com/kG0yxqnIo3
— US Consulate Chennai (@USAndChennai) April 25, 2021
ಭಾರತದಲ್ಲಿ ಕೊರೊನಾವೈರಸ್ ಪ್ರಕರಣ:
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,49,691 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನ 2,767 ಮಂದಿ ಪ್ರಾಣ ಬಿಟ್ಟಿದ್ದು, 2,17,113 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಒಟ್ಟು 1,69,60,172 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೆ 1,40,85,110 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 1,92,311 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ 26,82,751 ಕೊವಿಡ್-19 ಸಕ್ರಿಯ ಪ್ರಕರಣಗಳ ದಾಖಲಾಗಿವೆ.












Click it and Unblock the Notifications