ಯುಪಿ ಅಪ್ರಾಪ್ತೆಯ ಬೆತ್ತಲೆ ದೇಹ ಪತ್ತೆ: ಕುಟುಂಬದಿಂದ ಅತ್ಯಾಚಾರ, ಕೊಲೆ ಆರೋಪ
ಔರೈಯಾ (ಯುಪಿ) ಅಕ್ಟೋಬರ್ 4: ಉತ್ತರ ಪ್ರದೇಶದ ಔರೈಯಾದಲ್ಲಿನ ದಿಬಿಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಗಿ ಹೊಲವೊಂದರಲ್ಲಿ ಸೋಮವಾರ 17 ವರ್ಷದ ಬಾಲಕಿಯ ಬೆತ್ತಲೆ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಬಾಲಕಿಯ ಮನೆಯವರು ಆರೋಪಿಸಿದ್ದಾರೆ.
ಆಕೆಯ ಸಾವು ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದೆ. ಪೊಲೀಸರು ಶವದೊಂದಿಗೆ ಓಡಿಹೋಗುತ್ತಿದ್ದಾರೆ ಎಂದು ಹೇಳಿದೆ. ಆದರೆ ಅಧಿಕಾರಿಗಳು ಆರೋಪವನ್ನು ನಿರಾಕರಿಸಿದ್ದಾರೆ. ಬಾಲಕಿಯ ಕುಟುಂಬಸ್ಥರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಬೆಳಗ್ಗೆ ಮಲ ವಿಸರ್ಜನೆಗೆಂದು ಹೊರ ಹೋಗಿದ್ದ ಆಕೆ ಎಷ್ಟೋ ಹೊತ್ತಾದರೂ ಮನೆಗೆ ಬಾರದೇ ಇದ್ದುದರಿಂದ ಆಕೆಗಾಗಿ ಹುಡುಕಾಟ ನಡೆಸಿದ್ದು, ಗದ್ದೆಯಲ್ಲಿ ಶವ ಪತ್ತೆಯಾಗಿದೆ.
ಘಟನೆ ಬಳಿಕ ಔರೈಯಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಚಾರು ನಿಗಮ್ ಅವರು ವಿಧಿವಿಜ್ಞಾನ ತಜ್ಞರೊಂದಿಗೆ ಗ್ರಾಮವನ್ನು ತಲುಪಿದರು ಮತ್ತು ಪ್ರಕರಣವನ್ನು ಭೇದಿಸಲು ವಿಶೇಷ ಕಾರ್ಯಾಚರಣೆ ಗುಂಪು ಸೇರಿದಂತೆ 10 ಪೊಲೀಸ್ ತಂಡಗಳನ್ನು ನಿಯೋಜಿಸಿದರು.

ರಾಜಕೀಯ ಕೆಸರೆರೆಚಾಟ ಶುರು
ಪೊಲೀಸರು ಶವವನ್ನು ಹೊತ್ತೊಯ್ಯುವ ಮತ್ತು ಬಾಲಕಿ ಹಿಂದೆ ಕುಟುಂಬಸ್ಥರು ಹೋಗುತ್ತಿರುವ ವಿಡಿಯೊವನ್ನು ಕಾಂಗ್ರೆಸ್ ಹಂಚಿಕೊಂಡಿದೆ. ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, "ಔರೈಯಾದಲ್ಲಿ 17 ವರ್ಷದ ಬಾಲಕಿಯ ಬೆತ್ತಲೆ ದೇಹವು ಗದ್ದೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಆಗಮಿಸಿ ಶವದೊಂದಿಗೆ ಓಡಿಹೋಗಲು ಪ್ರಾರಂಭಿಸಿದರು. ಬಡ ಕುಟುಂಬವು ಹಿಂದೆ ಓಡುತ್ತಿದೆ. ಉತ್ತರ ಪ್ರದೇಶ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ 'ನಂಬರ್ 1' ಆದರೆ ಯಾರೂ ಅದರ 'ರಾಜ್' ಎಂದು ಹೇಳುವುದಿಲ್ಲ.
ಆರೋಪವನ್ನು ತಳ್ಳಿಹಾಕಿದ ಎಸ್ಪಿ ನಿಗಮ್, ಪೊಲೀಸರು ಎಲ್ಲಾ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದರು ಮತ್ತು ಕುಟುಂಬವನ್ನು ಸಮಾಧಾನಪಡಿಸಿದ ನಂತರ ದೇಹವನ್ನು ಸ್ವಾಧೀನಕ್ಕೆ ತೆಗೆದುಕೊಂಡರು. ಯಾವುದೇ ರೀತಿಯಲ್ಲಿ ಬಲವಂತವಾಗಿ ದೇಹವನ್ನು ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು. ಮರಣೋತ್ತರ ಪರೀಕ್ಷೆಯನ್ನು ವಿಡಿಯೋ ಮಾಡಿ ಕುಟುಂಬದವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಎಸ್ಪಿ ನಿಗಮ್ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಪತ್ತೆಯಾಗಿದ್ದ ಬಾಲಕಿಯರ ಮೃತದೇಹಗಳು
ಕಳೆದ ಕೆಲ ದಿನಗಳ ಹಿಂದೆ (ಸೆಪ್ಟೆಂಬರ್ 20) ಪೂರ್ವ ಉತ್ತರ ಪ್ರದೇಶದ ಸಂತ ಕಬೀರ್ ನಗರದ ರಾಂಪುರ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ 18 ವರ್ಷದ ಯುವಕ ಮತ್ತು 15 ವರ್ಷದ ಬಾಲಕಿಯ ಮೃತದೇಹಗಳು ಪತ್ತೆಯಾಗಿತ್ತು. ಮೃತರ ಕುಟುಂಬಸ್ಥರು ಇಬ್ಬರನ್ನು ಹತ್ಯೆಗೈದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.ಮೃತ ಯುವಕ ಮತ್ತು ಬಾಲಕಿ ನಡುವೆ ಸಂಬಂಧವಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ದಲಿತ ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಕೊಲೆ ಆರೋಪ
ಲಖಿಂಪುರ ಖೇರಿ ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಅಪ್ರಾಪ್ತ ಸಹೋದರಿಯರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕೆಲವೇ ದಿನಗಳಲ್ಲಿ (ಸೆಪ್ಟೆಂಬರ್ 15) ಈ ಘಟನೆ ನಡೆದಿದೆ. ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಹತ್ಯೆ ಮಾಡಲಾಗಿತ್ತು. ಶವಗಳನ್ನು ಲಖಿಂಪುರ ಖೇರಿ ಜಿಲ್ಲೆಯ ನಿಘಾಸನ್ ಪೊಲೀಸ್ ಠಾಣೆ ವ್ಯಾಪ್ತಿಯ ಲಾಲ್‌ಪುರ್ ಮಜ್ರಾ ತಮೋಲಿ ಪೂರ್ವಾ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸ್ಥಳೀಯ ಗ್ರಾಮಸ್ಥರು ಹಾಗೂ ಬಾಲಕಿಯರ ಕುಟುಂಬಸ್ಥರು ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರು. ಮೃತ ಸಹೋದರಿಯರ ಕುಟುಂಬವು ಮೂವರ ಮೇಲೆ ಅತ್ಯಾಚಾರ ಮತ್ತು ಕೊಲೆಯ ಆರೋಪವನ್ನು ಮಾಡಿದ್ದು, ಗ್ರಾಮದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ನಿಘಾಸನ್ ಕ್ರಾಸಿಂಗ್‌ನಲ್ಲಿ ಪ್ರತಿಭಟನೆ ನಡೆಸಿದರು.

ಸೆಪ್ಟೆಂಬರ್ ತಿಂಗಳಲ್ಲಿ ಐದಾರು ಅತ್ಯಾಚಾರ ಘಟನೆ
ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಕುನ್ವರ್‌ಪುರ ಗ್ರಾಮದಲ್ಲಿ ಹದಿಹರೆಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಬಳಿಕ ಆರೋಪಿಗಳು ಆಕೆಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದರು. ಸಂತ್ರಸ್ತೆಯನ್ನು ಲಕ್ನೋದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿಲಾಗಿತ್ತು. 12 ದಿನಗಳವರೆಗೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಸಂತ್ರಸ್ತೆ ನಂತರ ಸಾವನ್ನಪ್ಪಿದಳು. ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹೀಗೆ ಒಂದೇ ತಿಂಗಳಲ್ಲಿ ಐದಾರು ಅತ್ಯಾಚಾರದ ಆರೋಪಗಳು ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿವೆ. ಈ ಬೆಳವಣಿಗೆಯನ್ನು ಗಮನಿಸಿದರೆ ಈಗಾಗಲೇ ದೇಶದಲ್ಲಿ ಅತ್ಯಾಚಾರ ಸಂಖ್ಯೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಉತ್ತರಪ್ರದೇಶ ತನ್ನ ಸ್ಥಾನದಿಂದ ಕೆಳಗಿಳಿಯುವಂತೆ ಕಾಣಿಸುತ್ತಿಲ್ಲ.












Click it and Unblock the Notifications