ಹಿಂದೂಗಳ 'ಸಂಕಲ್ಪ ಯಾತ್ರೆ'ಗೆ ಆಖಿಲೇಶ್ ತಡೆ
ಲಕ್ನೋ, ಅ.15: ವಿಶ್ವ ಹಿಂದೂ ಪರಿಷತ್ ಆಯೋಜನೆಯ' ಚೌರಾಸಿ ಕೋಸ್ ಪರಿಕ್ರಮಾ ಯಾತ್ರೆ'ಗೆ ತಡೆಯೊಡ್ಡುವಲ್ಲಿ ಯಶಸ್ವಿಯಾಗಿದ್ದ ಉತ್ತರಪ್ರದೇಶ ಸರ್ಕಾರ ಈಗ ಅ.18ರಿಂದ ನಡೆಸಲುದ್ದೇಶಿಸಿದ್ದ 'ಸಂಕಲ್ಪ ಯಾತ್ರೆ'ಗೂ ನಿಷೇಧ ಹೇರಿದೆ.
ಮುಜಾಫರ್ ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಕೋಮು ಗಲಭೆ ಹಾಗೂ ಭದ್ರತಾ ಹಿತದೃಷ್ಟಿಯಿಂದ ಅಯೋಧ್ಯೆಯಲ್ಲಿ ವಿಎಚ್ ಪಿ ನಡೆಸಲು ಉದ್ದೇಶಿಸಿರುವ ಸಂಕಲ್ಪ ಯಾತ್ರೆಗೆ ಜಿಲ್ಲಾಡಳಿತ ತಡೆ ನೀಡಿ, ಸ್ಥಳದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನಿರ್ದೇಶಿಸಿದ್ದಾರೆ.
ಆದರೆ ಉತ್ತರಪ್ರದೇಶ ಸರ್ಕಾರದ ಈ ಕ್ರಮವನ್ನು ಖಂಡಿಸಿರುವ ವಿಎಚ್ ಪಿ, ಒಂದು ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ ಐಜಿ ಆರ್ ಕೆ ವಿಶ್ವಕರ್ಮ ಮಾತನಾಡಿ, ಶಾಂತಿ ಮತ್ತು ಭದ್ರತಾ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. 5 ಎಎಸ್ ಪಿಗಳು,ಮ್ 10 ಡಿವೈಎಸ್ ಪಿಗಳು, 50 ಇನ್ಸ್ ಪೆಕ್ಟರ್ಸ್, 50 ಎಸ್ ಐಗಳು, 10 ಮಹಿಳಾ ಎಸ್ ಐಗಳು, 300 ಕಾನ್ಸ್ ಟೇಬಲ್ ಗಳು ಸೇರಿದಂತೆ ರಿಸರ್ವ್ ಪಡೆ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ ಎಂದಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ, 2 ತಿಂಗಳ ಹಿಂದೆ ವಿಎಚ್ ಪಿ '84 ಕೋಸಿ ಯಾತ್ರಾ' ನಡೆಸಲು ಉದ್ದೇಶಿಸಿತ್ತು. ಈ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆಗಳ ಮುಖಂಡರಾದ ಪ್ರವೀಣ್ ತೊಗಾಡಿಯಾ ಮತ್ತು ಅಶೋಕ್ ಸಿಂಘಾಲ್ ಸೇರಿದಂತೆ 1700 ಮಂದಿಯನ್ನು ಬಂಧಿಸಲಾಗಿತ್ತು. ಬಿಜೆಪಿ ವಕ್ತಾರ ಪ್ರಕಾಶ್ ಜಾವೇದ್ಕರ್ ಅವರು ಅಖಿಲೇಶ್ ಸರ್ಕಾರದ ಕ್ರಮವನ್ನು ಖಂಡಿಸಿ ಟ್ವೀಟ್ ಮಾಡಿದ್ದು ಹೀಗೆ
Banning VHP sankalp Yatra , a peaceful program is nothing but vote bank politics of akhilesh govt.
— Prakash Javadekar (@PrakashJavdekar) October 15, 2013
ರಾಮಮಂದಿರ ನಿರ್ಮಾಣದ ಕುರಿತು ಹೊಸದಾಗಿ ಆಂದೋಲನ ರೂಪಿಸುವ ಮತ್ತು ಮಂದಿರ ನಿರ್ಮಾಣ ಕುರಿತು ಸಂಸದೀಯ ಕಾನೂನು ರಚನೆಗೆ ಒತ್ತಾಯಿಸಿ ಅ.18ರಂದು ಸಂಕಲ್ಪ ಯಾತ್ರೆ ನಡೆಸಲು ವಿಎಚ್ ಪಿ ನಿರ್ಧರಿಸಿತ್ತು.












Click it and Unblock the Notifications