Unseasonal Rainfall: ರೈತರ ಮೇಲೆ ಮುನಿಸಿಕೊಂಡ ವರುಣ: ಭಾರೀ ಮಳೆಗೆ ಖರೀದಿ ಕೇಂದ್ರಗಳಲ್ಲಿ ಗೋಧಿ ಹಾನಿ!
ರೈತರ ಮೇಲೆ ಮಳೆರಾಯ ಮುನಿಸಿಕೊಂಡಿದ್ದು ಅಕಾಲಿಕ ಮಳೆಯಿಂದಾಗಿ ಗೋಧಿ ಹಾನಿಗೊಳಗಾಗುವ ಭೀತಿ ಶುರುವಾಗಿದೆ. ದೇಶದಲ್ಲಿ ಹಲವೆಡೆ ಬರಗಾಲ ಆವರಿಸಿದರೆ ಇನ್ನೂ ಕೆಲವೆಡೆ ಭಾರೀ ಮಳೆ, ಹಿಮಪಾತ, ಬಿರುಸಿನ ಗಾಳಿ, ಅಧಿಕ ಬಿಸಿಲು ಜನರನ್ನು ಹೈರಾಣಾಗಿಸಿದೆ.
ಮಧ್ಯಪ್ರದೇಶದ ವಿವಿಧ ಭಾಗಗಳ ಖರೀದಿ ಕೇಂದ್ರಗಳಲ್ಲಿ ಗೋಧಿ ಬೆಳೆ ಮಾರಾಟ ಮಾಡಲು ಸರದಿಗಾಗಿ ಕಾಯುತ್ತಿರುವ ರೈತರಿಗೆ ಅಕಾಲಿಕ ಮಳೆ ಸಂಕಷ್ಟ ತಂದಿದೆ. ಕಳೆದ ಎರಡ್ಮೂರು ದಿನಗಳಿಂದ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವಿವಿಧೆಡೆ ಮಳೆಯಾಗುತ್ತಿದ್ದು, ಗೋಧಿ ತುಂಬಿದ ಚೀಲಗಳು ಒದ್ದೆಯಾಗುವ ಭೀತಿ ಎದುರಾಗಿದೆ. ಯಾವುದೇ ಹೊದಿಕೆ ಇಲ್ಲದಿದ್ದಲ್ಲಿ ಈ ಮೂಟೆಗಳು ಮಳೆನೀರಿನಲ್ಲಿ ತೊಯ್ದು ರೈತರಿಗೆ ಭಾರಿ ಆರ್ಥಿಕ ನಷ್ಟವನ್ನುಂಟು ಮಾಡುತ್ತವೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ.

ಈ ವರ್ಷ ಮಧ್ಯಪ್ರದೇಶದಲ್ಲಿ ಗೋಧಿ ಉತ್ಪಾದನೆ ಉತ್ತಮವಾಗಿದೆ. ಆದರೆ ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ರೈತರು ಗೋಧಿ ತುಂಬಿದ ಟ್ರ್ಯಾಕ್ಟರ್ ಟ್ರಾಲಿಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಕೇಂದ್ರಗಳಿಗೆ ತೆರಳುತ್ತಿದ್ದಾರೆ. ಅವರಲ್ಲಿ ಹಲವರು ಈ ಕೇಂದ್ರಗಳ ಹೊರಗೆ ಸರತಿ ಸಾಲಿನಲ್ಲಿ ನಿಂತು ಉತ್ಪನ್ನಗಳನ್ನು ಮಾರಾಟ ಮಾಡಲು ತಮ್ಮ ಸರದಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಮಳೆರಾಯ ರೈತರ ಆಸೆಗೆ ತಣ್ಣೀರೆರೆಚುದ್ದಿದ್ದಾನೆ.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತ ಖರೀದಿ ಕೇಂದ್ರಗಳಿಗೆ ತಂದ ಗೋಧಿ ಒದ್ದೆಯಾಗುವ ಆತಂಕ ಸೃಷ್ಟಿಯಾಗಿದೆ. ಭಾರತೀಯ ಕಿಸಾನ್ ಸಂಘದ ಪ್ರಾಂತ ಪ್ರಮುಖ್, ರಾಹುಲ್ ಧೂತ್ ಫ್ರೀ ಪ್ರೆಸ್‌ಗೆ ಮಾತನಾಡಿ, 'ರಾಜ್ಯ ಸರ್ಕಾರ ನಿಗದಿಪಡಿಸಿದ ದೈನಂದಿನ ಖರೀದಿ ಪಾಳೆಯ ರೈತರನ್ನು ಬಂಧಿಸಿದೆ. ಒಂದು ಖರೀದಿ ಕೇಂದ್ರ 1,000 ಕ್ವಿಂಟಲ್ ಸ್ಲಾಟ್ ಮಿತಿಯನ್ನು ಹೊಂದಿದೆ. ಒಂದು ಕೇಂದ್ರಕ್ಕೆ 4,000 ಕ್ವಿಂಟಾಲ್ ಗೋಧಿ ಬಂದರೆ, ಉಳಿದ 3,000 ಕ್ವಿಂಟಲ್ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಿನ ದಿನಗಳವರೆಗೆ ಕಾಯಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ಮಳೆಯು ರೈತರ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸಿದೆ ಎಂದು ಆರೋಪಿಸಿದರು.
ಹೆಚ್ಚಿನ ರೈತರು ಪಾಲಿಥಿನ್ ಹೊದಿಕೆಯನ್ನು ಕೊಂಡೊಯ್ಯುತ್ತಿದ್ದರೂ, ಮಳೆಯ ಜೊತೆಗೆ ರಭಸವಾಗಿ ಬೀಸುವ ಗಾಳಿಯ ಹಿನ್ನೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಉಳಿಸಲು ಇದು ಸಾಕಾಗುತ್ತಿಲ್ಲ. ಮತ್ತೊಂದು ಸಮಸ್ಯೆ ಎಂದರೆ ಸಾರಿಗೆ ಚಲನ್ ಇಲ್ಲದೇ ಮಾಲೀಕರು ಗೋಧಿಯನ್ನು ತಮ್ಮ ಗೋದಾಮುಗಳಿಗೆ ಅನುಮತಿಸಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ತೆರೆದಿಟ್ಟಿದ್ದ ಗೋಧಿ ಕೂಡ ಮಳೆಗೆ ಒದ್ದೆಯಾಗಿದ್ದರಿಂದ ರೈತರಿಗೆ ಮತ್ತೊಮ್ಮೆ ಪೆಟ್ಟು ಬಿದ್ದಿದೆ.
ರೈತರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಕೇಂದ್ರಗಳಿಗೆ ಆಗಮಿಸುತ್ತಿದ್ದು, ಗೋಧಿ ತುಂಬಿದ ಟ್ರ್ಯಾಕ್ಟರ್ ಟ್ರಾಲಿಯನ್ನು ಪಾಲಿಥಿನ್‌ನಿಂದ ಮುಚ್ಚುತ್ತಿದ್ದಾರೆ. ಆದರೆ ಮಳೆಯ ಜೊತೆಗಿನ ಜೋರಾದ ಗಾಳಿಯಿಂದ ಉತ್ಪನ್ನಗಳನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ರೈಸನ್ ರೈತ ಸುಭಾಷ್ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದಿನ ಎರಡು ಮೂರು ದಿನಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಗಳ ಕಾಲ ನೈಋತ್ಯ ಮತ್ತು ಆಗ್ನೇಯ ಮಧ್ಯಪ್ರದೇಶದಲ್ಲಿ ಮಳೆ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕದಲ್ಲಿ ಮಳೆ:
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ 2024 ರ ಏಪ್ರಿಲ್ 12 ರಿಂದ 14 ರವರೆಗೆ ಮತ್ತು 17 ಮತ್ತು 18 ನೇ ತಾರೀಖಿನಂದು ಕರ್ನಾಟಕದಾದ್ಯಂತ ಗುಡುಗು ಸಹಿತ ಚದುರಿದಂತೆ ತುಂಬಾ ಹಗುರದಿಂದ ಸಾಧಾರಣ ಮಳೆಯಾಗುತ್ತದೆ ಎಂದು ಮುನ್ಸೂಚನೆ ನೀಡಿದೆ. ಅಸಾಧಾರಣವಾದ ಬೇಸಿಗೆಯನ್ನು ಎದುರಿಸುತ್ತಿರುವ ಬೆಂಗಳೂರು, ಏಪ್ರಿಲ್ 17 ಮತ್ತು 18 ರಂದು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ಮಳೆಯು ವ್ಯಾಪಕವಾಗಿ ಅಥವಾ ಭಾರೀ ಪ್ರಮಾಣದಲ್ಲಿರದೆ ಇರಬಹುದು. ಈ ಬಿಸಿಲಿನಿಂದ ಕಂಗೆಟ್ಟ ಜನರಿಗೆ ಮಳೆ ಬರುವ ಸೂಚನೆ ಖುಷಿ ನೀಡಿದೆ.












Click it and Unblock the Notifications