ಜ. 2ರಿಂದ ಎಲ್ಲ ರಾಜ್ಯಗಳಲ್ಲಿಯೂ ಕೋವಿಡ್ ಲಸಿಕೆ ಪೂರ್ವಾಭ್ಯಾಸ
ನವದೆಹಲಿ, ಡಿಸೆಂಬರ್ 31: ಎಲ್ಲ ರಾಜ್ಯಗಳಲ್ಲಿಯೂ ಕೋವಿಡ್ ಲಸಿಕೆಗಳನ್ನು ನೀಡುವ ಪೂರ್ವಾಭ್ಯಾಸಗಳು ಜನವರಿ 2 ರಿಂದ ಆರಂಭವಾಗಲಿದೆ. ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದಕ್ಕೂ ಮುನ್ನ ಆಂಧ್ರಪ್ರದೇಶ, ಗುಜರಾತ್, ಪಂಜಾಬ್ ಮತ್ತು ಅಸ್ಸಾಂಗಳಲ್ಲಿ ಲಸಿಕೆ ವಿತರಣೆ ವ್ಯವಸ್ಥೆಯ ಸಿದ್ಧತೆಯನ್ನು ಮೌಲ್ಯಮಾಪನ ಮಾಡಲು ನಡೆಸಲಾಗಿದ್ದ ಎರಡು ದಿನಗಳ ಪೂರ್ವಾಭ್ಯಾಸ ಯಶಸ್ವಿಯಾಗಿದೆ ಎಂದು ಸಚಿವಾಲಯ ಹೇಳಿತ್ತು.
ಫೈಜರ್ ಲಸಿಕೆ ಪಡೆದುಕೊಂಡ ನರ್ಸ್ಗೆ ಕೊರೊನಾ ಪಾಸಿಟಿವ್
ಮೊದಲ ದಿನದ ಲಸಿಕೆ ಪೂರ್ವಾಭ್ಯಾಸದಿಂದ ದೊರೆತ ಕ್ಷೇತ್ರ ಪ್ರತಿಕ್ರಿಯೆಗಳನ್ನು ಡಿಸೆಂಬರ್ 29ರಂದು ರಾಜ್ಯಗಳು ಹಾಗೂ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಜಂಟಿ ಕಾರ್ಯದರ್ಶಿಗಳು ಪರಾಮರ್ಶಿಸಿದ್ದಾರೆ.
'ಕಾರ್ಯಾಚರಣೆ ಸ್ವರೂಪದ ಬಗ್ಗೆ ಮತ್ತು ಪಾರದರ್ಶಕತೆ ಖಾತರಿಗೆ ಐಟಿ ವೇದಿಕೆಯನ್ನು ಬಳಸಿಕೊಳ್ಳುವುದು ಹಾಗೂ ದೇಶದೆಲ್ಲೆಡೆ ಬೃಹತ್ ಸಂಖ್ಯೆಯಲ್ಲಿ ಜನರಿಗೆ ಚುಚ್ಚುಮದ್ದು ನೀಡುವ ಪ್ರಕ್ರಿಯೆಯು ತಲುಪುವಂತೆ ಪರಿಣಾಮಕಾರಿಯಾಗಿ ನಿಗಾವಹಿಸುವುದರ ಕುರಿತಾದ ಕ್ರಮಗಳ ಬಗ್ಗೆ ಎಲ್ಲ ರಾಜ್ಯಗಳೂ ತೃಪ್ತಿ ವ್ಯಕ್ತಪಡಿಸಿವೆ' ಎಂದು ಸಚಿವಾಲಯ ತಿಳಿಸಿದೆ.
ಭಾರತಕ್ಕೆ ಕೆಲವೇ ದಿನಗಳಲ್ಲಿ ಕೊರೊನಾ ಲಸಿಕೆ ಲಭ್ಯ: ಏಮ್ಸ್ ನಿರ್ದೇಶಕ
'ಮಾಹಿತಿ ತಂತ್ರಜ್ಞಾನ ವೇದಿಕೆಗಳ ಕುರಿತ ಹೆಚ್ಚುವರಿ ಸಲಹೆಗಳನ್ನು ಕೋ-ವಿನ್ ಪ್ಲಾಟ್‌ಫಾರ್ಮ್‌ನ ವೃದ್ಧಿಗೆ ಟಿಪ್ಪಣಿ ಮಾಡಲಾಗಿದೆ. ವಿಸ್ತೃತವಾದ ಒಳನೋಟಗಳು ಮತ್ತು ಪಡೆದ ಪ್ರತಿಕ್ರಿಯೆಗಳು ಕಾರ್ಯಾಚರಣೆ ಮಾರ್ಗಸೂಚಿ ಮತ್ತು ಐಟಿ ಪ್ಲಾಟ್‌ಫಾರ್ಮ್ ಅನ್ನು ಉತ್ಕೃಷ್ಟಗೊಳಿಸಲು ನೆರವಾಗಲಿದೆ ಹಾಗೂ ಕೋವಿಡ್ ಲಸಿಕೆ ವಿತರಣೆ ಯೋಜನೆ ಬಲಪಡಿಸಲು ಸಹಾಯಕವಾಗಲಿದೆ' ಎಂದು ಹೇಳಿದೆ.