ಬಿಹಾರದಲ್ಲಿ ಮುಖಭಂಗ: ನಾಲ್ವರು ಕೇಂದ್ರ ಸಚಿವರ ತಲೆದಂಡ?
ನವದೆಹಲಿ, ನ 10: ಬಿಹಾರದಲ್ಲಿನ ಮುಖಭಂಗದಿಂದ ತೀವ್ರ ಮುಜುಗರಕ್ಕೊಳಗಾಗಿರುವ ಬಿಜೆಪಿ, ಸರಿಯಾಗಿ ಕೆಲಸ ನಿರ್ವಹಿಸದ ಸಚಿವರನ್ನು ಕೈಬಿಡುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಅಧಿಕಾರಕ್ಕೆ ಬಂದ ನಂತರ ಕೆಲವು ಸಚಿವರು ತಮ್ಮ ಇಲಾಖೆಯಲ್ಲಿ ಯಾವುದೇ ಸಾಧನೆ ಮಾಡದೇ, ಜೊತೆಗೆ ಸರಕಾರಕ್ಕೆ ಮುಜುಗರ ತರುವ ಹೇಳಿಕೆ ನೀಡುವ ಮೂಲಕ ವ್ಯಾಪಕ ಟೀಕೆಗೆ ಒಳಗಾಗುತ್ತಿದ್ದಾರೆ. ಇಂತಹ ಸಚಿವರನ್ನು ಸಂಪುಟದಿಂದ ಕೈಬಿಡುವ ನಿರ್ಧಾರಕ್ಕೆ ಕೇಂದ್ರ ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ.
ತನ್ನ ವೇಗಕ್ಕೆ ಸ್ಪಂದಿಸದ ಸಚಿವರ ವಿರುದ್ದ ಮೋದಿ ಆಗಾಗ ಬೇಸರ ವ್ಯಕ್ತ ಪಡಿಸಿದ್ದುಂಟು. ಈಗ ಸಚಿವ ಸಂಪುಟ ಪುನಾರಚನೆಯ ಜೊತೆಗೆ, ಸೂಕ್ತವಾಗಿ ಕಾರ್ಯ ನಿರ್ವಹಿಸದ ಸಚಿವರನ್ನು ಸಂಪುಟದಿಂದ ಕೊಕ್ ನೀಡಲು ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಒಲವು ತೋರಿದ್ದಾರೆ ಎನ್ನುವ ಮಾಹಿತಿಯಿದೆ. (ಬಿಹಾರದಲ್ಲಿ ನಡೆಯಲಿಲ್ಲ ಮೋದಿ ಟ್ರಿಕ್)
ಸಂಪುಟ ಪುನರಾರಚನೆ ಮತ್ತು ಕೆಲವು ಸಚಿವರನ್ನು ಕೈಬಿಡುವ ನಿರ್ಧಾರ ಬಹುತೇಕ ಖಚಿತವಾಗಿದ್ದು, ಲೋಕಸಭೆಯ ಚಳಿಗಾಲದ ಅಧಿವೇಶನದ ನಂತರ ಅಂತಿಮ ನಿರ್ಧಾರ / ದಿನಾಂಕ ಹೊರಬೀಳುವ ಸಾಧ್ಯತೆಯಿದೆ.
ನಾಲ್ವರು ಸಚಿವರನ್ನು ಕೈಬಿಡುವುದರ ಜೊತೆಗೆ, ಬಿಹಾರದಲ್ಲಿ ಚುನಾವಣೆಯ ವೇಳೆ ಪಕ್ಷದ ಪರವಾಗಿ ಸಮಯ ವ್ಯಯಿಸಿದ ಸಚಿವರ ವಿರುದ್ದವೂ, ಮೋದಿ ತೀವ್ರ ಅಸಮಾಧಾನ ಹೊಂದಿದ್ದಾರೆ ಎನ್ನಲಾಗುತ್ತಿದೆ. (ಮಾಹಿತಿ: ಎನ್ದಿಟಿವಿ)
ಸಂಪುಟದಿಂದ ಕೊಕ್ ಭೀತಿ ಎದುರುಸುತ್ತಿರುವ ಸಂಭಾವ್ಯ ಸಚಿವರಾರು, ಸ್ಲೈಡಿನಲ್ಲಿ..

ಪಕ್ಷದ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡವರು
ಬಿಹಾರ ಚುನಾವಣೆಯನ್ನು ಶತಾಯುಗತಾಯು ಗೆಲ್ಲಲೇ ಬೇಕು ಎಂದು ಮೋದಿ ಸರಕಾರ ಪಣತೊಟ್ಟಿತ್ತು. ಅದಕ್ಕಾಗಿ ಹನ್ನೊಂದಕ್ಕೂ ಹೆಚ್ಚು ಸಚಿವರು ಅವಿರತ ಶ್ರಮ ವಹಿಸಿದ್ದರು. ಅದರಲ್ಲಿ ಪ್ರಮುಖವಾಗಿ ಜೆ ಪಿ ನಡ್ಡಾ, ಅನಂತ್ ಕುಮಾರ್, ಧರ್ಮೇಂದ್ರ ಪ್ರಧಾನ್, ರವಿಶಂಕರ್ ಪ್ರಸಾದ್ ಮುಂತಾದವರು.

ಸದಾನಂದ ಗೌಡ
ಕೇಂದ್ರ ಕಾನೂನು ಸಚಿವ ಡಿ ವಿ ಸದಾನಂದ ಗೌಡ ಕಾರ್ಯವೈಖರಿ ಬಗ್ಗೆ ಮೋದಿ ಅಸಮಾಧಾನ ಹೊಂದಿದ್ದಾರೆ ಎನ್ನುವ ಸುದ್ದಿಯಿದೆ. ನ್ಯಾಯಾಧೀಶರ ನೇಮಕಾತಿ ಕುರಿತಂತೆ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸರ್ವೋಚ್ಚ ನ್ಯಾಯಾಲಯ ರದ್ದು ಪಡಿಸಿದಾಗ ಸದಾನಂದ ಗೌಡ್ರು ಅದರ ಬಗ್ಗೆ ಗಮನ ಹರಿಸಲಿಲ್ಲ ಎನ್ನುವುದು ಮೋದಿ ಕೋಪಕ್ಕೆ ಕಾರಣ.

ವಿ ಕೆ ಸಿಂಗ್
ಬಿಹಾರದಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಅಂಶಗಳ ಪಟ್ಟಿಯಲ್ಲಿ ಒಂದಾಗಿರುವ ದಾದ್ರಿ ಘಟನೆಯಲ್ಲಿ, ಸಚಿವ ವಿ ಕೆ ಸಿಂಗ್ ಸರಕಾರಕ್ಕೆ ತೀವ್ರ ಮುಜುಗರ ತರುವ ಹೇಳಿಕೆಯನ್ನು ನೀಡಿದ್ದರು. ಘಟನೆಯಲ್ಲಿ ಮೃತ ಪಟ್ಟವರನ್ನು, ನಾಯಿಗೆ ಹೋಲಿಸಿ ವಿ ಕೆ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಗಿರಿರಾಜ್ ಸಿಂಗ್
ಬಿಹಾರದ ನಾವ್ಡಾ ಕ್ಷೇತವನ್ನು ಪ್ರತಿನಿಧಿಸುತ್ತಿರುವ ಸಂಸದ ಜೊತೆಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಬಿಹಾರ ಚುನಾವಣೆಯ ಮುನ್ನ ಗೋಮಾಂಸದ ವಿಚಾರದಲ್ಲಿ ಬೇಕಾಬಿಟ್ಟಿ ಹೇಳಿಕೆ ನೀಡಿ ಪಕ್ಷಕ್ಕೆ ತೀವ್ರ ಮುಜುಗರ ತಂದಿದ್ದರು.

ಮಹೇಶ್ ಶರ್ಮಾ
ದೆಹಲಿಗೆ ಹೊಂದಿಕೊಂಡಿರುವ ಗೌತಂ ಬುದ್ದ ನಗರದ ಬಿಜೆಪಿಯ ಚುನಾಯಿತ ಪ್ರತಿನಿಧಿ ಮಹೇಶ್ ಶರ್ಮಾ, ಮೂಲತಃ ಆರ್ ಎಸ್ ಎಸ್ ಕಾರ್ಯಕರ್ತ. ತನ್ನ ಕಟ್ಟಾ ಹಿಂದೂಪರ ಹೇಳಿಕೆಯಿಂದ ಇವರು ಮೋದಿ ಸರಕಾರಕ್ಕೆ ಮುಜುಗರ ತಂದಿದ್ದೇ ಹೆಚ್ಚು. ಅಸಹಿಷ್ಣುತೆಯ ಬಗ್ಗೆ, ಮೊದಲು ಲೇಖಕರು ಬರೆಯುವುದನ್ನು ನಿಲ್ಲಿಸಲಿ ಆಮೇಲೆ ನೋಡೋಣ ಎನ್ನುವ ಹೇಳಿಕೆಯನ್ನು ನೀಡಿದ್ದರು.












Click it and Unblock the Notifications