Union Budget 2026: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬಜೆಟ್ ಶಾಕ್; ಸ್ಕಾಲರ್‌ಶಿಪ್‌ಗೆ ಕತ್ತರಿ, ಉನ್ನತ ಶಿಕ್ಷಣ ಕನಸಿಗೆ ಪೆಟ್ಟು
2026-27ನೇ ಸಾಲಿನ ಕೇಂದ್ರ ಬಜೆಟ್ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಪಾಲಿಗೆ ಆಘಾತಕಾರಿಯಾಗಿ ಪರಿಣಮಿಸಿದೆ. ಉನ್ನತ ಶಿಕ್ಷಣ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ಪ್ರೋತ್ಸಾಹಿಸಲು ಜಾರಿಯಲ್ಲಿದ್ದ ಪ್ರಮುಖ ವಿದ್ಯಾರ್ಥಿವೇತನ ಯೋಜನೆಗಳಿಗೆ ಅನುದಾನವನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ.
ಮೆರಿಟ್-ಕಮ್-ಮೀನ್ಸ್ ಸ್ಕಾಲರ್‌ಶಿಪ್‌ಗೆ ಕತ್ತರಿ
ಅಲ್ಪಸಂಖ್ಯಾತ ವಿದ್ಯಾರ್ಥಿಗಳು ದುಬಾರಿ ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್‌ಗಳನ್ನು (Professional and Technical Courses) ಕಲಿಯಲು ನೆರವಾಗುತ್ತಿದ್ದ 'ಮೆರಿಟ್-ಕಮ್-ಮೀನ್ಸ್ ವಿದ್ಯಾರ್ಥಿವೇತನ' ಯೋಜನೆಗೆ ಈ ಬಾರಿ ಭಾರಿ ಪೆಟ್ಟು ಬಿದ್ದಿದೆ.
* 2025-26ನೇ ಸಾಲಿನಲ್ಲಿ ಈ ಯೋಜನೆಗೆ 7.34 ಕೋಟಿ ರೂ. ನಿಗದಿಪಡಿಸಲಾಗಿತ್ತು.
* ಆದರೆ, 2026-27ರ ಬಜೆಟ್‌ನಲ್ಲಿ ಇದನ್ನು ಕೇವಲ 0.06 ಕೋಟಿ ರೂ.ಗಳಿಗೆ (6 ಲಕ್ಷ ರೂ.) ಇಳಿಸಲಾಗಿದೆ.
* ಇದು ಶೇ.99ಕ್ಕಿಂತಲೂ ಹೆಚ್ಚಿನ ಕಡಿತವಾಗಿದ್ದು, ಯೋಜನೆಯು ಬಹುತೇಕ ಸ್ಥಗಿತಗೊಂಡಂತಾಗಿದೆ. ಇಂಜಿನಿಯರಿಂಗ್, ಮೆಡಿಕಲ್ ಮತ್ತು ಮ್ಯಾನೇಜ್‌ಮೆಂಟ್‌ನಂತಹ ದುಬಾರಿ ಶುಲ್ಕದ ಕೋರ್ಸ್‌ಗಳಿಗೆ ಸೇರುವ ಬಡ ವಿದ್ಯಾರ್ಥಿಗಳಿಗೆ ಇದು ದೊಡ್ಡ ಹೊಡೆತವಾಗಿದೆ.

ಸಂಶೋಧನಾ ಫೆಲೋಶಿಪ್ ಕಡಿತ
ಎಂ.ಫಿಲ್ ಮತ್ತು ಪಿಎಚ್.ಡಿ ಸಂಶೋಧನೆ ನಡೆಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದ ಮೌಲಾನಾ ಆಜಾದ್ ನ್ಯಾಷನಲ್ ಫೆಲೋಶಿಪ್ ಅನುದಾನವನ್ನೂ ತಗ್ಗಿಸಲಾಗಿದೆ.
ಕಳೆದ ವರ್ಷ (2025-26) 42.84 ಕೋಟಿ ರೂ. ಇದ್ದ ಅನುದಾನವನ್ನು, ಈ ಬಾರಿ 36.14 ಕೋಟಿ ರೂ.ಗಳಿಗೆ ಇಳಿಸಲಾಗಿದೆ.
ಸುಮಾರು ಶೇ.16 ರಷ್ಟು ಕಡಿತವಾಗಿರುವುದು, ಆರ್ಥಿಕವಾಗಿ ಹಿಂದುಳಿದ ಸಂಶೋಧನಾ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
ಬಳಕೆಯಾಗದ ಅನುದಾನ: ಆಡಳಿತ ವೈಫಲ್ಯ?
ಕೇವಲ ಅನುದಾನ ಕಡಿತವಲ್ಲದೆ, ಈಗಾಗಲೇ ಮೀಸಲಿಟ್ಟ ಹಣವೂ ಬಳಕೆಯಾಗದಿರುವುದು ಗಂಭೀರ ಸಮಸ್ಯೆಯಾಗಿದೆ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಗಳಲ್ಲಿ ಈ ಸಮಸ್ಯೆ ಎದ್ದು ಕಾಣುತ್ತಿದೆ. 2025-26ರಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಬಜೆಟ್ ಅಂದಾಜಿನಲ್ಲಿ 413.99 ಕೋಟಿ ರೂ. ಇಡಲಾಗಿತ್ತು. ಆದರೆ, ಪರಿಷ್ಕೃತ ಅಂದಾಜಿನಲ್ಲಿ (Revised Estimate) ಅದು ಕೇವಲ 0.06 ಕೋಟಿ ರೂ.ಗೆ ಕುಸಿದಿದೆ.
ಇದರರ್ಥ, ಮೀಸಲಿಟ್ಟ ಹಣದಲ್ಲಿ ಬಹುಪಾಲು ವಿದ್ಯಾರ್ಥಿಗಳಿಗೆ ತಲುಪೇ ಇಲ್ಲ. ಇದನ್ನು ಆಡಳಿತಾತ್ಮಕ ವೈಫಲ್ಯ ಎಂದು ಶಿಕ್ಷಣ ತಜ್ಞರು ಟೀಕಿಸಿದ್ದಾರೆ. ಹಣದ ಅಗತ್ಯವಿಲ್ಲದೇ ಉಳಿದಿಲ್ಲ, ಬದಲಾಗಿ ಸರಿಯಾದ ಅನುಷ್ಠಾನದ ಕೊರತೆಯಿಂದ ಹಣ ವಾಪಸ್ ಹೋಗಿದೆ ಎಂದು ಅವರು ವಾದಿಸಿದ್ದಾರೆ.
ಕೌಶಲ್ಯಕ್ಕೆ ಒತ್ತು, ಶಿಕ್ಷಣಕ್ಕೆ ಕೊಕ್?
ಶಿಕ್ಷಣ ಸ್ಕಾಲರ್‌ಶಿಪ್‌ಗಳನ್ನು ಕಡಿತಗೊಳಿಸಿರುವ ಸರ್ಕಾರ, 'ಪಿಎಂ-ವಿಕಾಸ್' (PM-VIKAS) ನಂತಹ ಕೌಶಲ್ಯ ಅಭಿವೃದ್ಧಿ ಯೋಜನೆಗಳಿಗೆ 303.27 ಕೋಟಿ ರೂ. ಒದಗಿಸಿದೆ. ಕೌಶಲ್ಯ ತರಬೇತಿ ಮುಖ್ಯವಾದರೂ, ಅದು ನೇರ ಶಿಕ್ಷಣಕ್ಕೆ ಮತ್ತು ಪದವಿಗಳಿಗೆ ಪರ್ಯಾಯವಾಗಲಾರದು ಎಂಬುದು ವಿಮರ್ಶಕರ ಅಭಿಪ್ರಾಯ. ಒಟ್ಟಾರೆ ಶಿಕ್ಷಣ ಸಬಲೀಕರಣ ಬಜೆಟ್ 831.70 ಕೋಟಿ ರೂ. ಇದ್ದರೂ, ಹಿಂದಿನ ವರ್ಷದ ಶೂನ್ಯ ಖರ್ಚಿನ ದಾಖಲೆಗಳನ್ನು ನೋಡಿದರೆ, ಈ ಹಣವೂ ವಿದ್ಯಾರ್ಥಿಗಳಿಗೆ ತಲುಪುವ ಬಗ್ಗೆ ಅನುಮಾನಗಳು ಮೂಡಿವೆ.












Click it and Unblock the Notifications