Union Budget 2026: ಕೇಂದ್ರ ಬಜೆಟ್ ಕ್ಯಾಲೆಂಡರ್ ಇಲ್ಲಿದೆ: ಜ. 29ಕ್ಕೆ ಆರ್ಥಿಕ ಸಮೀಕ್ಷೆ, ಫೆ. 1ಕ್ಕೆ ಆಯವ್ಯಯ ಮಂಡನೆ
ನವದೆಹಲಿ: ಬಹುನಿರೀಕ್ಷೆಯ ಕೇಂದ್ರ ಸರ್ಕಾರದ ಬಜೆಟ್-2026 (Union Budget 2026) ಮಂಡನೆಗೆ ದಿನಗಣನೆ ಆರಂಭವಾಗಿದೆ. ಈ ಕೇಂದ್ರ ಬಜೆಟ್ ಮೇಲೆ ಅಪಾರ ನಿರೀಕ್ಷೆಗಳು ಭಾರತೀಯರಲ್ಲಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಆರ್ಥಿಕ ನೀಲನಕ್ಷೆಯನ್ನು ಅಂದು ಅವರ ವಿವರಿಸಿದ್ದಾರೆ. ಬಜೆಟ್‌ನಲ್ಲಿ ಯಾವೆಲ್ಲ ವಲಯಕ್ಕೆ ಆದ್ಯತೆ ನೀಡಲಾಗುತ್ತಿದೆ. ನಿರೀಕ್ಷೆಗಳು ಏನು? ಜೊತೆಗೆ ಬಜೆಟ್ ಕುರಿತ ಸಂಸದ ಅಧಿವೇಶನ ಆರಂಭ ಮತ್ತು ಅಂತಿಮ ದಿನಾಂಕಗಳ ಮಾಹಿತಿ ಇಲ್ಲಿದೆ.
ಹಣಕಾಸು ಸಚಿವೆ 2026 ಫೆಬ್ರವರಿ 1ರ ಭಾನುವಾರ ವಿತ್ತ ಸಚಿವರು ಬಜೆಟ್ ಮಂಡಲಿಸದ್ದಾರೆ. ನಿರ್ಮಲಾ ಸೀತಾರಾಮನ್ ಅವರ ಮಂಡಿಸುತ್ತಿರುವ ಸತತ ಒಂಬತ್ತನೇ ಕೇಂದ್ರ ಬಜೆಟ್ ಇದಾಗಿದೆ. ಈ ಮೂಲಕ ಕೇಂದ್ರ ಸಚಿವೆ ಮತ್ತೊಂದು ದಾಖಲೆ ಬರೆಯಲಿದ್ದಾರೆ. ಕೇಂದ್ರ ಬಜೆಟ್ 2026 ಕುರಿತಂತೆ ಈಗಾಗಲೇ ತೆರಿಗೆದಾರರು ಮತ್ತು ಕೈಗಾರಿಕಾ ಮುಖಂಡರು ಹಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಹಲವು ನಿರೀಕ್ಷೆಗಳನ್ನು ಅವರು ಇಟ್ಟುಕೊಂಡಿದ್ದಾರೆ.

ಕೇಂದ್ರ ಬಜೆಟ್ ಬಗ್ಗೆ ತಿಳಿಯಬೇಕಾದ ಅಂಶ, ದಿನಾಂಕಗಳು
1. ಜನವರಿ 28: ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎರಡೂ ಸದನಗಳನ್ನು ಉದ್ದೇಶಿಸಿ ಜಂಟಿ ಭಾಷಣ ಮಾಡಲಿದ್ದಾರೆ.
2. ಜನವರಿ 29: ಲೋಕಸಭಾ ಸಚಿವಾಲಯ ಹೊರಡಿಸಿದ ತಾತ್ಕಾಲಿಕ ಕ್ಯಾಲೆಂಡರ್ ಪ್ರಕಾರ, ಈ ದಿನ ಸದನವೂ ಸಭೆ ನಡೆಯಲಿದೆ.
3. ಜನವರಿ 29: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ದಿನ ಬೆಳಿಗ್ಗೆ 11 ಗಂಟೆಗೆ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಆರ್ಥಿಕತೆಯ ಸಮಗ್ರ ಸ್ಥಿತಿಯನ್ನು ಪ್ರಸ್ತುತಪಡಿಸುವ ಆರ್ಥಿಕ ಸಮೀಕ್ಷೆ ಬಜೆಟ್‌ಗೆ ಒಂದು ದಿನ ಮೊದಲು ಹಣಕಾಸು ಸಚಿವರು ಮಂಡಿಸುತ್ತಾರೆ.
4. ಫೆಬ್ರವರಿ 1: ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್-2026 ಮಂಡಿಸುತ್ತಾರೆ.
5. ಫೆಬ್ರವರಿ 13: ಬಜೆಟ್ ಅಧಿವೇಶನದ ಮೊದಲಾರ್ಧ ಪೂರ್ಣಗೊಳ್ಳುತ್ತದೆ.
6. ಮಾರ್ಚ್ 9: ಬಜೆಟ್ ಅಧಿವೇಶನದ ದ್ವಿತೀಯಾರ್ಧವು ಈ ದಿನ ಆರಂಭಗೊಳ್ಳುತ್ತದೆ.
7. ಏಪ್ರಿಲ್ 2: ಬಜೆಟ್ ಅಧಿವೇಶನದ ಅಂತಿಮ ದಿನ, ಅದರ ನಂತರ ಲೋಕಸಭೆ ಮತ್ತು ರಾಜ್ಯಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗುತ್ತದೆ.
ಬಜೆಟ್ 2026: ಗಮನಿಸಬೇಕಾದ ಪ್ರಮುಖ ಕ್ಷೇತ್ರಗಳು
ವಿತ್ತ ಸಚಿವರು ಬಜೆಟ್ ನಲ್ಲಿ ವಿವಿಧ ವಲಯಗಳಿಗೆ ಅನುದಾನ ಹಂಚಿಕೆ, ಹೊಸ ಯೋಜನೆ ಘೋಷಣೆ ಮಾಡುವ ಮೂಲಕ ಭಾರತದ ಬೆಳವಣಿಗೆಯತ್ತ ಗಮನ ಹರಿಸಲಿದ್ದಾರೆ. ಈ ವರ್ಷ ರೈಲ್ವೆ ವಲಯ, ದೇಶದ ಮೂಲಸೌಕರ್ಯ, ನಗರಾಭಿವೃದ್ಧಿ, ಉತ್ಪಾದನೆ, ಆಟೋ ಮೊಬೈಲ್, ರಕ್ಷಣೆ, ಎಲೆಕ್ಟ್ರಾನಿಕ್ಸ್, ಎಐ ತಂತ್ರಜ್ಞಾನ, ಎಂಎಸ್‌ಎಂಸಿ ಹಾಗೂ ನವೀಕರಿಸಬಹುದಾದ ಇಂಧನ ಕುರಿತು ಮಹತ್ವದ ಘೋಷಣೆ ನಿರೀಕ್ಷೆ ಇದೆ. ಈ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಹೆಚ್ಚು ಸ್ಥಾನ ಸಿಗಬಹುದೆಂದು ಅಂದಾಜಿಸಲಾಗಿದೆ. ಅದೇ ರೀತಿ ಆರೋಗ್ಯ ರಕ್ಷಣೆ, ಪ್ರವಾಸೋದ್ಯಮ, ಕೃಷಿ ಮತ್ತು ಲಾಜಿಸ್ಟಿಕ್ಸ್‌ನಂತಹ ಇತರ ವಲಯಗಳು ಕೇಂದ್ರದಿಂದ ಒಂದಷ್ಟು ಹಂಚಿಕೆ ಪಡೆಯುವ ಸಂಭವವಿದೆ.
2025ರ ಬಜೆಟ್‌ನಲ್ಲಿ ಏನಾಗಿತ್ತು?
ವರ್ಷದ ಹಿಂದೆ ಇದೇ ಅವಧಿಯಲ್ಲಿ ವಿತ್ತ ಸಚಿವರು ಕೇಂದ್ರ ಬಜೆಟ್ 2025 ಮಂಡಿಸಿದ್ದರು. ₹12 ಲಕ್ಷವರೆಗಿನ ಆದಾಯ ಗಳಿಸುವವರಿಗೆ ತೆರಿಗೆ ವಿನಾಯಿತಿ ನೀಡಿತ್ತು. ಇದು ತೆರಿಗೆದಾರರಿಗೆ ಕೊಟ್ಟ ದೊಡ್ಡ ಸಿಹಿ ಸುದ್ದಿಯಾಗಿತ್ತು. ಅಲ್ಲದೇ ಲಕ್ಷಾಂತರ ಮಧ್ಯಮ ವರ್ಗದ ಜನರಿಗೆ ಪೂರಕ ನಿರ್ಧಾರವೆಂದು ಪ್ರಶಂಸಿಸಲ್ಪಟ್ಟಿತ್ತು. ಹೊಸ ತೆರಿಗೆ ಪದ್ಧತಿಯಡಿ ತೆರಿಗೆ ರಹಿತ ಆದಾಯವು ಪ್ರಮಾಣಿತ ಕಡಿತದ ನಂತರ ₹12.75 ಲಕ್ಷಕ್ಕೆ ಏರಿತು. ಈ ಬಾರಿಯು ತೆರಿಗೆ ವಿಚಾರದಲ್ಲಿ ಏನೆಲ್ಲ ಘೋಷಣೆ ಆಗಲಿವೆ ಎಂದು ತೆರಿಗೆದಾರರು ಕುತೂಹಲದಿಂದ ಕಾಯುತ್ತಿದ್ದಾರೆ.












Click it and Unblock the Notifications