Union Budget 2025: ಕೇಂದ್ರ ಬಜೆಟ್‌ನಲ್ಲಿ 6 ಮಹತ್ವದ ಯೋಜನೆಗಳ ಘೋಷಣೆ ಸಾಧ್ಯತೆ
Union Budget 2025: ನಾಳೆ (ಫೆಬ್ರವರಿ 1) ಕೇಂದ್ರ ಬಜೆಟ್ ಮಂಡನೆ ಆಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 3ನೇ ಅವಧಿಯ 2ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಮೂಲಕ ಅವರು ಸತತವಾಗಿ 8ನೇ ಬಾರಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಿಸಲಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಹಲವು ದೊಡ್ಡ ಘೋಷಣೆಗಳಾಗುವ ಸಾಧ್ಯತೆ ಇದ್ದು, ಇದು ದೇಶದ ರೈತರಿಂದ ಹಿಡಿದು ಸಾರ್ವಜನಿಕರವರೆಗೆ ಎಲ್ಲರಿಗೂ ಪರಿಹಾರ ನೀಡಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಈ ಬಾರಿಯ ಬಜೆಟ್‌ನಲ್ಲಿ 6 ಮಹತ್ವದ ಯೋಜನೆಗಳು ಘೋಷಣೆ ಆಗುವ ಸಾಧ್ಯತೆ ಇದೆ.

1. ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ ಸಾಧ್ಯತೆ: ಅಬಕಾರಿ ಸುಂಕ ಕಡಿತದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾಗಬಹುದು. ಇದಕ್ಕೆ ಪ್ರಮುಖ ಕಾರಣವೆಂದರೆ ಕೈಗಾರಿಕಾ ಸಂಸ್ಥೆ ಸಿಐಐ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಲು ಶಿಫಾರಸು ಮಾಡಿದೆ.
ಗ್ರಾಹಕ ಎಲೆಕ್ಟ್ರಾನಿಕ್ಸ್ ಮೇಲಿನ ಆಮದು ಸುಂಕ ಕಡಿತದಿಂದಾಗಿ, ಮೊಬೈಲ್‌ಗಳಂತಹ ಉತ್ಪನ್ನಗಳು ಅಗ್ಗವಾಗಬಹುದು. ಯಾಕೆಂದರೆ ಮೇಕ್ ಇನ್ ಇಂಡಿಯಾವನ್ನ ಉತ್ತೇಜಿಸಲು ಎಲೆಕ್ಟ್ರಾನಿಕ್ಸ್ ಬೆಲೆಯನ್ನು ಕಡಿಮೆ ಮಾಡಬಹುದು.
ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕ ಹೆಚ್ಚಾಗುವ ಸಾಧ್ಯತೆ ಇದ್ದು, ಇದರಿಂದಾಗಿ ಅವುಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಸರ್ಕಾರವು ಹೆಚ್ಚುತ್ತಿರುವ ಚಿನ್ನದ ಆಮದನ್ನು ತಡೆಯಲು ಆಮದು ಸುಂಕವನ್ನು ಹೆಚ್ಚಿಸುವ ಸಾಧ್ಯತೆಯಿದೆ.
2. ಆದಾಯ ತೆರಿಗೆ: ಹೊಸ ತೆರಿಗೆ ಪದ್ಧತಿಯಲ್ಲಿ, ವಾರ್ಷಿಕ 10 ಲಕ್ಷ ರೂಪಾಯಿಗಳವರೆಗಿನ ಆದಾಯವು ತೆರಿಗೆ ಮುಕ್ತವಾಗಿರುತ್ತದೆ. 15ರಿಂದ 20 ಲಕ್ಷ ರೂಪಾಯಿಗಳ ಆದಾಯದ ಮೇಲೆ ಹೊಸದಾಗಿ 25% ತೆರಿಗೆ ಶ್ರೇಣಿಯನ್ನು ರಚಿಸಬಹುದು. ಮೂಲ ತೆರಿಗೆ ವಿನಾಯಿತಿಯನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಬಹುದು.
ತೆರಿಗೆಗಳನ್ನು ಮುಕ್ತಗೊಳಿಸಲು ಮುಖ್ಯ ಕಾರಣವೆಂದರೆ, ಜನರು ಹೊಸ ತೆರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕೆಂದು ಸರ್ಕಾರ ಬಯಸುತ್ತದೆ. ಇದು ಹಳೆಯ ವ್ಯವಸ್ಥೆಗಿಂತ ಸುಲಭವಾಗಿದೆ.
3. ಸರ್ಕಾರಿ ಯೋಜನೆಗಳು: ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿಗಳ ಬದಲು 12,000 ರೂಪಾಯಿಗಳು ಸಿಗುವ ಸಾಧ್ಯತೆ ಇದೆ. ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಬಹುದು. ಸಂಸತ್ತಿನ ಸಮಿತಿಯೂ ಇದನ್ನು ಶಿಫಾರಸು ಮಾಡಿದೆ. ಅಟಲ್ ಪಿಂಚಣಿ ಯೋಜನೆಯ ಗರಿಷ್ಠ ಪಿಂಚಣಿಯನ್ನು 5-10,000ಕ್ಕೆ ಹೆಚ್ಚಿಸಬಹುದು. ಇದರಿಂದ ಹೆಚ್ಚು ಹೆಚ್ಚು ಜನರು ಉತ್ತಮ ಆರೋಗ್ಯ ಸೌಲಭ್ಯಗಳನ್ನು ಪಡೆಯಬಹುದು.
4. ಉದ್ಯೋಗ: ಸಮಗ್ರ ರಾಷ್ಟ್ರೀಯ ಉದ್ಯೋಗ ನೀತಿಯನ್ನು ಜಾರಿಗೆ ತರಬಹುದು. ಇದಕ್ಕಾಗಿ ಸಿಐಐ ಸರ್ಕಾರಕ್ಕೆ ಉದ್ಯೋಗ ನೀತಿಯನ್ನು ಜಾರಿಗೆ ತರಲು ಶಿಫಾರಸು ಮಾಡಿದೆ. ಗ್ರಾಮೀಣ ಪದವೀಧರ ಯುವಕರಿಗೆ ಸರ್ಕಾರಿ ಕಚೇರಿಗಳಲ್ಲಿ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಪ್ರಾರಂಭಿಸಬಹುದು. ವಿದೇಶಗಳಲ್ಲಿ ಉದ್ಯೋಗ ಒದಗಿಸಲು ಅಂತರರಾಷ್ಟ್ರೀಯ ಚಲನಶೀಲತಾ ಪ್ರಾಧಿಕಾರವನ್ನು ರಚಿಸಬಹುದು.
5. ಆರೋಗ್ಯ: ಆರೋಗ್ಯ ಕ್ಷೇತ್ರದ ಬಜೆಟ್ ಶೇಕಡ 10ರಷ್ಟು ಹೆಚ್ಚಾಗಬಹುದು. ಎಂಆರ್‌ಐನಂತಹ ವೈದ್ಯಕೀಯ ಉಪಕರಣಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಬಹುದು. ವೈದ್ಯಕೀಯ ಕಾಲೇಜುಗಳಲ್ಲಿ 75,000 ಹೊಸ ಸೀಟುಗಳನ್ನು ಸೇರಿಸುವ ಗುರಿಯನ್ನು ನಿಗದಿಪಡಿಸಬಹುದು.
6. ಅಗ್ಗದ ವಸತಿ ಸೌಲಭ್ಯ: ಮೆಟ್ರೋ ನಗರಗಳಲ್ಲಿ ಕೈಗೆಟುಕುವ ಮನೆಗಳ ಬೆಲೆ ಮಿತಿಯನ್ನು 45 ಲಕ್ಷ ರೂಪಾಯಿಗಳಿಂದ 70 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬಹುದು. ದತ್ತಾಂಶದ ಪ್ರಕಾರ, ಭಾರತದಲ್ಲಿ 1.01 ಕೋಟಿ ಕೈಗೆಟುಕುವ ಮನೆಗಳ ಕೊರತೆಯಿದ್ದು, ಇದು 2030ರ ವೇಳೆಗೆ ಹೆಚ್ಚಾಗಬಹುದು. ಗೃಹ ಸಾಲದ ಬಡ್ಡಿ ಮೇಲಿನ ತೆರಿಗೆ ವಿನಾಯಿತಿಯನ್ನು 2-5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬಹುದು.












Click it and Unblock the Notifications