'ಅಯೋಧ್ಯೆ ಅಭಿವೃದ್ಧಿ ಯೋಜನೆ' ಅನುಷ್ಠಾನದಲ್ಲಿ ಗುತ್ತಿಗೆದಾರರಿಗೆ ಅನಗತ್ಯ ಲಾಭ, ಅಕ್ರಮ: CAG
ಬೆಂಗಳೂರು, ಆಗಸ್ಟ್ 11: ಉತ್ತರ ಪ್ರದೇಶ ರಾಜ್ಯದಲ್ಲಿ 'ಕೇಂದ್ರ ಸ್ವದೇಶ್ ದರ್ಶನ್ ಯೋಜನೆ' ಅಡಿಯಲ್ಲಿ ನಡೆಯುತ್ತಿರುವ 'ಅಯೋಧ್ಯೆ ಅಭಿವೃದ್ಧಿ ಯೋಜನೆ' ಅನುಷ್ಠಾನದಲ್ಲಿ ಗುತ್ತಿಗೆದಾರರಿಗೆ ಅನಗತ್ಯ ಲಾಭವಾಗುತ್ತಿದೆ. ಇದು ಸೇರಿದಂತೆ ಕೆಲವು ಅಕ್ರಮಗಳನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (CAG) ಪತ್ತೆ ಮಾಡಿ ಮಾಹಿತಿ ಬಹಿರಂಗಗೊಳಿಸಿದೆ.
ಸ್ವದೇಶ್ ದರ್ಶನ್ ಯೋಜನೆಯ ಅಭಿವೃದ್ಧಿ ಕಾರ್ಯದ ಲೆಕ್ಕಪರಿಶೋಧನೆಯನ್ನು 2015 ಜನವರಿಯಿಂದ 2022ರ ಮಾರ್ಚ್ ರವರೆಗೆ ಮಾಡಿದೆ. ಬುಧವಾರ ಲೋಕಸಭೆಯಲ್ಲಿ ಮಂಡನೆಯಾದ ಲೆಕ್ಕಪರಿಶೋಧನಾ ವರದಿ ಪ್ರಕಾರ, ಆರು ರಾಜ್ಯಗಳಲ್ಲಿ ಅಭಿವೃದ್ಧಿ ಕಾಮಗಾರಿಗಲ್ಲಿ ಗುತ್ತಿಗೆದಾರರಿಗೆ ಅನಗತ್ಯವಾಗಿ 19.73 ಕೋಟಿ ರೂ. ಲಾಭವಾಗಿರುವುದು ಗೊತ್ತಾಗಿದೆ.

ಉತ್ತರ ಪ್ರದೇಶದ ಅಯೋಧ್ಯೆ ಅಭಿವೃದ್ಧಿ ಸೇರಿದಂತೆ ಗೋವಾ ರಾಜ್ಯದ ಸಿಂಕ್ವೆರಿಮ್-ಅಗುಡಾ ಜೈಲ್, ಹಿಮಾಚಲ ಪ್ರದೇಶದ ಹಿಮಾಲಯನ್ ಸರ್ಕ್ಯೂಟ್, ತೆಲಂಗಾಣದ ಹೆರಿಟೇಜ್ ಸರ್ಕ್ಯೂಟ್, ಸಿಕ್ಕಿನ ರಂಗ್‌ಪೋ ಸಿಂಗ್ಟಮ್ ಹಾಗೂ ಮಧ್ಯಪ್ರದೇಶದ ಬೌದ್ಧ ಸರ್ಕ್ಯೂಟ್ ಅಭಿಕಾರ್ಯಗಳಲ್ಲಿ ಅಕ್ರಮ ಆಗಿದೆ ಎಂದು ಸಿಎಜಿ ಪತ್ತೆ ಮಾಡಿದೆ.
ಕಾರ್ಯಕ್ಷಮತೆ ತೋರಿಸದ ಗುತ್ತಿಗೆದಾರರು
ಅಯೋಧ್ಯೆ ಅಭಿವೃದ್ಧಿ ಕಾರ್ಯದಲ್ಲಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲಾಗಿದೆ. ಉತ್ತರ ಪ್ರದೇಶ ರಾಜ್ಯ ನಿರ್ಮಾಣ ನಿಗಮದ ಅನುಷ್ಠಾನ ಸಂಸ್ಥೆಯಿಂದ ಕೆಲಸ ಮಾಡುತ್ತಿರುವ ಈ ಗುತ್ತಿಗೆದಾರರು ಕಾರ್ಯಕ್ಷಮತೆ ಬಗ್ಗೆ ಖಚಿತಪಡಿಸಬೇಕು. ಅಂದರೆ ಒಟ್ಟು ಕಾಮಗಾರಿಯ ವೆಚ್ಚ 62.17 ಕೋಟಿ ರೂ.ಗಳ ಗುತ್ತಿಗೆ ಪೈಕಿ 3.11 ಕೋಟಿ ಮೌಲ್ಯದ ಕಾರ್ಯಕ್ಷಮತೆ ತೋರಿಸದೆ, ದಾಖಲೆಗಳನ್ನು ಸಲ್ಲಿಸದೇ ಕೇವಲ 1.86 ಕೋಟಿ ರೂ.ಗಳ ಕಾರ್ಯಕ್ಷಮತೆಯನ್ನು ಮಾತ್ರ ತೋರಿಸಲಾಗಿದೆ. ಈ ಮೂಲಕ ಅಕ್ರಮ ನಡೆದಿರುವುದು ಸಾಬೀತಾಗಿದೆ.
ಅಯೋಧ್ಯೆಯ ಗುಪ್ತರ್ ಘಾಟ್‌ನಲ್ಲಿನ ಕಾಮಗಾರಿಯನ್ನು 14 ವಿಭಾಗವಾಗಿ ವಿಂಗಡಿಸಲಾಗಿತ್ತು. ಅದೆಲ್ಲವುಗಳನ್ನು ವಿವಿಧ ಖಾಸಗಿ ಗುತ್ತಿಗೆದಾರರಿಗೆ ನೀಡಲಾಯಿತು. ಎಕ್ಸಿಕ್ಯೂಟಿಂಗ್ ಏಜೆನ್ಸಿ (ನೀರಾವರಿ ಇಲಾಖೆ) ಗುತ್ತಿಗೆದಾರರು ನೀಡುವ ಹಣಕಾಸಿನ ಬಿಡ್‌ಗಳು/ದರಗಳ ವಿಶ್ಲೇಷಣೆಯಲ್ಲಿ ಹುರುಳಿಲ್ಲ ಎಂಬಂತಾಗಿದೆ.

ಗುತ್ತಿಗೆದಾರರ ಜಿಎಸ್‌ಟಿ ನೋಂದಣಿ ರದ್ದು
ಕಾಮಗಾರಿಗಳ ಮೂವರು ಗುತ್ತಿಗೆದಾರರಿಗೆ ರಾಜ್ಯ ಸರ್ಕಾರ ಸ್ವಯಂ ಪ್ರೇರಿತವಾಗಿ ಅವರ ಜಿಎಸ್‌ಟಿ ನೋಂದಣಿ ರದ್ದು ಮಾಡಿದೆ. ಈ ಕಾರಣದಿಂದ ಅವರು ಇನ್ನು ಮುಂದೆ ನೋಂದಾಯಿತ ಗುತ್ತಿಗೆದಾರರು ಅಲ್ಲ. ಜಿಎಸ್‌ಟಿ ಸಂಗ್ರಹಿಸಲು ಅರ್ಹರಾಗಿರಲಿಲ್ಲ. ಹೀಗಿದ್ದರೂ ಸಹ ಒಬ್ಬ ಗುತ್ತಿಗೆದಾರನಿಗೆ ನಿಯಮ ವಿರುದ್ಧವಾಗಿ ಒಟ್ಟು 19.57 ಲಕ್ಷ ರೂ. ಪಾವತಿಸಲಾಗಿದೆ.
ಸಿಎಜಿ ತನ್ನ ವರದಿಯಲ್ಲಿ ಪ್ರಕರಣದ ಇನ್ನಿತರ ಅಂಶಗಳನ್ನು ಒದಗಿಸಿದೆ. ಇದರಲ್ಲಿ ಗುಪ್ತರ್ ಘಾಟ್ ಅಭಿವೃದ್ಧಿ ಯೋಜನೆಯಲ್ಲಿ ಕೆಲಸ ಮಾಡದಿದ್ದರು ಗುತ್ತಿಗೆದಾರರಿಗೆ ಅನಿಯಮಿತ ಹಣ ಪಾವತಿ ಆಗಿದೆ. ಗುಪ್ತಾರ್ ಘಾಟ್ ಅಭಿವೃದ್ಧಿ 23,767 ಚ.ಮೀ. 'ಕಲ್ಲಿನ ಪಟಿಯಾ ಸರಬರಾಜು ಮತ್ತು ಫಿಕ್ಸಿಂಗ್' ಅನ್ನು ಪ್ರತಿ ಚ.ಮೀ.ಗೆ 1,447.50 ವೆಚ್ಚದಲ್ಲಿ ಸಿದ್ಧವಾಗಲಿದೆ. ಆದರೆ ಕಾಮಗಾರಿ ಒಪ್ಪಂದಂತೆ ನಡೆಸದೇ ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲಾಗಿದೆ ಎಂದು ವರದಿ ಆರೊಪಿಸಿದೆ.
ಗುತ್ತಿಗೆದಾರರ ಬಿಲ್‌ಗಳಿಂದ ಹಣ ಕಡಿತ?
ಇನ್ನು ಕಾಂಗಾರಿ ಪರಿಶೀಲನೆ ವೇಳೆ ಎಂಎಸ್ ಕ್ಲಾಂಪ್ ಸರಿಪಡಿಸಿಲ್ಲ. ಆದರೆ ಎಂಎಸ್ ಕ್ಲಾಂಪ್‌ಗಳ ಪೂರೈಕೆ ಮತ್ತು ಫಿಕ್ಸಿಂಗ್ ಸೇರಿದಂತೆ ಕಾಮಗಾರಿ ಮಾಪನ ಮಾಡಲಾಗಿದೆ. ಈ ಸಂಬಂಧ ಗುತ್ತಿಗೆದಾರರಿಗೆ 51.55 ಲಕ್ಷ ರೂ. ಪಾವತಿಸಲಾಗಿದೆ. ಅಳವಡಿಸಲಾದ ಎಂಎಸ್ ಕ್ಲಾಂಪ್ ಗಳು ಯಾವ ಕೆಲಸ ಮಾಡುತ್ತಿಲ್ಲ. ಹೀಗಾಗಿ ಅದರ ವೆಚ್ಚವನ್ನು ಗುತ್ತಿಗೆದಾರರ ಬಿಲ್‌ಗಳಿಂದ ಕಡಿತಗೊಳಿಸಬೇಕು ಎಂಬ ಮಾತುಗಳು ಕೇಳಿ ಬಂದಿವೆ.
ಉತ್ತರ ಪ್ರದೇಶ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ನೀರಾವರಿ ಇಲಾಖೆ ಜತೆ ನಡೆದ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯು ಆಡಿಟ್ ವರದಿಯನ್ನು ಒಪ್ಪಿಕೊಂಡಿದೆ. ಹೆಚ್ಚುವರಿಯಾಗಿ ನೀಡಿರುವ ಹಣದ ಮರುಪಾವತಿಗೆ ಸೂಚನೆ ನೀಡಿದೆ.
ಮುಖ್ಯವಾಗಿ ಅಯೋಧ್ಯೆ ಅಭಿವೃದ್ಧಿ ಯೋಜನೆಗೆ 8.22 ಕೋಟಿ ರೂ. ಹೆಚ್ಚುವರಿ ವ್ಯರ್ಥ ಹಣ ಕುರಿತು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.












Click it and Unblock the Notifications