ಮೇವು ಹಗರಣ ಬಯಲಿಗೆಳೆದ 'ಹೀರೋ' ಬಿಸ್ವಾಸ್
[900 ಕೋಟಿ ರುಪಾಯಿಯಷ್ಟು ಬಿಹಾರ ಸರಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ ಮೇವು ಹಗರಣ ಪ್ರಕರಣದಲ್ಲಿ ಡಿಸೆಂಬರ್ 23, 2017ರಂದು ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ದೋಷಿ ಎಂದು ತೀರ್ಪು ಹೊರಬಿದ್ದಿದೆ. ಈ ಪ್ರಕರಣದ ತನಿಖೆ ನಡೆಸಿ, ಲಾಲೂ ಆರೋಪ ಸಾಬೀತು ಮಾಡಿದ ಬಿಸ್ವಾಸ್ ಅವರ ಬಗೆಗಿನ ಲೇಖನವಿದು.]
ಪಟ್ನಾ, ಸೆ. 30 : ಬಹುಕೋಟಿ ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ತಪ್ಪಿತಸ್ಥರು ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ್ ಪ್ರವಾಸ್ ಕುಮಾರ್ ಸಿಂಗ್ ಅವರು ಸೆ.30, ಸೋಮವಾರ ಘೋಷಿಸುತ್ತಿದ್ದಂತೆ ಡಾ. ಉಪೇಂದ್ರ ನಾಥ್ ಬಿಸ್ವಾಸ್ (ಯು.ಎನ್. ಬಿಸ್ವಾಸ್) ಅವರಿಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ಸುರಿಯುತ್ತಿದೆ.
ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಹಿಂದುಳಿದ ವರ್ಗ ಖಾತೆಯ ಸಚಿವರಾಗಿರುವ ಯುಎನ್ ಬಿಸ್ವಾಸ್ 1968ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದರು. ಸಿಬಿಐ(ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್)ನ ಹೆಚ್ಚುವರಿ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿಸ್ವಾಸ್ ಅವರನ್ನು ಅಭಿನಂದಿಸಲು ಕಾರಣವೇನೆಂದರೆ, ಮೇವು ಹಗರಣದಲ್ಲಿ ಲಾಲೂ ಅವರ ಕೈವಾಡವನ್ನು ಬಯಲಿಗೆಳೆದು ಅವರನ್ನು ಹೆಡೆಮುರಿ ಕಟ್ಟಿದ್ದು ಇದೇ ಬಿಸ್ವಾಸ್.
ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದೇ ಖ್ಯಾತಿ ಗಳಿಸಿದ್ದ ಉಪೇಂದ್ರ ನಾಥ್ ಬಿಸ್ವಾಸ್ ಅವರು, ಮೇವು ಹಗರಣದಲ್ಲಿ ಎದುರಿಸಿದ ಅಡೆತಡೆಗಳು ಒಂದೆರಡಲ್ಲ. ಸಿಬಿಐನ ಮೇಲಧಿಕಾರಿಯಿಂದಲೇ ಈ ಹಗರಣಕ್ಕೆ ಸಂಬಂಧಿಸಿದಂತೆ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಬಿಹಾರದ ಹಲವಾರು ರಾಜಕಾರಣಿಗಳಿಂದ ಪ್ರಾಣ ಬೆದರಿಕೆ ಕೂಡ ಅವರು ಎದುರಿಸಿದರು. ಆದರೆ, ಪಟ್ಟುಬಿಡದೆ ಕೊನೆಗೆ ಪ್ರಭಾವಿ ರಾಜಕಾರಣಿ ಲಾಲೂ ಪ್ರಸಾದ್ ಯಾದವ್ ಅವರ ಹಗರಣವನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾದರು.

ಸಿಬಿಐ ನಿರ್ದೇಶಕರೇ ಲಾಲೂ ಬೆಂಬಲಕ್ಕೆ
ಮೇವು ಹಗರಣದ ತನಿಖೆ ನಡೆಸುತ್ತಿದ್ದ ಬಿಸ್ವಾಸ್ ಅವರು ಸಲ್ಲಿಸಿದ್ದ ಮೂಲ ವರದಿಯನ್ನು ತಿರುಚಿ ಅಂದಿನ ಡಿಐಜಿ ಆಗಿದ್ದ ರಂಜಿತ್ ಸಿನ್ಹಾ ಅವರು, ಲಾಲೂ ಅವರಿಗೆ ಸಹಕಾರಿಯಾಗುವಂಥ ವರದಿಯನ್ನು ಪಟ್ನಾ ಹೈಕೋರ್ಟಿಗೆ ಸಲ್ಲಿಸಿದ್ದರು. ಅಂದು ಸಿಬಿಐ ಡೈರೆಕ್ಟರ್ ಆಗಿದ್ದ ಜೋಗಿಂದರ್ ಸಿಂಗ್ ಅವರು ಕೂಡ, ಹೈಕೋರ್ಟಿಗೆ ನೇರವಾಗಿ ವರದಿ ಸಲ್ಲಿಸದೆ ತಮಗೇ ವರದಿ ಸಲ್ಲಿಸಬೇಕೆಂದು ಆಗ್ರಹಿಸಿದ್ದರು.

ವರದಿ ಬರೆದಿದ್ದೇ ಒಂದು ಸಲ್ಲಿಕೆಯಾಗಿದ್ದು ಮತ್ತೊಂದು
ಈ ಸಂಗತಿಯನ್ನು ಹೈಕೋರ್ಟ್ ಎದುರಿಗೇ ಬಹಿರಂಗಪಡಿಸಿದ್ದ ಬಿಸ್ವಾಸ್ ಭಾರೀ ಕೋಲಾಹಲವೆಬ್ಬಿಸಿದ್ದರು. 1996ರಲ್ಲಿ ಸಲ್ಲಿಸಲಾದ ವರದಿಯನ್ನು ರಂಜಿತ್ ಸಿನ್ಹಾ ತಿರುಚಿದ್ದಾರೆ. ಲಾಲೂ ಅವರನ್ನು ಪಾರು ಮಾಡುವ ಉದ್ದೇಶದಿಂದ ಆರೋಪಗಳನ್ನು ತಿದ್ದುಪಡಿ ಮಾಡಿದ್ದಾರೆ. ತಾವು ನಡೆಸಿದ್ದ ತನಿಖೆಯ ಪ್ರಕಾರ ಲಾಲೂ ಪ್ರಸಾದ್ ಅವರ ಮೇಲೆ ಭಾರೀ ಹಾನಿಕಾರಕವಾಗುವಂಥ ಆರೋಪಗಳಿವೆ ಎಂದು ಕೋರ್ಟಿಗೆ ತಿಳಿಸಿದ್ದರು.

ಕೇಂದ್ರ ಕಚೇರಿಯಿಂದ ಬಂದ ವರದಿಗೆ ಸಹಿ ಇಲ್ಲ
ತಾವು ತಯಾರಿಸಿದ್ದ ವರದಿಯ ಪ್ರತಿ ಪುಟದ ಮೇಲೂ ಬಿಸ್ವಾಸ್ ಸಹಿ ಮಾಡುತ್ತಿದ್ದರು. ಆದರೆ, ಕೇಂದ್ರ ಕಚೇರಿಯಿಂದ ಬಂದ ವರದಿ ತಮ್ಮ ವರದಿಗಿಂತ ಭಿನ್ನವಾಗಿದ್ದರಿಂದ ಅದರ ಮೇಲೆ ಬಿಸ್ವಾಸ್ ಸಹಿ ಮಾಡಿರಲಿಲ್ಲ. ಕೋರ್ಟಿಗೆ ಸಲ್ಲಿಸಿದ ವರದಿ ಸಂಪೂರ್ಣ ಭಿನ್ನವಾಗಿದ್ದರಿಂದ ತಾವು ಸಹಿ ಮಾಡಿಲ್ಲ ಎಂದು ಬಿಸ್ವಾಸ್ ಹೇಳಿಕೆ ನೀಡಿದ್ದರು.

ಮೂಲ ಕಾಪಿ ಉಳಿಸಿಕೊಂಡಿದ್ದ ಬಿಸ್ವಾಸ್
ಸಿಬಿಐನ ಕಂತ್ರಾಟ ಗಮನಕ್ಕೆ ಬರುತ್ತಿದ್ದಂತೆ ನ್ಯಾಯಮೂರ್ತಿಗಳಾದ ಎಸ್ಎನ್ ಝಾ ಮತ್ತು ಎಸ್ ಜೆ ಮುಖ್ಯೋಪಾಧ್ಯಾಯ್ ಸಿಬಿಐ ಮೇಲೆ ಕೆಂಡಾಮಂಡಲವಾಗಿದ್ದರು. ಆದರೆ, ಬಿಸ್ವಾಸ್ ಮಾಡಿದ್ದ ಚಾಣಾಕ್ಷ ನಡೆಯೇನೆಂದರೆ ತಮ್ಮ ವರದಿಯ ಮೂಲ ಪ್ರತಿಯನ್ನು ತಮ್ಮ ಬಳಿ ಉಳಿಸಿಕೊಂಡಿದ್ದರು ಮತ್ತು ಮುಕ್ತ ಕೋರ್ಟಿನಲ್ಲಿ ಅದನ್ನು ಸಲ್ಲಿಸಿದರು. ಬಿಸ್ವಾಸ್ ಮೇಲೆ ವಿಶ್ವಾಸವಿಟ್ಟ ಕೋರ್ಟ್ ಅದೇ ಪ್ರತಿಯನ್ನು ಪರಿಗಣಿಸಿತು. (ಚಿತ್ರ ಕೃಪೆ : ಔಟ್ ಲುಕ್)

ಜೋಗಿಂದರ್ ಸಿಂಗ್ ಗೆ ಕೋರ್ಟ್ ಛೀಮಾರಿ
ಬಹುಕೋಟಿ ಹಗರಣದ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ ಜೋಗಿಂದರ್ ಅವರಿಗೆ ಕೋರ್ಟ್ ಛೀಮಾರಿ ಹಾಕಿದ್ದು ದೇಶದ ಪ್ರಮುಖ ತನಿಖಾ ಸಂಸ್ಥೆಗೆ ಭಾರೀ ಮುಜುಗರ ಉಂಟುಮಾಡಿತ್ತು. ಆದರೆ, ಆ ಆರೋಪವನ್ನು ಜೋಗಿಂದರ್ ತಿರಸ್ಕರಿಸಿದ್ದರು. ಸಿಬಿಐನಲ್ಲಿದ್ದ 11 ತಿಂಗಳಲ್ಲಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದ ಜೋಗಿಂದರ್ ಅವರನ್ನು ಸರಕಾರ ಕೊನೆಗೂ ಪದಚ್ಯುತಿಗೊಳಿಸಿತು.

ವಿಪರ್ಯಾಸ ಹೇಗಿದೆ ನೋಡಿ
ಅಂದು ಬಿಸ್ವಾಸ್ ಅವರಿಗೆ ಅಡ್ಡಗಾಲು ಹಾಕಿದ್ದ ರಂಜಿತ್ ಸಿನ್ಹಾ ಅವರೇ ಈಗ ಸಿಬಿಐನ ನಿರ್ದೇಶಕರಾಗಿದ್ದಾರೆ. 2012ರಲ್ಲಿ ಅವರನ್ನು ನಿರ್ದೇಶಕರನ್ನಾಗಿ ಮಾಡಿದ್ದಾಗ ಬಿಜೆಪಿಯಿಂದ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು. ಅಚ್ಚರಿಯ ಸಂಗತಿಯೆಂದರೆ, ಬಿಜೆಪಿಯ ಶತ್ರುಘ್ನ ಸಿನ್ಹಾ ಮತ್ತು ರಾಮ್ ಜೇಠ್ಮಲಾನಿ ಅವರು ಸಿನ್ಹಾ ಅವರನ್ನು ಬೆಂಬಲಿಸಿದ್ದರು. ಅಂದ ಹಾಗೆ, ಮೇವು ಹಗರಣದಲ್ಲಿ ಲಾಲೂ ಅವರನ್ನು ವಕೀಲರಾಗಿ ಪ್ರತಿನಿಧಿಸಿದ್ದು ಇದೇ ರಾಮ್ ಜೇಠ್ಮಲಾನಿ.












Click it and Unblock the Notifications