ಎಲ್ಲಾ ಭಾರತೀಯರು ಉಕ್ರೇನ್ ರಾಜಧಾನಿ ಕೀವ್ ತೊರೆದಿದ್ದಾರೆ: ವಿದೇಶಾಂಗ ಕಾರ್ಯದರ್ಶಿ
ನವದೆಹಲಿ, ಮಾರ್ಚ್ 02: ಎಲ್ಲಾ ಭಾರತೀಯ ಪ್ರಜೆಗಳು ಉಕ್ರೇನ್ ರಾಜಧಾನಿ ಕೀವ್ ಅನ್ನು ತೊರೆದಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಮಂಗಳವಾರ ತಿಳಿಸಿದ್ದಾರೆ. ಉಕ್ರೇನ್ ಹಾಗೂ ರಷ್ಯಾದ ನಡುವಿನ ಯುದ್ಧದಲ್ಲಿ ಭಾರತದ ಹಾವೇರಿ ಮೂಲದ ವಿದ್ಯಾರ್ಥಿ ನವೀನ ಮೃತರಾದ ಬಳಿಕ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಎಲ್ಲಾ ಭಾರತೀಯರು ಕೀವ್ ತೊರೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ, ಖಾರ್ಕಿವ್ ಮತ್ತು ಇತರ ಯುದ್ಧ ನಡೆಯುತ್ತಿರುವ ವಲಯಗಳಲ್ಲಿ ಸಿಲುಕಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ತುರ್ತಾಗಿ ಸುರಕ್ಷತೆ ಒದಗಿಸುವಂತೆ ಉಕ್ರೇನ್ ಹಾಗೂ ರಷ್ಯಾ ಎರಡು ದೇಶಗಳಿಗೆ ತಿಳಿಸಲಾಗಿದೆ ಎಂದಿದ್ದಾರೆ.
ಉಕ್ರೇನ್ ಬಿಕ್ಕಟ್ಟಿನ ಕುರಿತು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಖಾರ್ಕಿವ್‌ನಲ್ಲಿ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದರು ಎಂದು ಕೂಡಾ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ತಿಳಿಸಿದ್ದಾರೆ.

ಮೂರು ದಿನಗಳಲ್ಲಿ 26 ವಿಶೇಷ ವಿಮಾನ
"ಖಾರ್ಕಿವ್, ಸುಮಿ ಮತ್ತು ಇತರ ಸಂಘರ್ಷ ವಲಯಗಳಲ್ಲಿನ ಪರಿಸ್ಥಿತಿಯ ಬಗ್ಗೆ ನಾವು ತುಂಬಾ ಕಾಳಜಿ ವಹಿಸುತ್ತೇವೆ," ಎಂದು ಹೇಳಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ, "ಮುಂದಿನ ಮೂರು ದಿನಗಳಲ್ಲಿ ಸುಮಾರು 26 ವಿಶೇಷ ವಿಮಾನಗಳು ಭಾರತೀಯರನ್ನು ಉಕ್ರೇನ್‌ನಿಂದ ಹೊತ್ತು ವಾಪಾಸ್ ಕರೆದು ತರಲಿದೆ," ಎಂದು ಹೇಳಿದರು.
ಬುಧವಾರ ಮುಂಜಾನೆ 4 ಗಂಟೆಗೆ ಸಿ-17 ಐಎಎಫ್ ವಿಮಾನವು ರೊಮೇನಿಯಾಗೆ ನಮ್ಮ ನಾಗರಿಕರನ್ನು ವಾಪಸು ಕರೆತರಲು ತೆರಳುವ ನಿರೀಕ್ಷೆ ಇದೆ ಎಂದು ಮಂಗಳವಾರು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಹೇಳಿದ್ದಾರೆ. ಉಕ್ರೇನ್‌ನಿಂದ ಭಾರತೀಯರು ರೊಮೇನಿಯಾ ಮತ್ತು ಹಂಗೇರಿ ಗಡಿ ದಾಟಿದ ಬಳಿಕ ಅವರನ್ನು ಮರಳಿ ಕರೆತರಲು ಭಾರತವು ವಿಶೇಷ ವಿಮಾನ ನಿರ್ವಹಣೆ ಮಾಡುತ್ತಿದೆ.
ಕೀವ್‌ನಿಂದ ತುರ್ತಾಗಿ ನಿರ್ಗಮಿಸಲು ಸಲಹೆ ನೀಡಿದ್ದ ಭಾರತ
ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧವು ಭೀಕರ ಹಂತಕ್ಕೆ ತಲುಪುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಈ ಹಿನ್ನೆಲೆಯಿಂದಾಗಿ ಭಾರತವು ತನ್ನ ಪ್ರಜೆಗಳನ್ನು ತಕ್ಷಣವೇ ಉಕ್ರೇನ್ ರಾಜಧಾನಿ ಕೀವ್‌ನಿಂದ ನಿರ್ಗಮಿಸುವಂತೆ ತಿಳಿಸಿತ್ತು. ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯರು ಇಂದೇ ತುರ್ತಾಗಿ ಕೀವ್ ತೊರೆಯಬೇಕು ಎಂದು ಸಲಹೆ ನೀಡಲಾಗುತ್ತದೆ. ಯಾವುದೇ ರೈಲು ಅಥವಾ ಬೇರೆ ಯಾವುದೇ ದಾರಿಯಾಗಿ ಕೀವ್ ತೊರೆಯಿರಿ ಎಂದು ಭಾರತದ ರಾಯಭಾರಿ ಕಚೇರಿ ತಿಳಿಸಿದೆ.
ಇನ್ನು ರಷ್ಯಾ ಯುದ್ಧದ ನಡುವೆ ಉಕ್ರೇನ್ ಪೂರ್ವದ ಖಾರ್ಕಿವ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಕೇಂದ್ರ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ. ಭಾರತದ ಶೇ.60ರಷ್ಟು ಅಂದರೆ ಕನಿಷ್ಠ 12,000 ಭಾರತೀಯ ಪ್ರಜೆಗಳು ಉಕ್ರೇನ್ ತೊರೆದಿದ್ದಾರೆ. ಉಳಿದವರಲ್ಲಿ ಅರ್ಧದಷ್ಟು ಭಾಗವು ಖಾರ್ಕಿವ್ ಮತ್ತು ಸುಮಿಯಲ್ಲಿದೆ. ಉಳಿದ ಅರ್ಧವು ಪಶ್ಚಿಮ ಗಡಿಯತ್ತ ಸಾಗುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ತಿಳಿಸಿದ್ದಾರೆ. ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಯಾವುದೇ ಭಾರತೀಯ ಪ್ರಜೆಗಳು ಉಳಿದಿಲ್ಲ. ಪ್ರತಿಯೊಬ್ಬರೂ ಸಂಘರ್ಷಪೀಡಿತ ಪ್ರದೇಶದಿಂದ ಹೊರ ಬಂದಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಪುನರ್ ಉಚ್ಛರಿಸಿದ್ದಾರೆ.
"ನಾವು ಸುಮಿ, ಖಾರ್ಕಿವ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇವೆ. ನಾವು ರಷ್ಯಾದ ಮತ್ತು ಉಕ್ರೇನಿಯನ್ ರಾಯಭಾರಿಗಳಿಗೆ ಕರೆ ಮಾಡಿದ್ದೇವೆ. ಸಂಘರ್ಷದ ಪ್ರದೇಶಗಳಲ್ಲಿ ನಮ್ಮ ವಿದ್ಯಾರ್ಥಿಗಳ ತುರ್ತು ಸುರಕ್ಷಿತ ಮಾರ್ಗಕ್ಕಾಗಿ ಪ್ರಬಲ ಬೇಡಿಕೆಯನ್ನು ಪುನರುಚ್ಚರಿಸಿದ್ದೇವೆ," ಎಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications