ಮಹಾರಾಷ್ಟ್ರದಲ್ಲಿ ಸಂಚಲನ: ಒಂದಾಗಲಿದ್ದಾರೆ ರಾಜ್ ಮತ್ತು ಉದ್ಧವ್ ಠಾಕ್ರೆ?
ಮುಂಬೈ, ಏಪ್ರಿಲ್ 20: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಪಕ್ಷಗಳಾದ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಬಣದ ನಡುವೆ ಸಂಬಂಧ ಹಳಸಿದೆ. ಈಗ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಮತ್ತೆ ಒಂದಾಗಲಿದ್ದಾರಾ? ಎಂಬ ಪ್ರಶ್ನೆ ಎದುರಾಗಿದೆ.
2005ರಲ್ಲಿ ರಾಜ್ ಠಾಕ್ರೆ ಸ್ವಂತ ಪಕ್ಷವನ್ನು ಆರಂಭಿಸುವ ಘೋಷಣೆ ಮಾಡಿದರು. ರಾಜ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ರಚನೆಗೊಂಡಿತು. ಇದರಿಂದಾಗಿ ಠಾಕ್ರೆ ಕುಟುಂಬ ಎರಡು ಭಾಗವಾಯಿತು. ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಬೇರೆ ಬೇರೆಯಾದರು. 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಇಬ್ಬರು ತೀವ್ರ ಹಿನ್ನಡೆಯನ್ನು ಅನುಭವಿಸಿದ್ದಾರೆ.

ಮರಾಠಿ ಸಂಸ್ಕೃತಿ, ಅಸ್ಮಿತೆಯನ್ನು ಜೀವಾಳವಾಗಿ ಮಾಡಿಕೊಂಡಿರುವ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಬೇರೆ ಬೇರೆಯಾದ ಬಳಿಕ ರಾಜಕೀಯವಾಗಿ ಯಶಸ್ಸು ಕಂಡಿದ್ದು ಕಡಿಮೆ. ಉದ್ಧವ್ ಠಾಕ್ರೆ ಕೆಲವು ದಿನ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಸಹ ಮೈತ್ರಿಕೂಟದ ಸರ್ಕಾರ ಏಕನಾಥ್ ಶಿಂಧೆ ಕಾರಣಕ್ಕೆ ಪತನಗೊಂಡು ಅವರು ರಾಜೀನಾಮೆ ನೀಡಬೇಕಾಯಿತು.
ಮತ್ತೆ ಒಂದಾಗುವ ಸುಳಿವು?; ರಾಜಕೀಯ ಪೈಪೋಟಿಗಿಂತ ಮಹಾರಾಷ್ಟ್ರದ ಭಾಷೆ, ಸಾಂಸ್ಕೃತಿಕ ವಾತಾವರಣ ಹೆಚ್ಚು ಎಂಬ ಸಂದೇಶವನ್ನು ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಹಲವು ಬಾರಿ ರವಾನೆ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯ ಬಳಿಕ ಉದ್ಧವ್ ಠಾಕ್ರೆ ಕಾಂಗ್ರೆಸ್‌ನಿಂದಲೂ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಚುನಾವಣೆಯಲ್ಲಿ ಒಂದು ಸೀಟು ಗೆಲ್ಲದ ರಾಜ್ ಠಾಕ್ರೆ ಪಕ್ಷ ಪಕ್ಷದ ಅಧಿಕೃತ ಚಿಹ್ನೆಯನ್ನು ಸಹ ಕಳೆದುಕೊಂಡಿದೆ.
ಮಹೇಶ್ ಮಾಂಜ್ರೇಕರ್ ಪೊಡ್‌ಕಾಸ್ಟ್‌ನಲ್ಲಿ ರಾಜ್ ಠಾಕ್ರೆ ಮಾತನಾಡಿದ್ದರು. ಮಹಾರಾಷ್ಟ್ರದ ಹಿತಾಸಕ್ತಿಗೆ ಉದ್ಧವ್ ಠಾಕ್ರೆ ಮತ್ತು ನನ್ನ ನಡುವಿನ ಭಿನ್ನಾಭಿಪ್ರಾಯ ಧಕ್ಕೆ ಉಂಟು ಮಾಡಿದೆ ಎಂದು ಹೇಳಿದ್ದರು. ಆದ್ದರಿಂದ ಮತ್ತೆ ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಒಂದಾಗಲಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ರಾಜ್ ಠಾಕ್ರೆ, "ಉದ್ಧವ್ ಹಾಗೂ ನನ್ನ ನಡುವೆ ಸಣ್ಣಪುಟ್ಟ ಜಗಳವಿದೆ, ವಿವಾದವಾಗಿದೆ. ಆದರೆ ಮಹಾರಾಷ್ಟ್ರ ಇದೆಲ್ಲಕ್ಕಿಂತ ದೊಡ್ಡದು. ಈ ಭಿನ್ನಾಭಿಪ್ರಾಯ ಮಹಾರಾಷ್ಟ್ರಹಾಗೂ ಮರಾಠಿ ಜನತೆಯ ಅಸ್ತಿತ್ವಕ್ಕೆ ದುಬಾರಿಯಾಗಿದೆ. ಇಬ್ಬರು ಒಗ್ಗೂಡುವುದು ಕಷ್ಟವೇನಲ್ಲ" ಎಂದು ಹೇಳಿದ್ದಾರೆ.
"ಶಾಸಕರು, ಸಂಸದರು ನನ್ನ ಜೊತೆಗಿದ್ದರು. ಆದರೂ ನಾನು ಏಕಾಂಗಿಯಾಗಿ ಸಾಗುವ ತೀರ್ಮಾನ ಕೈಗೊಂಡೆ. ಬಾಳಾ ಸಾಹೇಬ್ ಒಬ್ಬರನ್ನು ಹೊರತುಪಡಿಸಿ ಬೇರೆ ಯಾರ ಕೈಕೆಳಗೆ ಸಹ ಕೆಲಸ ಮಾಡಲು ನನಗೆ ಸಾಧ್ಯವಾಗದು. ಉದ್ಧವ್ ಜೊತೆ ಕೆಲಸ ಮಾಡಲು ನನಗೂ ಅಭ್ಯಂತರವಿಲ್ಲ. ಆದರೆ ಇನ್ನೊಂದು ಕಡೆಯವರಿಗೂ ನನ್ನ ಜೊತೆ ಕೆಲಸ ಮಾಡಲು ಇಷ್ಟವಿದೆಯೇ?" ಎಂದು ರಾಜ್ ಠಾಕ್ರೆ ಪ್ರಶ್ನೆ ಮಾಡಿದ್ದಾರೆ.
2024ರ ವಿಧಾನಸಭೆ ಚುನಾವಣೆಯಲ್ಲಿ 132 ಸೀಟುಗಳಲ್ಲಿ ಗೆದ್ದು ಬಿಜೆಪಿ ಅತಿ ದೊಡ್ಡ ಪಕ್ಷವಾಗಿತ್ತು. 'ಮಹಾಯತಿ' ಮೈತ್ರಿಕೂಟದ ನೆರವಿನಿಂದ ಪಕ್ಷ ಮತ್ತೊಮ್ಮೆ ಸರ್ಕಾರವನ್ನು ರಚನೆ ಮಾಡಿದೆ. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ. ಶಿವಸೇನೆ (ಏಕನಾಥ್ ಶಿಂಧೆ ಬಣ) 57 ಸ್ಥಾನ, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸ್ಥಾನ ಉಪ ಮುಖ್ಯಮಂತ್ರಿಗಳು.
ಆದರೆ ಚುನಾವಣೆಯಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಒಂದು ಸೀಟು ಗೆಲ್ಲಲು ವಿಫಲವಾಗಿತ್ತು. ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆ ಸಹ ಸೋಲು ಕಂಡಿದ್ದರು. ಈ ಸೋಲಿನ ಕಾರಣಕ್ಕೆ ಎಂಎನ್‌ಎಸ್ ಅಧಿಕೃತ ರಾಜಕೀಯ ಪಕ್ಷದ ಸ್ಥಾನಮಾನ ಮತ್ತು ಚುನಾವಣಾ ಚಿನ್ಹೆಯಾದ 'ರೈಲು' ಕಳೆದುಕೊಂಡಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಮಹಾಯತಿ ಮೈತ್ರಿಕೂಟಕ್ಕೆ ಎಂಎನ್‌ಎಸ್ ಬೆಂಬಲ ಘೋಷಣೆ ಮಾಡಿತ್ತು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲದೇ 125 ಸೀಟುಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಿತ್ತು. ಆದರೆ ಒಂದು ಸೀಟು ಸಹ ಗೆದ್ದಿಲ್ಲ.
2024ರ ಚುನಾವಣೆಯಲ್ಲಿ ಬಿಜೆಪಿ 132, ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟು ಗೆದ್ದಿವೆ. ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದಲ್ಲಿ ಕಾಂಗ್ರೆಸ್ 16, ಶಿವಸೇನೆ (ಉದ್ಧವ್ ಠಾಕ್ರೆ ಬಣ) 20, ಎನ್‌ಸಿಪಿ (ಶರದ್ ಪವಾರ್) 10 ಕ್ಷೇತ್ರಗಳಲ್ಲಿ ಜಯಗಳಿಸಿವೆ. ಎಸ್‌ಪಿ 2 ಮತ್ತು 10 ಸ್ಥಾನಗಳಲ್ಲಿ ಇತರ ಪಕ್ಷಗಳು/ ಪಕ್ಷೇತರರು ಗೆದ್ದಿದ್ದಾರೆ.












Click it and Unblock the Notifications