ಮುಂಬೈ: ಸಂಸದ ಸಂಜಯ್ ರಾವತ್‌ಗೆ ಜೀವ ಬೆದರಿಕೆ ಪ್ರಕರಣ ಸಂಬಂಧ ಇಬ್ಬರ ಬಂಧನ
ಮುಂಬೈ, ಜೂನ್. 10: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣದ ನಾಯಕ ಹಾಗೂ ಸಂಸದ ಸಂಜಯ್ ರಾವತ್ ಅವರಿಗೆ ಜೀವ ಬೆದರಿಕೆ ಸಂದೇಶ ರವಾನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
"ಉದ್ಧವ್ ಠಾಕ್ರೆ ಬಣದ ನಾಯಕ ಮತ್ತು ಸಂಸದ ಸಂಜಯ್ ರಾವುತ್‌ಗೆ ಬೆದರಿಕೆ ಹಾಕಿದ್ದಕ್ಕಾಗಿ ಮುಂಬೈ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ" ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಬಂಧಿತರ ವಿಚಾರಣೆ ನಡೆಯುತ್ತಿದೆ. ಶುಕ್ರವಾರ ಮುಂಜಾನೆ, ಉದ್ಧವ್ ಠಾಕ್ರೆ ಬಣದ ಶಾಸಕ ಸುನೀಲ್ ರಾವತ್ ಅವರು ನಿನ್ನೆಯಿಂದ ಸಂಜಯ್ ರಾವತ್ ಮತ್ತು ತನಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿದ್ದು, ಮಾಧ್ಯಮಗಳೊಂದಿಗೆ ಮಾತನಾಡಬೇಡಿ ಎಂದು ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

"ಉದ್ಧವ್ ಠಾಕ್ರೆ ಬಣದ ಸಂಸದ ಸಂಜಯ್ ರಾವತ್ ಮತ್ತು ನನಗೆ ನಿನ್ನೆಯಿಂದ ಕೊಲೆ ಬೆದರಿಕೆ ಕರೆಗಳು ಬಂದಿದ್ದು, ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಬೇಡಿ ಎಂದು ಕೇಳಿಕೊಳ್ಳಲಾಗಿದೆ. ಒಂದು ತಿಂಗಳೊಳಗೆ ತಮ್ಮ ಸಾರ್ವಜನಿಕ ಭಾಷಣಗಳನ್ನು ನಿಲ್ಲಿಸಲು ರಾವತ್‌ಗೆ ಟಾರ್ಗೆಟ್ ನೀಡಲಾಗಿದೆ. ಅದು ವಿಫಲವಾದರೆ ಗುಂಡುಗಳಿಂದ ಪ್ರಾಣ ತೆಗೆಯಲಾಗುವುದು ಎಂದು ಬೆದರಿಕೆ ಹಾಕಲಾಗಿದೆ. ಘಟನೆಯ ಬಗ್ಗೆ ಮುಂಬೈ ಪೊಲೀಸ್ ಕಮಿಷನರ್ ಮತ್ತು ರಾಜ್ಯ ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದೆ" ಎಂದು ಶಾಸಕ ಸುನೀಲ್ ರಾವತ್ ಹೇಳಿದ್ದರು.
ಇತ್ತ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಬೆದರಿಕೆ ಕರೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. "ಪೊಲೀಸರು ಐಪಿಸಿಯ ಸೆಕ್ಷನ್ 153A, 504, 506 (2) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಅಪರಾಧ ವಿಭಾಗವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದೆ" ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸದೆ ಸುಪ್ರಿಯಾ ಸುಳೆ ಶುಕ್ರವಾರ ಮುಂಜಾನೆ ತನ್ನ ತಂದೆ ಶರದ್ ಪವಾರ್‌ಗೆ ತನ್ನ ವಾಟ್ಸಾಪ್‌ನಲ್ಲಿ ಬೆದರಿಕೆ ಸಂದೇಶ ಬಂದಿತ್ತು ಮತ್ತು ಈ ಬಗ್ಗೆ ಮುಂಬೈ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
"ಶರದ್ ಪವಾರ್ ಸಾಹಬ್‌ಗಾಗಿ ನನಗೆ ವಾಟ್ಸಾಪ್‌ನಲ್ಲಿ ಸಂದೇಶ ಬಂದಿದೆ. ಅವರಿಗೆ ವೆಬ್‌ಸೈಟ್ ಮೂಲಕ ಬೆದರಿಕೆ ಹಾಕಲಾಗಿದೆ. ಹಾಗಾಗಿ ನ್ಯಾಯಕ್ಕಾಗಿ ನಾನು ಪೊಲೀಸರ ಬಳಿ ಬಂದಿದ್ದೇನೆ. ನಾನು ಮಹಾರಾಷ್ಟ್ರ ಗೃಹ ಸಚಿವರು ಮತ್ತು ಕೇಂದ್ರ ಗೃಹ ಸಚಿವರನ್ನು ಒತ್ತಾಯಿಸುತ್ತೇನೆ. ಇಂತಹ ಘಟನೆಗಳು ಕೀಳು ಮಟ್ಟದ ರಾಜಕೀಯವಾಗಿದೆ ಮತ್ತು ಇದು ನಿಲ್ಲಬೇಕು" ಎಂದು ಸುಪ್ರಿಯಾ ಸುಳೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.
ಇದರ ಜೊತೆಗೆ ನ್ಯಾಯ ಸಿಗದಿದ್ದಲ್ಲಿ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆಗಳು ಹೊಣೆಯಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದರು. ಬೆದರಿಕೆ ಬಂದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಗೃಹ ಇಲಾಖೆ ಗಮನಹರಿಸಬೇಕು. ರಾಜಕೀಯ ಬದಿಗಿಡಬೇಕು. ಇಂದು ವೆಬ್‌ಸೈಟ್ ಮೂಲಕ ಬೆದರಿಕೆ ಸಂದೇಶಗಳು ಬಂದಿವೆ. ಟ್ವಿಟರ್ ಮೂಲಕವೂ ಬೆದರಿಕೆಗಳು ಬಂದಿವೆ. ಯಾರೆಂದು ಗೊತ್ತಿಲ್ಲ, ಹೀಗಾಗಿ ನ್ಯಾಯ ಕೇಳಲು ಬಂದಿದ್ದೇನೆ" ಎಂದು ಶರದ್ ಪವಾರ್ ಪುತ್ರಿ ಮತ್ತು ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.
ಇನ್ನು, ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವನಕುಳೆ ಮಾತನಾಡಿ, ಶರದ್ ಪವಾರ್‌ಗೆ ಬೆದರಿಕೆ ಹಾಕಿರುವುದು ಕಳವಳಕಾರಿ ವಿಷಯವಾಗಿದ್ದು, ಪೊಲೀಸರು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.












Click it and Unblock the Notifications