ಭಾರತದ ಈ ಮಹಾನಗರದಲ್ಲಿ ಪ್ರತಿನಿತ್ಯ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ!
ನವದೆಹಲಿ, ಆಗಸ್ಟ್ 30: ಭಾರತದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ಎನಿಸಿಕೊಂಡಿರುವ ನವದೆಹಲಿಯು ಮಹಿಳಯರ ಪಾಲಿಗೆ ಅಸುರಕ್ಷಿತ ನಗರ ಎನ್ನುವುದು ಅಂಕಿ-ಅಂಶಗಳಿಂದ ಗೊತ್ತಾಗುತ್ತಿದೆ.
ನವದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣವೇ ಇಲ್ಲದಂತೆ ಆಗಿದೆ. 2020ಕ್ಕೆ ಹೋಲಿಸಿದರೆ 2021ನೇ ಸಾಲಿನಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಶೇ.40ರಷ್ಟು ಹೆಚ್ಚಳವಾಗಿದೆ. ಇದರಿಂದ ಮಹಿಳೆಯರ ಪಾಲಿಗೆ ರಾಷ್ಟ್ರರಾಜಧಾನಿಯಲ್ಲಿಯೇ ಸುರಕ್ಷತೆ ಇಲ್ಲವೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.
ಕಳೆದೊಂದು ವರ್ಷದಲ್ಲಿ ನವದೆಹಲಿಯಲ್ಲಿ ವರದಿ ಆಗಿರುವ ಅತ್ಯಾಚಾರ ಪ್ರಕರಣಗಳು ಎಷ್ಟು?, ದೇಶದಲ್ಲಿ ಮಹಿಳೆಯರ ಪಾಲಿಗೆ ಸುರಕ್ಷಿತವೇ ಅಲ್ಲ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಇತರೆ ನಗರಗಳು ಯಾವವು? ಬೆಂಗಳೂರಿನಲ್ಲಿ ದಾಖಲಾಗಿರುವ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಸಂಖ್ಯೆ ಎಷ್ಟಿದೆ? ಹೀಗೆ ಮಹಿಳೆಯರು ತಮ್ಮ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಲು ಓದಲೇಬೇಕಾದ ಅಂಶಗಳುಳ್ಳ ವರದಿಗಾಗಿ ಮುಂದೆ ನೋಡಿರಿ.

ನವದೆಹಲಿಯಲ್ಲಿ ನಿತ್ಯ ಎರಡು ಅತ್ಯಾಚಾರ ಪ್ರಕರಣ ಕನ್ಫರ್ಮ್!
ನವದೆಹಲಿಯಲ್ಲಿ ದಿನಕ್ಕೆ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಯುವುದು ಪಕ್ಕಾ ಎನ್ನುವಂತಾಗಿದೆ. ಕಳೆದ 2021ರ ಸಾಲಿನಲ್ಲಿ ನವದೆಹಲಿಯೊಂದರಲ್ಲೇ 833ಕ್ಕೂ ಹೆಚ್ಚು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸಲಾಗಿದ್ದು, ಪೋಕ್ಸೋ ಕಾಯ್ದೆ ಅಡಿ 1357ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಎನ್‌ಸಿಆರ್‌ಬಿಯ ಇತ್ತೀಚಿನ ವರದಿಯ ಪ್ರಕಾರ, ದೇಶದಾದ್ಯಂತ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಮೆಟ್ರೋಪಾಲಿಟನ್ ನಗರಗಳ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿಯು ಅಗ್ರಸ್ಥಾನದಲ್ಲಿದೆ. ಕಳೆದ ವರ್ಷ ಪ್ರತಿದಿನ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಲಾಗಿರುವುದು ಬೆಳಕಿಗೆ ಬಂದಿದೆ.

ದೆಹಲಿ ಮಹಿಳೆಯರ ಪಾಲಿನ ಅಸುರಕ್ಷಿತ ಮಹಾನಗರ
ರಾಷ್ಟ್ರ ರಾಜಧಾನಿ ಎನಿಸಿರುವ ನವದೆಹಲಿಯು ಮಹಿಳೆಯ ಸುರಕ್ಷತೆ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಿದೆ. ಅಷ್ಟೇ ಅಲ್ಲದೇ ಮಹಿಳಾ ಮತ್ತು ಅಪ್ರಾಪ್ತೆಯರ ಪಾಲಿಗೆ ಅಸುರಕ್ಷಿತ ನಗರವಾಗಿ ಗುರುತಿಸಿಕೊಂಡಿದೆ. ಕಳೆದ 2021ರಲ್ಲಿ ಮಹಿಳೆಯರ ವಿರುದ್ಧ 13,892 ಅಪರಾಧಗಳ ಪ್ರಕರಣಗಳನ್ನು ದಾಖಲಿಸಲಾಗಿದೆ. 2020ರಲ್ಲಿ 9782 ಪ್ರಕರಣಗಳು ದಾಖಲಾಗಿದ್ದು, ಅಲ್ಲಿಂದ ಒಂದು ವರ್ಷದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆಯಲ್ಲಿ ಶೇ.40ಕ್ಕಿಂತ ಹೆಚ್ಚಳವಾಗಿದೆ.

ಭಾರತದ ಈ ನಗರಗಳಲ್ಲಿ ಮಹಿಳೆಯರ ಮೇಲೆ ಕ್ರೌರ್ಯ ಹೆಚ್ಚು!
ದೇಶದಲ್ಲಿ ಮಹಿಳೆಯರ ಪಾಲಿಗೆ ಯಾವ ನಗರ ಸುರಕ್ಷಿತ ಎಂಬುದರ ಬಗ್ಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿ-ಅಂಶಗಳನ್ನು ನೀಡಿದೆ. 19 ಮಹಾನಗರಗಳ ವಸ್ತುಸ್ಥಿತಿಯ ಮೇಲೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಅದರ ಪ್ರಕಾರ, ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ 19 ಮಹಾನಗರಗಳ ಪೈಕಿ ದೆಹಲಿ ಅಗ್ರಸ್ಥಾನದಲ್ಲಿದ್ದು, ಶೇ.32.20ರಷ್ಟು ಪಾಲನ್ನು ಪಡೆದುಕೊಂಡಿದೆ. ಅದೇ ರೀತಿ ಮುಂಬೈನಲ್ಲಿ 5543 ಪ್ರಕರಣಗಳು ವರದಿಯಾಗಿದ್ದು, ಶೇ.12.76ರಷ್ಟು ಪಾಲು ಹೊಂದಿದೆ. ಇನ್ನು ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ 3127 ಪ್ರಕರಣಗಳು ವರದಿಯಾಗಿದ್ದು, ಶೇ.7.2ರಷ್ಟು ಪಾಲು ಹೊಂದಿದೆ.

ಗಂಡನಿಂದ ನಿತ್ಯ ನರಕಯಾತನೆ ಎದುರಿಸುವ ಮಹಿಳೆಯರ ಸಂಖ್ಯೆ?
ಎರಡು ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಇತರ ಮೆಟ್ರೋಪಾಲಿಟನ್ ನಗರಗಳಿಗೆ ಹೋಲಿಸಿದರೆ 2021ನೇ ಸಾಲಿನಲ್ಲಿ ನವದೆಹಲಿಯಲ್ಲಿ 3948 ಅಪಹರಣ, 4674 ಗಂಡನಿಂದ ಹಿಂಸೆಯ ಪ್ರಕರಣ, 833 ಅತ್ಯಾಚಾರಕ್ಕೆ ಸಂಬಂಧಿಸಿದ ವಿಭಾಗಗಳಲ್ಲಿ ಮಹಿಳೆಯರ ವಿರುದ್ಧದ ಅತಿಹೆಚ್ಚು ಅಪರಾಧಗಳ ಪ್ರಕರಣಗಳು ವರದಿಯಾಗಿವೆ. 2021ರಲ್ಲಿ ದೆಹಲಿಯಲ್ಲಿ ಸರಾಸರಿ ಎರಡು ಹುಡುಗಿಯರು ಪ್ರತಿದಿನ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ರಾಷ್ಟ್ರೀಯ ರಾಜಧಾನಿ 2021ರಲ್ಲಿ ಮಹಿಳೆಯರ ವಿರುದ್ಧ 13,982 ಅಪರಾಧ ಪ್ರಕರಣಗಳನ್ನು ದಾಖಲಿಸಿದರೆ, ಎಲ್ಲಾ 19 ಮಹಾನಗರಗಳಲ್ಲಿ ಒಟ್ಟು ಅಪರಾಧಗಳು 43,414 ಎಂದು ವರದಿ ತಿಳಿಸಿದೆ.












Click it and Unblock the Notifications