Tirumala Laddu: ಕಲಬೆರಕೆ ತುಪ್ಪ ಕಳುಹಿಸಿದ ಎಆರ್ ಡೈರಿಗೆ ಬಿಗ್ ಶಾಕ್ ಕೊಟ್ಟ ತಿರುಪತಿ ತಿಮ್ಮಪ್ಪ!
ತಿರುಮಲ ಶ್ರೀವಾರಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಕಲಬೆರಕೆ ತುಪ್ಪ ಪೂರೈಸಿದ ಎಆರ್ ಡೈರಿ ಫುಡ್ ಪ್ರಾಡಕ್ಟ್ಸ್ ಲಿಮಿಟೆಡ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಟಿಟಿಡಿ ತಿರುಪತಿ ಪೂರ್ವ ಪೊಲೀಸರಿಗೆ ದೂರು ನೀಡಿದೆ. ಇದರಿಂದಾಗಿ ಎಆರ್ ಡೈರಿಗೀಗ ಸಂಕಷ್ಟ ಎದುರಾಗಿದೆ.
ಹೌದು... ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸಲಾಗುವ ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ ಮಾಡಲಾಗಿರುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಅಲ್ಲದೆ ಈ ಘಟನೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಹೀಗಾಗಿ ಟಿಟಿಡಿ ಎಆರ್ ಡೈರಿ ವಿರುದ್ಧ ದೂರು ದಾಖಲಿಸಿದೆ. ನಿಯಮಾವಳಿ ಉಲ್ಲಂಘಿಸಿ ಟಿಟಿಡಿಗೆ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ವರ್ಷ ಮೇ 15ರಂದು ಎಆರ್ ಡೈರಿ ಫುಡ್ ಪ್ರಾಡಕ್ಟ್ಸ್ ಲಿಮಿಟೆಡ್‌ಗೆ ತುಪ್ಪ ಪೂರೈಕೆಗೆ ಆದೇಶ ನೀಡಲಾಗಿತ್ತು. ಆದೇಶದಂತೆ ಎಆರ್ ಡೈರಿಯಿಂದ ಜೂನ್ 12, 20, 25 ಹಾಗೂ ಜುಲೈ 6ರಂದು ನಾಲ್ಕು ಟ್ಯಾಂಕರ್ ತುಪ್ಪ ಪೂರೈಕೆ ಮಾಡಲಾಗಿದೆ. ತಿರುಪತಿಗೆ ಬರುವ ತುಪ್ಪವನ್ನು ಈ ಹಿಂದಿನ ಹಳೆ ಪದ್ಧತಿಯಲ್ಲಿ ಪರೀಕ್ಷೆ ಮಾಡಿ ಬಳಸಲಾಗುತ್ತಿತ್ತು.
ಆದರೆ ತಿರುಮಲ ಶ್ರೀವಾರಿ ಲಡ್ಡು ಪ್ರಸಾದದ ಗುಣಮಟ್ಟದ ಬಗ್ಗೆ ನಿರಂತರ ದೂರುಗಳು ಬಂದಿದ್ದರಿಂದ ಅನುಮಾನದ ಮೇರೆಗೆ ಟಿಟಿಡಿ, ಎನ್‌ಡಿಬಿಎಲ್ ಸಹಯೋಗದಲ್ಲಿ ಕಲಬೆರಕೆ ಪರೀಕ್ಷೆ ನಡೆಸಿತ್ತು. ಜುಲೈ 6 ಮತ್ತು 12ರಂದು ಎಆರ್ ಡೈರಿ ನಾಲ್ಕು ಟ್ಯಾಂಕರ್ ತುಪ್ಪವನ್ನು ಪೂರೈಸಿತ್ತು. ಇದನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.
ಎನ್‌ಡಿಬಿಎಲ್ ನಡೆಸಿದ ಪರೀಕ್ಷೆಯಲ್ಲಿ ಲಡ್ಡು ಪ್ರಸಾದ ತಯಾರಿಕೆಗೆ ಬಳಸುವ ತುಪ್ಪದಲ್ಲಿ ಸಸ್ಯಜನ್ಯ ಎಣ್ಣೆ ಮತ್ತು ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಎಂದು ವರದಿಯಾಗಿದೆ. ಇದರಿಂದಾಗಿ ಜುಲೈ 22, 23 ಮತ್ತು 27ರಂದು ಎಆರ್ ಡೈರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ತುಪ್ಪದಲ್ಲಿ ಯಾವುದೇ ಕಲಬೆರಕೆ ಇಲ್ಲ ಎಂದು ಎಆರ್ ಡೈರಿ ಸೆಪ್ಟೆಂಬರ್ 4ರಂದು ಉತ್ತರ ನೀಡಿದೆ. ಟಿಟಿಡಿ ದೂರಿನಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದೆ.

ಟಿಟಿಡಿ ಆಡಳಿತ ಮಂಡಳಿಯು ಲಡ್ಡು ತಯಾರಿಕೆಗೆ ಬೇಕಾಗಿರುವ ತುಪ್ಪ ಖರೀದಿಸಲು ಪ್ರತಿ ಆರು ತಿಂಗಳಿಗೊಮ್ಮೆ ಟೆಂಡರ್ ಕರೆಯುತ್ತದೆ. ಕೆಎಂಎಫ್ ಹಲವು ವರ್ಷಗಳಿಂದ ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಟಿಟಿಡಿಗೆ ತುಪ್ಪ ಪೂರೈಸುತ್ತಿತ್ತು. ಆದರೆ 2022-2023ನೇ ಸಾಲಿನಲ್ಲಿ ಕೆಎಂಎಫ್ ತುಪ್ಪಕ್ಕೆ ಹೆಚ್ಚಿನ ದರದ ಬೇಡಿಕೆ ಇಟ್ಟಿತ್ತು. ಹಾಗಾಗಿ ಟಿಟಿಡಿ ಆಡಳಿತ ಮಂಡಳಿಯು ಬೇರೆ ಮೂಲಗಳಿಂದ ತುಪ್ಪ ಖರೀದಿ ಮಾಡಲು ತೀರ್ಮಾನಿಸಿತು.
2022-2023ನೇ ಸಾಲಿನ ಟೆಂಡರ್‌ನಲ್ಲಿ ಪ್ರತಿ ಕೆಜಿ ತುಪ್ಪಕ್ಕೆ ಸುಮಾರು 450 ರೂ.ಗೆ ಕೆಎಂಎಫ್ ಬಿಡ್ ಮಾಡಿತ್ತು. ಹೀಗಾಗಿ ಟಿಟಿಡಿ ಕಳೆದ ವರ್ಷವೇ ಕೆಎಂಎಫ್ ನಿಂದ ನಂದಿನಿ ತುಪ್ಪ ಖರೀದಿ ನಿಲ್ಲಿಸಿತು. ಕೆಎಂಎಫ್ ಬದಲಿಗೆ ಕಡಿಮೆ ಬಿಡ್ ಮಾಡಿದ್ದ ಏಜೆನ್ಸಿಗಳಿಂದ ಟಿಟಿಡಿ ತುಪ್ಪ ಖರೀದಿಸಿತ್ತು. ಈ ಏಜೆನ್ಸಿಗಳಲ್ಲಿ ಎಆರ್ ಡೈರಿ ಕೂಡ ಒಂದು. ಈ ಎಆರ್ ಡೈರಿಯಿಂದ ಸರಬರಾಜು ಆದ ತುಪ್ಪದಲ್ಲಿ ಪ್ರಾಣಿಕೊಬ್ಬು ಇರುವುದು ದೃಢಪಟ್ಟಿದೆ.
ತಿರುಪತಿ ಲಡ್ಡುಗೆ ಕೆಎಂಎಫ್ ತುಪ್ಪ ಸರಬರಾಜು ಸ್ಥಗಿತಗೊಳಿಸಿರುವ ವಿಚಾರವಾಗಿ ಆಗಲೇ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಜಟಾಪಟಿ ನಡೆದಿತ್ತು. ಆದರೀಗ ಇದು ಮತ್ತಷ್ಟು ಉಲ್ಬಣಗೊಂಡಿದೆ.












Click it and Unblock the Notifications