ವಿವಿಧ ಬೇಡಿಕೆ ಈಡೇರಿಕೆಗೆ ವಾರದಿಂದ ನಡೆಯುತ್ತಿದ್ದ ಲಾರಿ ಮುಷ್ಕರ ವಾಪಸ್
Recommended Video

ನವದೆಹಲಿ, ಜುಲೈ 27: ಏಳು ದಿನಗಳಿಂದ ನಡೆಸುತ್ತಿದ್ದ ಲಾರಿ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ. ಮುಷ್ಕರನಿರತರ ಬೇಡಿಕೆಗಳನ್ನು ಪೂರೈಸಲು ಪರಿಗಣಿಸುವುದಾಗಿ ಸರಕಾರವು ಭರವಸೆ ನೀಡಿದ್ದರಿಂದಾಗಿ ಮುಷ್ಕರ ವಾಪಸ್ ಪಡೆಯಲಾಗಿದೆ.
ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ ಪೋರ್ಟ್ ಬಂದ್ ಗೆ ಕರೆ ನೀಡಿತ್ತು. ಇಂಧನದ ಮೇಲೆ ತೆರಿಗೆ ಇಳಿಕೆಗೆ, ಹೆಚ್ಚಿನ ವಿಮೆ ಪ್ರೀಮಿಯಂ ವಾಪಸ್ ಪಡೆಯುವುದಕ್ಕೆ ಮತ್ತು ಹೆದ್ದಾರಿ ಸುಂಕವನ್ನು ಇಳಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಹಾಕುವ ಉದ್ದೇಶದಿಂದ ಬಂದ್ ಗೆ ಕರೆ ನೀಡಲಾಗಿತ್ತು.
ಲಾರಿ ಚಾಲಕ ಒಕ್ಕೂಟದ ಸಾವಿರಾರು ಸದಸ್ಯರು ಕೂಡ ಬಂದ್ ಬೆಂಬಲಿಸಿದ್ದರಿಂದ ಸರಕು- ಸಾಗಣೆ ಅಸ್ತವ್ಯಸ್ತವಾಗಿ, ಆಹಾರ ಪದಾರ್ಥಗಳ ಕೊರತೆಯಿಂದಾಗಿ ಬೆಲೆಗಳ ಏರಿಕೆ ಆಗಬಹುದು ಎಂಬ ಆತಂಕ ಎದುರಾಗಿತ್ತು.

"ಲಾರಿ ಮುಷ್ಕರದ ವೇಳೆ ಇಟ್ಟಿರುವ ಬೇಡಿಕೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಆ ಪೈಕಿ ಹಲವನ್ನು ಒಪ್ಪಿಕೊಂಡಿದೆ. ಉನ್ನತ ಮಟ್ಟದ ಸಮಿತಿ ರಚಿಸಿ, ಬಾಕಿ ಉಳಿದ ಅವರ ಬೇಡಿಕೆಗಳನ್ನು ಪರಿಶೀಲಿಸಲು ತಿಳಿಸಲಾಗಿದೆ" ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.
ಲಾರಿ ಮುಷ್ಕರದಿಂದ ದಕ್ಷಿಣ ಹಾಗೂ ಪಶ್ಚಿಮ ಭಾರತದಲ್ಲಿ ಭಾರೀ ಪರಿಣಾಮ ಉಂಟಾಗಿದೆ. ಈ ಮುಷ್ಕರದಿಂದಾಗಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಐವತ್ತು ಸಾವಿರ ಕೋಟಿ ರುಪಾಯಿ ತನಕ ನಷ್ಟವಾಗಿದೆ ಎಂದು 'ಅಸೋಚಾಂ'ನಿಂದ ಅಂದಾಜು ಮಾಡಲಾಗಿದೆ.
ಇನ್ನು ಟಾಟಾ ಮೋಟಾರ್ಸ್, ಫೋರ್ಡ್, ಸ್ಕೋಡಾದಂಥ ಕಂಪೆನಿಗಳ ಕಾರ್ಯ ನಿರ್ವಹಣೆಯಲ್ಲೂ ಇದರಿಂದ ವ್ಯತ್ಯಯಗಳಾಗಿವೆ. ಕೆಲ ನಗರಗಳಲ್ಲಿ ವಸ್ತುಗಳನ್ನು ಡೆಲಿವರಿ ಮಾಡುವುದಕ್ಕೆ ಬಂದ್ ನಿಂದಾಗಿ ತೊಂದರೆಯಾಗಿತ್ತು ಎಂದು ಅಮೆಜಾನ್ ಕೂಡ ಹೇಳಿಕೊಂಡಿದೆ.
ಟೆಕ್ಸ್ ಟೆಲ್, ಫಾರ್ಮಾಸ್ಯುಟಿಕಲ್, ಕೆಮಿಕಲ್ ಹಾಗೂ ಸೆರಾಮಿಕ್ ಕಾರ್ಖಾನೆಗಳಿರುವ ಗುಜರಾತ್, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಹೊಡೆತ ಬಿದ್ದಿತ್ತು.












Click it and Unblock the Notifications