TCS ಕೆಲಸ ಬಿಟ್ಟು ಸೇನೆ ಸೇರಿದ ಅನುಜ್ ವಶಿಷ್ಠ್ ಹಸೆಮಣೆಗೇರಲು ಕೆಲವೇ ದಿನಗಳಿರುವಾಗಲೇ ಯುದ್ಧ ವಿಮಾನ ಪತನದಲ್ಲಿ ಹುತಾತ್ಮ

ಭಾರತೀಯ ವಾಯುಪಡೆಯ ಯುವ ಪೈಲಟ್ ಸ್ಕ್ವಾಡ್ರನ್ ಲೀಡರ್ ಅನುಜ್ ವಶಿಷ್ಟ್ ಅವರ ಬದುಕು ದೇಶಪ್ರೇಮ, ಸಾಹಸ ಮತ್ತು ತ್ಯಾಗದ ಒಂದು ಅದ್ಭುತ ಕಥೆ ಎನ್ನಬಹುದು. 32 ವರ್ಷದ ಈ ಯುವ ಪೈಲಟ್ ಮದುವೆಯ ಸಿದ್ಧತೆಯಲ್ಲಿದ್ದರು. ಇಡೀ ಕುಟುಂಬ ನವ ವರನನ್ನ ಸ್ವಾಗತಿಸಲು ಕಾತುರದಿಂದ ಕಾಯುತ್ತಿತ್ತು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು.

ಹೌದು, ಮಾರ್ಚ್ 5, 2026ರಂದು ನಡೆದ ಯುದ್ಧವಿಮಾನ ಅಪಘಾತವೊಂದು ಎರಡು ಕುಟುಂಬಗಳ ಸಂತಸವನ್ನ ಕಸಿದುಕೊಂಡಿದ್ದಲ್ಲದೆ, ದೇಶ ಇಬ್ಬರು ಹೆಮ್ಮೆಯ ವೀರಪುತ್ರರನ್ನ ಕಳೆದುಕೊಳ್ಳುವಂತೆ ಮಾಡಿತು.

Tragic IAF Su-30MKI Crash Squadron Leader Anuj Vashisht Loses His Life Just Days Before Wedding

ಭಾರತೀಯ ವಾಯುಪಡೆ ಸು-30ಎಂಕೆಐ ಪತನ

ಅಸ್ಸಾಂನ ಕಾರ್ಬಿ ಆಂಗ್ಲಾಂಗ್ (Assam Karbi Anglong) ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಸು-30 ಎಂಕೆಐ ಯುದ್ಧವಿಮಾನವು ತರಬೇತಿ ಹಾರಾಟದ ವೇಳೆ ಪತನಗೊಂಡಿತು. ಅಸ್ಸಾಂನ ಜೋರ್ಹತ್ ವಾಯುನೆಲೆಯಿಂದ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಈ ಭೀಕರ ದುರಂತ ಸಂಭವಿಸಿದೆ.

ಈ ಅಪಘಾತದಲ್ಲಿ ವಿಮಾನವನ್ನ ಮುನ್ನಡೆಸುತ್ತಿದ್ದ ಸ್ಕ್ವಾಡ್ರನ್ ಲೀಡರ್ ಅನುಜ್ ವಶಿಷ್ಟ್ ಮತ್ತು ಅವರ ಜೊತೆಗಿದ್ದ ಸಹ-ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಪುರ್ವೇಶ್ ದುರಗ್ಕರ್ ಇಬ್ಬರೂ ಹುತಾತ್ಮರಾದರು. ಮರುದಿನ ಬೆಳಿಗ್ಗೆ ವಾಯುಪಡೆಯು ಈ ಇಬ್ಬರು ವೀರರ ಸಾವನ್ನು ಅಧಿಕೃತವಾಗಿ ದೃಢಪಡಿಸಿತು.

ಕಾರ್ಪೊರೇಟ್ ಜಗತ್ತಿನಿಂದ ವಾಯುಪಡೆಯತ್ತ ಅನುಜ್ ವಶಿಷ್ಟ್ ಪಯಣ

ಅನುಜ್ ವಶಿಷ್ಟ್ ಅವರ ಹಿನ್ನೆಲೆ ಎಲ್ಲರಿಗೂ ಪ್ರೇರಣೆಯಾಗುವಂತದ್ದು. ನಿವೃತ್ತ ಸೇನಾ ಸುಬೇದಾರ್ ಅವರ ಪುತ್ರನಾದ ಅನುಜ್, ಗುರುಗ್ರಾಮದ ಕೇಂದ್ರೀಯ ವಿದ್ಯಾಲಯದಲ್ಲಿ ತಮ್ಮ ಶಾಲಾ ಶಿಕ್ಷಣವನ್ನ ಪೂರೈಸಿದರು.

ಬಳಿಕ ಎಂಜಿನಿಯರಿಂಗ್ ಪದವಿ ಪಡೆದು, ಪ್ರತಿಷ್ಠಿತ ಐಟಿ ಕಂಪನಿ ಟಿಸಿಎಸ್‌ನಲ್ಲಿ ವೃತ್ತಿಜೀವನ ಆರಂಭಿಸಿದ್ದರು. ಕೈತುಂಬಾ ಸಂಬಳ, ಸುರಕ್ಷಿತವಾದ ಕಾರ್ಪೊರೇಟ್ ಉದ್ಯೋಗ ಮತ್ತು ಉಜ್ವಲ ಭವಿಷ್ಯ ಅವರ ಮುಂದಿತ್ತು. ಆದರೆ, ದೇಶಸ ವಾಯುಪಡೆಯಲ್ಲಿ ಸೇರಿ ಆಕಾಶದಲ್ಲಿ ಹಾರಾಡಬೇಕೆಂಬ ಅವರ ಬಾಲ್ಯದ ಕನಸು ಅವರನ್ನ ಸುಮ್ಮನೆ ಇರಲು ಬಿಡಲಿಲ್ಲ.

ಕಾರ್ಪೊರೇಟ್ ಬದುಕಿನ್ನ ಬಿಟ್ಟು ಅವರು, ತಮ್ಮ ಕನಸಿನ ಬೆನ್ನೇರಿ ಭಾರತೀಯ ವಾಯುಪಡೆಯನ್ನ ಸೇರಿದರು. 2015ರಲ್ಲಿ ವಾಯುಪಡೆಯ ಫ್ಲೈಯಿಂಗ್ ಬ್ರಾಂಚ್‌ಗೆ ಕಮಿಷನ್ ಆದ ಅವರು, ಒಂದು ದಶಕಕ್ಕೂ ಹೆಚ್ಚು ಕಾಲ ಅತ್ಯುತ್ತಮ ಫೈಟರ್ ಪೈಲಟ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿದರು. ಅವರ ಪಾಲಿಗೆ ವೈಯಕ್ತಿಕ ಜೀವನಕ್ಕಿಂತ ಕರ್ತವ್ಯವೇ ಸದಾ ಮುಂದಾಗಿತ್ತು.

ಮದುವೆಗೆ ಸಿದ್ಧವಾಗಿದ್ದ ಕುಟುಂಬಕ್ಕೆ ಬರಸಿಡಿಲು

ಹಲವು ವರ್ಷಗಳ ಸೇವೆಯ ನಂತರ ಅನುಜ್ ಅಂತಿಮವಾಗಿ ವಿವಾಹವಾಗಲು ನಿರ್ಧರಿಸಿದ್ದರು. ಅವರ ಭಾವಿ ಪತ್ನಿ ಕೂಡ ಪೈಲಟ್ ಆಗಿದ್ದರು. ಎರಡೂ ಕುಟುಂಬಗಳು ಈ ಹೊಸ ಅಧ್ಯಾಯದ ಆರಂಭಕ್ಕಾಗಿ ಸಕಲ ಸಿದ್ಧತೆಗಳನ್ನ ನಡೆಸುತ್ತಿದ್ದವು.

ಮದುವೆಯ ಸಂಭ್ರಮದಿಂದ ಕಂಗೊಳಿಸಬೇಕಿದ್ದ ಮನೆಗೆ, ಅನುಜ್ ಅವರು ಹುತಾತ್ಮರಾದ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತು. ಮಗ, ಅಣ್ಣ ಮತ್ತು ಭವಿಷ್ಯದ ಸಂಗಾತಿಯನ್ನ ಕಳೆದುಕೊಂಡ ಕುಟುಂಬದ ರೋಧನ ಮುಗಿಲುಮುಟ್ಟಿತ್ತು.

ಫ್ಲೈಟ್ ಲೆಫ್ಟಿನೆಂಟ್ ಪುರ್ವೇಶ್ ದುರಗ್ಕರ್ ತ್ಯಾಗ ಸ್ಮರಣೀಯ

ಈ ದುರಂತದಲ್ಲಿ ಹುತಾತ್ಮರಾದ ಮತ್ತೊಬ್ಬ ವೀರ ಫ್ಲೈಟ್ ಲೆಫ್ಟಿನೆಂಟ್ ಪುರ್ವೇಶ್ ದುರಗ್ಕರ್ ಅವರ ಸೇವೆಯೂ ಸ್ಮರಣೀಯ. ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ತರಬೇತಿಯಲ್ಲಿ ಪಾಲ್ಗೊಳ್ಳುವ ಇಂತಹ ಯೋಧರ ಸಾಹಸ ಮತ್ತು ಸಮರ್ಪಣಾಭಾವಕ್ಕೆ ಇಡೀ ದೇಶ ಋಣಿಯಾಗಿದೆ.

ಮಿಲಿಟರಿ ಸೇವೆಯಲ್ಲಿರುವ ಅಪಾಯಗಳು ಕೇವಲ ಗಡಿಗೆ ಮಾತ್ರ ಸೀಮಿತವಲ್ಲ. ದೈನಂದಿನ ತರಬೇತಿ ಕಾರ್ಯಾಚರಣೆಗಳು ಕೂಡ ಅಸಾಧಾರಣ ಧೈರ್ಯವನ್ನ ಹಾಗೂ ಜವಾಬ್ದಾರಿಯನ್ನ ಕೇಳುತ್ತವೆ. ಸ್ಕ್ವಾಡ್ರನ್ ಲೀಡರ್ ಅನುಜ್ ವಶಿಷ್ಟ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪುರ್ವೇಶ್ ದುರಗ್ಕರ್ ಅವರ ತ್ಯಾಗ, ದೇಶಪ್ರೇಮ ಮತ್ತು ಸಮರ್ಪಣೆಯನ್ನ ರಾಷ್ಟ್ರ ಎಂದಿಗೂ ಮರೆಯುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+