Bengaluru Train: ಬೆಂಗಳೂರು - ಮುಂಬೈ ನಡುವೆ ದುರಂತೋ ಎಕ್ಸ್‌ಪ್ರೆಸ್ ರೈಲು ಸೇವೆಗೆ ರೈಲ್ವೆ ಸಿದ್ಧತೆ
ನವದೆಹಲಿ: ಬೆಂಗಳೂರು ಹಾಗೂ ಮುಂಬೈ ಮೆಟ್ರೋ ನಗರಗಳ ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡುವುದಕ್ಕೆ ಭಾರತೀಯ ರೈಲ್ವೆ ಮುಂದಾಗಿದೆ. ರೈಲ್ವೆ ಇಲಾಖೆಯು 18 ಗಂಟೆಗಳಲ್ಲಿ ಬೆಂಗಳೂರು ಮತ್ತು ಮುಂಬೈ ಸಂಪರ್ಕಿಸುವ ದುರಂತೋ ಎಕ್ಸ್‌ಪ್ರೆಸ್ ರೈಲು ಪರಿಚಯಿಸಲು ಚಿಂತನೆ ನಡೆಸಿದೆ ಎಂದು Deccan Herald ವರದಿ ಮಾಡಿದೆ.
ಇನ್ನು ಬೆಂಗಳೂರು ಹಾಗೂ ಮುಂಬೈ ನಗರಗಳ ನಡುವೆ ವಾರಕ್ಕೆ ಎರಡು ಬಾರಿ ಸೂಪರ್ ಫಾಸ್ಟ್ ರೈಲು ಅನುಮೋದಿಸಿದ ಕೆಲವೇ ವಾರಗಳ ನಂತರ ಈ ಪ್ರಸ್ತಾವನೆ ಬಂದಿದೆ.ಇದು ಅಸ್ತಿತ್ವದಲ್ಲಿರುವ ಉದ್ಯಾನ್ ಎಕ್ಸ್‌ಪ್ರೆಸ್‌ಗಿಂತ ಸುಮಾರು 24 ಗಂಟೆಗಳಲ್ಲಿ 1,209 ಕಿಮೀ ದೂರವನ್ನು ಕ್ರಮಿಸುತ್ತದೆ. ಬಂಗಾಳಿಯಲ್ಲಿ ದುರಂತೋ ಎಂದರೆ ವಿರಾಮವಿಲ್ಲದ ಸೇವೆ ಎಂರ್ಥ ಬರುತ್ತದೆ. ಇನ್ನು ರೈಲ್ವೆ ಮಂಡಳಿಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಸೇವೆಯನ್ನು ಪ್ರಾರಂಭಿಸುವುದಾಗಿ ತಿಳಿಸಿತ್ತು.

ಇನ್ನು ರೈಲು ಸಂಖ್ಯೆ 16553 ಶನಿವಾರ ಮತ್ತು ಮಂಗಳವಾರ ರಾತ್ರಿ 8.35 ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ರಾತ್ರಿ 8.40 ಕ್ಕೆ ಎಲ್‌ಟಿಟಿ ಮುಂಬೈ ತಲುಪಬೇಕಿತ್ತು. ರೈಲು ಸಂಖ್ಯೆ 16554, ಭಾನುವಾರ ಮತ್ತು ಬುಧವಾರದಂದು ರಾತ್ರಿ 11.15 ಕ್ಕೆ ಎಲ್‌ಟಿಟಿ ಮುಂಬೈನಿಂದ ಹೊರಟು ಮರುದಿನ ರಾತ್ರಿ 10.30ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪುವ ನಿರೀಕ್ಷೆ ಇತ್ತು.
ಈ ಸೇವೆಯು ಹುಬ್ಬಳ್ಳಿ ಮತ್ತು ಪುಣೆ ಸೇರಿದಂತೆ 14 ನಿಲುಗಡೆಗಳನ್ನು ಹೊಂದಿದೆ. ಅಲ್ಲದೇ 17 ಎಲ್‌ಎಚ್‌ಬಿ ಬೋಗಿಗಳೊಂದಿಗೆ ಎಸ್‌ಎಂವಿಟಿ ಬೆಂಗಳೂರಿನಲ್ಲಿ ಪ್ರಾಥಮಿಕ ನಿರ್ವಹಣೆಯೊಂದಿಗೆ ಕಾರ್ಯನಿರ್ವಹಿಸಬೇಕಾಗಿತ್ತು. ಆದರೆ, ನೈಋತ್ಯ ರೈಲ್ವೆ ನಿರ್ದಿಷ್ಟ ಅಧಿಸೂಚನೆಯನ್ನು ಹೊರಡಿಸದಿದ್ದರೂ, ಹೊಸ ಸೇವೆಯು ದೀರ್ಘ ಪ್ರಯಾಣದ ಸಮಯದ ಬಗ್ಗೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಈ ಮಾರ್ಗಗಳ ನಡುವೆ ದುರಂತೋ ಎಕ್ಸ್‌ಪ್ರೆಸ್ ರೈಲು
ಇನ್ನು ಭಾರತೀಯ ರೈಲ್ವೆಯು ಇದೀಗ ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಮೀರಜ್ ಹಾಗೂ ಪುಣೆ ಮಾರ್ಗ ಮೂಲಕ ಕೆಎಸ್‌ಆರ್ ಬೆಂಗಳೂರು ಮತ್ತು ಸಿಎಸ್‌ಎಂಟಿ ಮುಂಬೈ ನಡುವೆ ದುರಂತೋ ಎಕ್ಸ್‌ಪ್ರೆಸ್ ರೈಲು ಪರಿಚಯಿಸಲು ಮುಂದಾಗಿದೆ. ಈ ಸೇವೆಗಾಗಿ ಎರಡು ರೇಕ್‌ಗಳನ್ನು (ಹಲವಾರು ಬೋಗಿಗಳನ್ನು ಒಟ್ಟಾಗಿ ಜೋಡಿಸಿ, ಒಂದೇ ಎಂಜಿನ್‌ನಿಂದ ಎಳೆಯುವ ರೈಲು ಬಂಡಿ) ಪ್ರಸ್ತಾಪಿಸಲಾಗಿದೆ. ಪ್ರಾಥಮಿಕ ನಿರ್ವಹಣೆಯನ್ನು ಕೆಎಸ್‌ಆರ್ ಬೆಂಗಳೂರಿನಲ್ಲಿ ಮಾಡಲಾಗುತ್ತದೆ.
ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ರೈಲು ಸಂಜೆ 4.30 ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 10.30 ಕ್ಕೆ ಸಿಎಸ್‌ಎಂಟಿ ಮುಂಬೈ ತಲುಪುತ್ತದೆ. ಮರುದಿನ ಮಧ್ಯಾಹ್ನ 3 ಗಂಟೆಗೆ ಸಿಎಸ್‌ಎಂಟಿ ಮುಂಬೈನಿಂದ ಹೊರಟು ಬೆಳಿಗ್ಗೆ 9.30 ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪುತ್ತದೆ. ಈ ತಿಂಗಳ ಕೊನೆಯಲ್ಲಿ ಬೆಂಗಳೂರು - ಮುಂಬೈ ನಡುವಿನ ಈ ಹೊಸ ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಹಾಗೂ ಇನ್ನಷ್ಟು ನಿಖರ ಮಾಹಿತಿ ಲಭ್ಯವಾಗುವ ನಿರೀಕ್ಷೆ ಇದೆ.












Click it and Unblock the Notifications