ಇದೇ ಬುಧವಾರ (ಅ 8) ಖಗ್ರಾಸ ಚಂದ್ರಗ್ರಹಣ
ನವದೆಹಲಿ, ಅ 4: ಶಾಲಿವಾಹನ ಶಕ, ಜಯನಾಮ ಸಂವತ್ಸರದ ಶರದೃತು ಅಶ್ವಯುಜ ಶುಕ್ಲ ಹುಣ್ಣಿಮೆಯ ದಿನವಾದ ಇದೇ ಬರುವ ಬುಧವಾರ ಅಕ್ಟೋಬರ್ ಎಂಟರಂದು ಕೇತುಗ್ರಸ್ತ ಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ.
ಅಗಸದಲ್ಲಿ ಮೂರು ಗಂಟೆಗೂ ಹೆಚ್ಚುಕಾಲ ನಡೆಯುವ ವಿಸ್ಮಯ ಕರ್ನಾಟಕದಲ್ಲಿ ಗೋಚರಿಸುವ ಸಾಧ್ಯತೆಯಿಲ್ಲ. ಅಂದು ಮಧ್ಯಾಹ್ನ 2.44 ಗಂಟೆಗೆ ಆರಂಭಗೊಳ್ಳುವ ಗ್ರಹಣ ಸಂಜೆ 06.04ಕ್ಕೆ ಕೊನೆಗೊಳ್ಳಲಿದೆ. ಈ ಮೂರು ಗಂಟೆ ಇಪ್ಪತ್ತು ನಿಮಿಷಗಳ ಅವಧಿಯಲ್ಲಿ ಖಗ್ರಾಸ ಚಂದ್ರಗ್ರಹಣದ ಅವಧಿ ಸುಮಾರು 23 ನಿಮಿಷ.

ಈ ವರ್ಷದ ಏಪ್ರಿಲ್ ಹದಿನೈದಂದು ಚಂದ್ರಗ್ರಹಣ ಗೋಚರಿಸಿತ್ತು, ಅಕ್ಟೋಬರ್ ಎಂಟರಂದು ಸಂಭವಿಸುವ ಗ್ರಹಣ ವರ್ಷದಲ್ಲಿ ಎರಡನೆಯ ಮತ್ತು ಕೊನೆಯ ಚಂದ್ರಗ್ರಹಣವಾಗಲಿದೆ ಎಂದು ಉಜ್ಜೈನಿ ಜೀವಾಜಿ ವೀಕ್ಷಣಾಲಯದ ಮುಖ್ಯಸ್ಥ ಡಾ. ರಾಜೇಂದ್ರ ಪ್ರಸಾದ್ ಗುಪ್ತಾ ತಿಳಿಸಿದ್ದಾರೆ.
ಖಗ್ರಾಸ ಚಂದ್ರಗ್ರಹಣದ ವೇಳೆ ಸೂರ್ಯ, ಚಂದ್ರ ಮತ್ತು ಭೂಮಿ, ಈ ಮೂರೂ ಕಾಯಗಳು ಒಂದೇ ರೇಖೆಯ ಮೇಲೆ ಇರುತ್ತವೆ. ಖಗ್ರಾಸ ಚಂದ್ರಗ್ರಹಣವು ಈಶಾನ್ಯ ಭಾರತದ ಭಾಗದಲ್ಲಿ ಸ್ಪಷ್ಟವಾಗಿ ಗೋಚರಿಸಲಿವೆ. ಕರ್ನಾಟಕ ರಾಜ್ಯಕ್ಕೆ ಗ್ರಹಣ ಗೋಚರಿಸುವುದಿಲ್ಲವಾದ್ದರಿಂದ ಗ್ರಹಣಾಚರಣೆಯಿಲ್ಲ ಎಂದು ಪಂಚಾಂಗದಲ್ಲಿ ತಿಳಿಸಲಾಗಿದೆ.
ಗ್ರಹಣ ಗೋಚರಿಸುವ ಭಾರತದ ಪ್ರದೇಶಗಳು: ಅಗರ್ತಲ, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ದಿಸ್ಪುರ್, ದೆಹಲಿ, ಗ್ಯಾಂಗ್ಟಕ್, ಹೈದರಾಬಾದ್, ಇಂಫಾಲ್, ಇಟಾನಗರ, ಕೊಹಿಮಾ, ಕೊಲ್ಕತ್ತಾ, ಲಕ್ನೋ, ಪಾಟ್ನಾ, ರಾಯಪುರ.
ಇದೇ ಅಕ್ಟೋಬರ್ 23ರಂದು ಅಶ್ವಯುಜ ಕೃಷ್ಣಪಕ್ಷ ಅಮವಾಸ್ಯೆಯಂದು ಸೂರ್ಯಗ್ರಹಣ ಸಂಭವಿಸಲಿದೆ. ಆದರೆ ಇದು ಭಾರತದ ಯಾವ ಭಾಗದಲ್ಲೂ ಕಾಣಿಸುವುದಿಲ್ಲ.












Click it and Unblock the Notifications