Tomato Price: 3 ರೂಪಾಯಿಗೆ ಕುಸಿದ ಟೊಮೆಟೊ ಬೆಲೆ: ಬೇಸತ್ತು ರಸ್ತೆಗೆ ಸುರಿದ ರೈತರು
ಸಾರ್ವಕಾಲಿಕ ಗರಿಷ್ಠ ಬೆಲೆಗೆ ಏರಿಕೆ ಕಂಡಿದ್ದ ಟೊಮೆಟೊ ಈಗ ಭಾರಿ ಕುಸಿತ ಕಾಣುತ್ತಿದ್ದು ರೈತರಲ್ಲಿ ಆತಂಕ ಮೂಡಿಸಿದೆ. ಆಂಧ್ರಪ್ರದೇಶದ ಕರ್ನೂಲು ಮತ್ತು ನಂದ್ಯಾಲ ಜಿಲ್ಲೆಯಲ್ಲಿ ಟೊಮೆಟೊ ದರ ಕೆಜಿಗೆ 3 ರೂಪಾಯಿ ಆಗಿದ್ದು ರೈತರನ್ನು ನಷ್ಟದ ಸುಳಿಗೆ ಸಿಲುಕಿಸಿದೆ.
ಇಲ್ಲಿನ ಪತ್ತಿಕೊಂಡ ಮತ್ತು ಪೈಪಿಲಿಯ ಪ್ರಮುಖ ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 3 ರೂ.ಗೆ ಕುಸಿದಿದ್ದು, ಕರ್ನೂಲ್ ಮತ್ತು ನಂದ್ಯಾಲ ಜಿಲ್ಲೆಗಳ ರೈತರು ಕಂಗಾಲಾಗಿದ್ದಾರೆ. ಪಯಾಪಿಲಿ, ಧೋಣೆ, ಪತ್ತಿಕೊಂಡ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ತರಕಾರಿ ಮಾರುಕಟ್ಟೆ ಬಳಿ ಕೆಲವು ರೈತರು ಮಾರುಕಟ್ಟೆಗೆ ತಂದಿದ್ದ ಟೊಮೆಟೋವನ್ನು ರಸ್ತೆಗೆ ಸುರಿದಿದ್ದಾರೆ. ಇನ್ನೂ ಕೆಲವರು ಟೊಮೆಟೊ ಕಟಾವು ಕೂಡ ಮಾಡದೆ ಹೊಲದಲ್ಲೇ ಕೊಳೆಯಲು ಬಿಟ್ಟಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಮಡ್ನಪಲ್ಲಿಯ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೆಜಿಗೆ 170 ರೂ.ಗೆ ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ 200 ರೂ.ಗೆ ಮಾರಾಟವಾಗುತ್ತಿದ್ದು, ಹೆಚ್ಚಿನ ಬೆಲೆ ಇದ್ದಾಗ ಇಲ್ಲಿ ಹೆಚ್ಚಿನ ರೈತರು ಬೆಳೆ ಬೆಳೆದಿರಲಿಲ್ಲ, ಈಗ ಅನಂತಪುರದಿಂದ ತರಕಾರಿ ಬರಲಾರಂಭಿಸುತ್ತಿದ್ದಂತೆ ತರಕಾರಿ ಬೆಲೆ ಕುಸಿತ ಕಾಣುತ್ತಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
From over Rs 200/kg just two months ago to Rs 4 per kg: #Tomato prices have crashed as there is a glut in the market; farmers in #Kurnool #AndhraPradesh dump produce in open, unable to get remunerative prices to pay for even labour / transport #TomatoPriceCrashes @ndtv @ndtvindia pic.twitter.com/jtsaH2UkPS
— Uma Sudhir (@umasudhir) September 7, 2023
ಒಂದೇ ದಿನದಲ್ಲಿ 3 ರೂಪಾಯಿಗೆ ಕುಸಿತ
ರಾಜ್ಯದಲ್ಲಿಯೇ ಅತಿ ದೊಡ್ಡದಾದ ಪತ್ತಿಕೊಂಡ ಮಾರುಕಟ್ಟೆ ಯಾರ್ಡ್, ಆಗಸ್ಟ್ 25 ರಂದು ಟೊಮೇಟೊದ ಮೊದಲ ಇಳುವರಿ ಪಡೆದುಕೊಂಡಿತು. ಆಗ ಪ್ರತಿ ಕೆಜಿ ಟೊಮೆಟೊ ಸರಾಸರಿ 15 ರೂಪಾಯಿಯಂತೆ ಮತ್ತು ಗರಿಷ್ಠ 30 ರೂಪಾಯಿವರೆಗೆ ಮಾರಾಟವಾಗಿತ್ತು. ಕಡಿಮೆ ಗುಣಮಟ್ಟದ ಟೊಮ್ಯಾಟೊ 20 ರೂ.ಗೆ ಮಾರಾಟವಾಯಿತು. ಮುಂದಿನ ಕೆಲವು ದಿನಗಳಲ್ಲಿ, ಮಾರುಕಟ್ಟೆಗೆ ಟೊಮೆಟೋ ಆವಕ ಹೆಚ್ಚಾಯಿತು, ಇದು ಬೆಲೆಯಲ್ಲಿ ಕುಸಿತಕ್ಕೆ ಕಾರಣವಾಯಿತು.
ಗುರುವಾರ ಸುಮಾರು 800 ಕ್ವಿಂಟಾಲ್ ಟೊಮೆಟೊ ಬಂದಿದ್ದು, ಗುಣಮಟ್ಟದ ಆಧಾರದ ಮೇಲೆ ಕ್ವಿಂಟಲ್‌ಗೆ 1,200 ರಿಂದ 600 ರೂ.ಗೆ ಕುಸಿತ ಕಂಡಿತ್ತು. ಬುಧವಾರದ ಕ್ವಿಂಟಲ್‌ಗೆ 900 ರೂ ಆಗಿದ್ದರೆ ಮುಂದಿನ 24 ಗಂಟೆಗಳ ಅವಧಿಯಲ್ಲಿ ಟೊಮೆಟೊ ಬೆಲೆ ಕೆಜಿಗೆ 3 ರೂ.ಗೆ ಕಡಿಮೆಯಾಗಿದೆ.
ನಷ್ಟದ ಭೀತಿಯಲ್ಲಿ ರೈತರು
ಕರ್ನಾಟಕ, ತೆಲಂಗಾಣ, ತಮಿಳುನಾಡು, ಒರಿಡ್ಶಾ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ರಫ್ತು ಮಾಡುವ ಸ್ಥಳೀಯ ಮಾರುಕಟ್ಟೆಗಳಿಗೆ ಹೆಚ್ಚಿನ ಪೂರೈಕೆ ಇರುವ ಕಾರಣ ಬೆಲೆ ಕುಸಿತವಾಗಿದೆ. ''ಬಾಡಿಗೆ ವಾಹನಗಳಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಿದ ನಂತರ ಕೆಜಿಗೆ 6 ರೂ.ಗಿಂತ ಕಡಿಮೆ ಸಿಗುತ್ತಿದೆ. ನಾವು ಅವುಗಳನ್ನು ಹಿಂತಿರುಗಿಸಲು ಅಥವಾ ಕಡಿಮೆ ಬೆಲೆಗೆ ಮಾರಾಟ ಮಾಡಲು ಸಾಧ್ಯವಿಲ್ಲ. ಹೀಗಾಗಿ ಟೊಮೆಟೊವನ್ನು ರಸ್ತೆಯಲ್ಲೇ ಬಿಸಾಡುತ್ತಿದ್ದೇವೆ" ಎಂದು ರೈತ ರಾಮಾಂಜನೇಯುಲು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ
ಈ ವರ್ಷ ಜಿಲ್ಲೆಯಲ್ಲಿ 6,500 ಹೆಕ್ಟೇರ್‌ನಲ್ಲಿ ಟೊಮೆಟೊ ಬೆಳೆಯಲಾಗಿದ್ದು, ಪ್ರತಿ ರೈತರು ಎಕರೆಗೆ 30 ಸಾವಿರ ರೂಪಾಯಿಗಳಂತೆ ಖರ್ಚು ಮಾಡಿದ್ದಾರೆ. ಬೆಲೆ ಪಾತಾಳಕ್ಕೆ ಕುಸಿದಿದ್ದು ಭಾರಿ ನಷ್ಟದ ಭೀತಿಯಲ್ಲಿದ್ದಾರೆ.
ರೈತರು ಇಂತಹ ಪರಿಸ್ಥಿತಿ ಎದುರಿಸುತ್ತಿರುವುದು ಇದೇ ಮೊದಲಲ್ಲ ಎಂದು ಪತ್ತಿಕೊಂಡ ಗದ್ದೆರಳ್ಳದ ಲಕ್ಷ್ಮೀ ನವೀನ್ ಗುಪ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಪ್ರತಿಭಟನೆ ನಡೆಸಿದರೂ ಸರ್ಕಾರ ರೈತರ ರಕ್ಷಣೆಗೆ ಮುಂದಾಗುತ್ತಿಲ್ಲ ಎಂದು ದೂರಿದರು. ಟೊಮೆಟೊದ ವಿವಿಧ ಉತ್ಪನ್ನಗಳ ತಯಾರಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಕೂಡ ಟೊಮೆಟೊ ಬೆಲೆ ಭಾರಿ ಕುಸಿತ ಕಂಡಿದ್ದು, ಮುಂದಿನ ದಿನಗಳಲ್ಲಿ ಒಂದಂಕಿಗೆ ಇಳಿಯುವ ಬಗ್ಗೆ ರೈತರು ಆತಂಕಗೊಂಡಿದ್ದಾರೆ. ಆಗಸ್ಟ್‌ನಲ್ಲಿ ಮಳೆಯಾಗದ ಕಾರಣ ಬೆಳೆ ಕೂಡ ನಷ್ಟವಾದಗೆ ಬಂಪರ್ ಇಳುವರಿ ಬಂದಿದೆ. ಅಲ್ಲದೆ ಟೊಮೆಟೊ ದರ ಗಗನಕ್ಕೇರಿದ ಕಾರಣ ಹೆಚ್ಚಿನ ರೈತರು ಟೊಮೆಟೊ ಬೆಳೆಯಲು ಮುಂದಾಗಿದ್ದು ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.












Click it and Unblock the Notifications